Advertisement
ಶನಿವಾರ ನಡೆಯುವ ಡೆಲ್ಲಿ-ಮುಂಬೈ ಪಂದ್ಯದ ಫಲಿತಾಂಶ ಆರ್‌ಸಿಬಿ ಪಾಲಿಗೆ ನಿರ್ಣಾಯಕ. ಇಲ್ಲಿ ಡೆಲ್ಲಿ ಸೋತರಷ್ಟೇ ಡು ಪ್ಲೆಸಿಸ್ ಪಡೆಗೆ ಮುನ್ನಡೆ ಸಾಧ್ಯ. ಅಕಸ್ಮಾತ್ ಪಂತ್ ಪಡೆ ಜಯಿಸಿದರೆ ಅದರ ಅಂಕ ಕೂಡ 16 ಆಗುತ್ತದೆ. ಆದರೆ ರನ್‌ರೇಟ್‌ನಲ್ಲಿ ಮುಂದಿರುವುದರಿಂದ ಡೆಲ್ಲಿ ಪ್ಲೇ ಆಫ್ ಪ್ರವೇಶಿಸಲಿದೆ. ಆರ್‌ಸಿಬಿ ಅಂತಿಮ ಲೀಗ್ ಪಂದ್ಯ ಗೆದ್ದರೂ ರನ್‌ರೇಟ್ ಮೈನಸ್‌ನಲ್ಲೇ ಇರುವುದೊಂದು ಹಿನ್ನಡೆಯಾಗಿದೆ.
Related Articles
Advertisement
ಕೂಟದುದ್ದಕ್ಕೂ ತೀವ್ರ ಬ್ಯಾಟಿಂಗ್ ಬರಗಾಲ ಅನುಭವಿಸಿದ ಕೊಹ್ಲಿ ಇಲ್ಲಿ 54 ಎಸೆತಗಳಿಂದ 73 ರನ್ ಕೊಡುಗೆ ಸಲ್ಲಿಸಿದರು. ಈ ಆಕರ್ಷಕ ಇನ್ನಿಂಗ್ಸ್ ವೇಳೆ 8 ಬೌಂಡರಿ ಹಾಗೂ 2 ಸಿಕ್ಸರ್ ಬಾರಿಸಿದರು. ಜತೆಗೆ ಆರ್‌ಸಿಬಿ ಪರ 7 ಸಾವಿರ ಟಿ20 ರನ್ ಪೂರ್ತಿಗೊಳಿಸಿದರು.
ನಾಯಕ ಡು ಪ್ಲೆಸಿಸ್ ಗಳಿಕೆ 38 ಎಸೆತಗಳಿಂದ 44 ರನ್ (5 ಬೌಂಡರಿ). ಆಲ್‌ರೌಂಡ್ ಪ್ರದರ್ಶನವಿತ್ತ ಗ್ಲೆನ್ ಮ್ಯಾಕ್ಸ್‌ವೆಲ್ 18 ಎಸೆತಗಳಿಂದ ಅಜೇಯ 40 ರನ್ ಹೊಡೆದರು (5 ಬೌಂಡರಿ, 2 ಸಿಕ್ಸರ್).
ಪಾಂಡ್ಯ ಅರ್ಧ ಶತಕ :
ನಾಯಕ ಹಾರ್ದಿಕ್ ಪಾಂಡ್ಯ ಅವರ ಅಜೇಯ 62 ರನ್ ನೆರವಿನಿಂದ ಗುಜರಾತ್‌ಗೆ ಸವಾಲಿನ ಮೊತ್ತ ಸಾಧ್ಯವಾಯಿತು. 4ನೇ ಕ್ರಮಾಂಕದಲ್ಲಿ ಆಡಲಿಳಿದ ಪಾಂಡ್ಯ 47 ಎಸೆತ ನಿಭಾಯಿಸಿ ನಿಂತರು. ಸಿಡಿಸಿದ್ದು 4 ಫೋರ್ ಹಾಗೂ 3 ಸಿಕ್ಸರ್. ಡೇವಿಡ್ ಮಿಲ್ಲರ್ (34) ಮತ್ತು ವೃದ್ಧಿಮಾನ್ ಸಾಹಾ (31) ಗುಜರಾತ್ ಸರದಿಯ ಮತ್ತಿಬ್ಬರು ಪ್ರಮುಖ ಸ್ಕೋರರ್.
