ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಅಂಗಳದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿ ಪ್ಲೇ ಆಫ್ ಹಂತಕ್ಕೇರಿತು. ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿದ ಬೆಂಗಳೂರು ಬಾಯ್ಸ್, ಹಾಲಿ ಚಾಂಪಿಯನ್ ತಂಡವನ್ನು ಸೋಲಿಸಿ ಮುಂದಿನ ಹಂತಕ್ಕೇರಿದರು.
ಮಹತ್ವದ ಪಂದ್ಯದಲ್ಲಿ ಆರ್ ಸಿಬಿ 27 ರನ್ ಅಂತರದ ಗೆಲುವು ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ಐದು ವಿಕೆಟ್ ನಷ್ಟಕ್ಕೆ 218 ರನ್ ಗಳಿಸಿದರೆ, ಸಿಎಸ್ ಕೆ ತಂಡವು 191 ರನ್ ಮಾತ್ರ ಗಳಿಸಲು ಶಕ್ತವಾಯಿತು.
ಪಂದ್ಯದ ಬಳಿಕ ಆರ್ ಸಿಬಿ ಡ್ರೆಸ್ಸಿಂಗ್ ರೂಂನಲ್ಲಿ ಮಾತನಾಡಿದ ಬ್ಯಾಟರ್- ಕೀಪರ್ ದಿನೇಶ್ ಕಾರ್ತಿಕ್, ತಂಡದ ಗೆಲುವಿನಲ್ಲಿ ಎದುರಾಳಿ ತಂಡದ ಆಟಗಾರ ಮಹೇಂದ್ರ ಸಿಂಗ್ ಧೋನಿ ಪಾತ್ರವನ್ನು ಹೇಳಿದರು.
“ಎಂಎಸ್ ಧೋನಿ ಆ 110 ಮೀಟರ್ ಸಿಕ್ಸನ್ನು ಚಿನ್ನಸ್ವಾಮಿಯ ಹೊರಗೆ ಬಾರಿಸಿದ್ದು ಇಂದಿನ ಅತ್ಯುತ್ತಮ ಸಂಗತಿಯಾಗಿದೆ, ಅದು ನಮಗೆ ಹೊಸ ಚೆಂಡನ್ನು ನೀಡಿತು, ಅದು ನಮಗೆ ಸಹಾಯ ಮಾಡಿತು” ಎಂದು ಕಾರ್ತಿಕ್ ವೀಡಿಯೊದಲ್ಲಿ ಹೇಳಿದ್ದಾರೆ.
ಮೈದಾನದ ತೇವಾಂಶದ ಕಾರಣದಿಂದ ಚೆಂಡು ಒದ್ದೆಯಾಗಿತ್ತು. ಇದು ಆರ್ ಸಿಬಿ ಬೌಲರ್ ಗಳಿಗೆ ಬಾಲ್ ಹಾಕಲು ತೊಂದರೆ ನೀಡುತ್ತಿತ್ತು. ಹೀಗಾಗಿ ಕೆಲವು ಫುಲ್ ಟಾಸ್, ಹೈ ನೋಬಾಲ್ ಗಳು ಬಿದ್ದವು. ನಾಯಕ ಫಾಫ್, ವಿರಾಟ್ ಚೆಂಡು ಬದಲಾವಣೆಗೆ ಕೇಳಿಕೊಂಡರೂ ಅಂಪೈರ್ ನೀಡಲಿಲ್ಲ.
ಕೊನೆಯ ಓವರ್ ನಲ್ಲಿ 17 ರನ್ ಬೇಕಿದ್ದಾಗ ಮೊದಲ ಎಸೆತವನ್ನು ಧೋನಿ ಸಿಕ್ಸರ್ ಬಾರಿಸಿದರು. 110 ಮೀಟರ್ ಸಾಗಿದ ಚೆಂಡು ಸ್ಟೇಡಿಯಂನಿಂದ ಹೊರಬಿತ್ತು. ಹೀಗಾಗಿ ಬೇರೆ ಚೆಂಡನ್ನು ನೀಡಲಾಯಿತು. ಇದು ಒದ್ದೆಯಿಲ್ಲದ ಕಾರಣ ಬೌಲರ್ ಯಶ್ ದಯಾಳ್ ಗೆ ಸಹಾಯ ನೀಡಿತು. ಮುಂದಿನ ಎಸೆತದಲ್ಲಿ ಧೋನಿ ಔಟಾದರು.