ಹೈದರಾಬಾದ್: ಮುಂದಿನ ಆವೃತ್ತಿಯ ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್) ಕೂಟಕ್ಕೆ ಎಲ್ಲಾ ತಂಡಗಳು ಸರ್ವ ಸಿದ್ದತೆ ನಡೆಸುತ್ತಿದೆ. ಫೆಬ್ರವರಿಯಲ್ಲಿ ನಡೆಯಲಿರುವ ಮೆಗಾ ಹರಾಜಿಗೆ ಫ್ರಾಂಚೈಸಿಗಳು ತಯಾರಿ ನಡೆಸುತ್ತಿದೆ. ಈ ಮಧ್ಯೆ ಸನ್ ರೈಸರ್ಸ್ ಹೈದರಾಬಾದ್ ತಂಡವು ಲೆಜೆಂಡರಿ ಆಟಗಾರರಾದ ಬ್ರಿಯಾನ್ ಲಾರಾ ಮತ್ತು ಡೇಲ್ ಸ್ಟೇನ್ ಅವರನ್ನು ಸೇರಿಸಿಕೊಂಡಿದೆ.
ಮೆಗಾ ಹರಾಜಿಗೂ ಮುನ್ನ ಸನ್ ರೈಸರ್ಸ್ ಹೈದರಾಬಾದ್ ತನ್ನ ಥಿಂಕ್ ಟ್ಯಾಂಕ್ ನ್ನು ಪ್ರಕಟಿಸಿದೆ. ವೆಸ್ಟ್ ಇಂಡೀಸ್ ಬ್ಯಾಟಿಂಗ್ ದೈತ್ಯ ಬ್ರಿಯಾನ್ ಲಾರಾ ಅವರು ತಂಡದ ಕಾರ್ಯತಂತ್ರದ ಸಲಹೆಗಾರ ಮತ್ತು ಬ್ಯಾಟಿಂಗ್ ಕೋಚ್ ಆಗಿ ನೇಮವಾಗಿದ್ದಾರೆ. ದಕ್ಷಿಣ ಆಫ್ರಿಕದ ಮಾಜಿ ಬೌಲರ್ ಡೇಲ್ ಸ್ಟೇನ್ ಅವರು ಎಸ್ ಆರ್ ಎಚ್ ತಂಡದ ವೇಗದ ಬೌಲಿಂಗ್ ಕೋಚ್ ಆಗಿ ನೇಮಕವಾಗಿದ್ದಾರೆ.
ಉಳಿದಂತೆ ಟಾಮ್ ಮೂಡಿ ಅವರು ತಂಡದ ಮುಖ್ಯ ಕೋಚ್ ಆಗಿದ್ದಾರೆ. ಕಳೆದ ಸೀಸನ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೋಚ್ ಆಗಿದ್ದ ಸೈಮನ್ ಕ್ಯಾಟಿಚ್ ಅವರು ಹೈದರಾಬಾದ್ ತಂಡದ ಸಹಾಯಕ ಕೋಚ್ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ:ಹಳ್ಳಿ ಯುವಕನ ಪ್ರೋ ಕಬಡ್ಡಿ ಯಾನ: ಆರ್ಥಿಕ ಬಡತನ ಮೆಟ್ಟಿ ನಿಂತ ಸಚಿನ್ ‘ಯು ಮುಂಬಾ’ ಪರ ಆಟ
ಉಳಿದಂತೆ ಸ್ಪಿನ್ ದಿಗ್ಗಜ ಮುತ್ತಯ್ಯ ಮುರಳೀಧರನ್ ಅವರು ಸ್ಪಿನ್ ಕೋಚ್ ಮತ್ತು ಹೇಮಾಂಗ್ ಬದಾನಿ ಅವರು ಫೀಲ್ಡಿಂಗ್ ಕೋಚ್ ಆಗಿ ನೇಮಕವಾಗಿದ್ದಾರೆ.
ಕಳೆದ ಸೀಸನ್ ನಲ್ಲಿ ಕಳಪೆ ಪ್ರದರ್ಶನ ತೋರಿದ್ದ ಹೈದರಾಬಾದ್ ಈ ಬಾರಿ ನಾಯಕ ಕೇನ್ ವಿಲಿಯಮ್ಸನ್, ವೇಗಿ ಉಮ್ರಾನ್ ಮಲಿಕ್ ಮತ್ತು ಆಲ್ ರೌಂಡರ್ ಅಬ್ದುಲ್ ಸಮದ್ ಅವರನ್ನು ರಿಟೈನ್ ಮಾಡಿಕೊಂಡಿದೆ. ಸ್ಟಾರ್ ಆಟಗಾರರಾದ ಡೇವಿಡ್ ವಾರ್ನರ್, ರಶೀದ್ ಖಾನ್ ಅವರು ತಂಡ ತೊರೆದಿದ್ದಾರೆ.