ಆರ್‌ಸಿಬಿ 7 ಬೌಲರ್‌ಗಳನ್ನು ದಾಳಿಗೆ ಇಳಿಸಿತು. ಆದರೆ ಹರ್ಷಲ್ ಪಟೇಲ್ ಗಾಯಾಳಾದದ್ದು ತುಸು ಹಿನ್ನಡೆಯಾಗಿ ಪರಿಣಮಿಸಿತು. ಅವರು ಒಂದೇ ಓವರ್ ಎಸೆದರು.
ಭರವಸೆಯ ಆರಂಭ :
ಸಿರಾಜ್ ಬದಲು ಆಡುವ ಅವಕಾಶ ಪಡೆದ ಸಿದ್ಧಾರ್ಥ್ ಕೌಲ್ ಅವರ ಮೊದಲ ಎಸೆತವನ್ನೇ ಬೌಂಡಿರಿಗೆ ಅಟ್ಟುವ ಮೂಲಕ ವೃದ್ಧಿಮಾನ್ ಸಾಹಾ ಗುಜರಾತ್‌ಗೆ ಭರವಸೆಯ ಆರಂಭ ಒದಗಿಸಿದರು. ಆ ಓವರ್‌ನಲ್ಲಿ ಸಿಕ್ಸರ್ ಕೂಡ ಬಿತ್ತು. 14 ರನ್ ನೀಡಿದ ಕೌಲ್ ದುಬಾರಿಯಾಗಿ ಪರಿಣಮಿಸಿದರು.
ಮುಂದಿನ 3 ಓವರ್‌ಗಳಲ್ಲಿ ಆರ್‌ಸಿಬಿ ಉತ್ತಮ ನಿಯಂತ್ರಣ ಸಾಧಿಸಿತು. ಜೋಶ್ ಹ್ಯಾಝಲ್‌ವುಡ್ ಮೊದಲ ಬ್ರೇಕ್ ಕೂಡ ಒದಗಿಸಿದರು. ಶುಭಮನ್ ಗಿಲ್ ಕೇವಲ ಒಂದು ರನ್ ಮಾಡಿ ಮ್ಯಾಕ್ಸ್‌ವೆಲ್‌ಗೆ ಕ್ಯಾಚ್ ನೀಡಿದರು. ಆದರೆ ಜೋಶ್ ಅವರ ಮುಂದಿನ ಓವರ್‌ನಲ್ಲಿ 15 ರನ್ ಸೋರಿಹೋಯಿತು. ಕಾಂಗರೂ ನಾಡಿನವರೇ ಆದ ಮ್ಯಾಥ್ಯೂ ವೇಡ್ ಸಿಡಿದು ನಿಂತರು. ಆದರೆ ಆಸ್ಟ್ರೇಲಿಯದ ಮತ್ತೋರ್ವ ಬೌಲರ್ ಮ್ಯಾಕ್ಸ್ ವೆಲ್ ಈ ಜೋಡಿಯನ್ನು ಬೇರ್ಪಟಿಸುವಲ್ಲಿ ಯಶಸ್ವಿಯಾದರು. 16 ರನ್ ಮಾಡಿದ ವೇಡ್ ಲೆಗ್ ಬಿಫೋರ್ ಬಲೆಗೆ ಬಿದ್ದರು. ಅನಂತರದ 4 ಎಸೆತಗಳಲ್ಲಿ ಪಾಂಡ್ಯ ಅವರಿಗೆ ರನ್ ಗಳಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಇದು ವಿಕೆಟ್-ಮೇಡನ್ ಆಯಿತು. ಗುಜರಾತ್‌ನ ಪವರ್ ಪ್ಲೇ ಸ್ಕೋರ್ 2ಕ್ಕೆ 38 ರನ್.
9ನೇ ಓವರ್ ತನಕ ಕ್ರೀಸ್ ಆಕ್ರಮಿಸಿಕೊಂಡ ಸಾಹಾ ರನೌಟ್ ಆಗಿ ವಾಪಸಾಗಬೇಕಾಯಿತು. ಸಾಹಾ ಗಳಿಕೆ 22 ಎಸೆತಗಳಿಂದ 31 ರನ್. ಸಿಡಿಸಿದ್ದು 4 ಫೋರ್, ಒಂದು ಸಿಕ್ಸರ್. ಅರ್ಧ ಇನ್ನಿಂಗ್ಸ್ ಮುಗಿಯುವಾಗ ಗುಜರಾತ್ 3 ವಿಕೆಟಿಗೆ 72 ರನ್ ಮಾಡಿತ್ತು. ಆಗ ಪಾಂಡ್ಯ-ಡೇವಿಡ್ ಮಿಲ್ಲರ್ ಕ್ರೀಸ್‌ನಲ್ಲಿದ್ದರು. 15ನೇ ಓವರ್ ತನಕವೂ ಈ ಜೋಡಿಯ ಆಟ ಮುಂದುವರಿಯಿತು. ಆರ್‌ಸಿಬಿಗೆ ಯಾವುದೇ ಯಶಸ್ಸು ಸಿಗಲಿಲ್ಲ. ಗುಜರಾತ್ ಸ್ಕೋರ್ 3 ವಿಕೆಟಿಗೆ 118ಕ್ಕೆ ಏರಿತು.
ಪಾಂಡ್ಯ-ಮಿಲ್ಲರ್ 4ನೇ ವಿಕೆಟಿಗೆ 47 ಎಸೆತಗಳಿಂದ 61 ರನ್ ಪೇರಿಸಿ ಮೊತ್ತವನ್ನು ಏರಿಸಿದರು. 17ನೇ ಓವರ್‌ನಲ್ಲಿ ಹಸರಂಗ ರಿಟರ್ನ್ ಕ್ಯಾಚ್ ಮೂಲಕ ಮಿಲ್ಲರ್‌ಗೆ ಪೆವಿಲಿಯನ್ ಹಾದಿ ತೋರಿಸಿ ಈ ಜೋಡಿಯನ್ನು ಬೇರ್ಪಡಿಸಿದರು. ಮಿಲ್ಲರ್ 25 ಎಸೆತ ನಿಭಾಯಿಸಿ 35 ರನ್ ಹೊಡೆದರು (3 ಸಿಕ್ಸರ್). ಡೆತ್ ಓವರ್‌ಗಳಲ್ಲಿ ಭರ್ತಿ 50 ರನ್ ಒಟ್ಟುಗೂಡಿಸಿತು. ರಶೀದ್ ಖಾನ್ 6 ಎಸೆತಗಳಿಂದ ಅಜೇಯ 19 ರನ್ ಬಾರಿಸಿದರು (1 ಬೌಂಡರಿ, 2 ಸಿಕ್ಸರ್).
ಸಿರಾಜ್ ಬದಲು ಸಿದ್ಧಾರ್ಥ್ :
ಈ ಸರಣಿಯಲ್ಲಿ ಅಷ್ಟೇನೂ ಪರಿಣಾಮ ಬೀರದ ಮೊಹಮ್ಮದ್ ಸಿರಾಜ್ ಬದಲು ಸಿದ್ಧಾರ್ಥ್ ಕೌಲ್ ಅವರನು ಆರ್‌ಸಿಬಿ ಆಡುವ ಬಳಗಕ್ಕೆ ಸೇರಿಸಿಕೊಂಡಿತು. ಗುಜರಾತ್ ಪರ ಲಾಕಿ ಫರ್ಗ್ಯುಸನ್‌ಗೆ ಮರಳಿ ಅವಕಾಶ ಸಿಕ್ಕಿತು. ಅಲ್ಜಾರಿ ಜೋಸೆಫ್ ಹೊರಗುಳಿದರು.