ಮುಂಬಯಿ: ವೈಯಕ್ತಿಕ ಸಾಲ, ಸಣ್ಣಪುಟ್ಟ ಸಾಲಗಳು ಮತ್ತು ಇತರೆ ಸಾಲಗಳ ಮೇಲೆ ವಿಧಿಸಲಾಗುತ್ತಿದ್ದ ಪೆನಾಲ್ ಬಡ್ಡಿ ಅಥವಾ ಶುಲ್ಕಗಳನ್ನು ವಿಧಿಸದಂತೆ ಭಾರತೀಯ ರಿಸರ್ವ್ ಬ್ಯಾಂಕ್ ಎಲ್ಲ ಬ್ಯಾಂಕು ಗಳು ಮತ್ತು ಬ್ಯಾಂಕೇತರ ಸಂಸ್ಥೆಗಳಿಗೆ ಸೂಚನೆ ನೀಡಿದೆ.
ಶುಕ್ರವಾರ ಈ ಸಂಬಂಧ ಆದೇಶ ಹೊರಡಿಸಲಾಗಿದ್ದು, ವೈಯಕ್ತಿಕ ಸಾಲವೂ ಸೇರಿದಂತೆ ಇತರೆ ಸಾಲ ಪಡೆದವರು, ಇಎಂಐ ತಪ್ಪಿಸಿಕೊಂಡರೆ, ಇಂಥವರಿಗೆ ಪೆನಾಲ್ ಬಡ್ಡಿ ಅಥವಾ ದಂಡ ರೂಪದಲ್ಲಿ ಶುಲ್ಕ ವಿಧಿಸಲಾಗುತ್ತಿತ್ತು. ಆದರೆ, ಈ ನಡೆ ತಪ್ಪು ಎಂದಿರುವ ಆರ್‌ಬಿಐ, ಈ ಪೆನಾಲ್ ಬಡ್ಡಿ ಅಥವಾ ಶುಲ್ಕಗಳು ಸಾಲ ಪಡೆದ ಗ್ರಾಹಕರನ್ನು ಎಚ್ಚರಿಸುವಂತೆ ಇರಬೇಕೇ ಹೊರತು, ಈ ಮೂಲಕ ಬ್ಯಾಂಕುಗಳು ಬಂಡವಾಳ ಕ್ರೋಢೀಕರಣ ಮಾಡಿಕೊಳ್ಳುವಂತಿರಬಾರದು ಎಂದು ಹೇಳಿದೆ. ಅಲ್ಲದೆ, ಗ್ರಾಹಕರು ಪಡೆದಿರುವ ಸಾಲಕ್ಕೆ ಮುಂಗಡವಾಗಿಯೇ ಬಡ್ಡಿ ವಿಧಿಸಲಾಗಿದ್ದು, ಇದರ ಮೇಲೆ ಮತ್ತೂಂದು ಬಡ್ಡಿ ವಿಧಿಸಬಾರದು ಎಂದೂ ಹೇಳಿದೆ. ಈ ನಿರ್ಧಾರ 2024ರ ಜ.1ರಿಂದ ಜಾರಿಗೆ ಬರಲಿದೆ.
ಬಡ್ಡಿ ಹೆಚ್ಚಳದ ಬಗ್ಗೆ ಮಾಹಿತಿ ಕೊಡಿ: 2022ರ ಮೇ ತಿಂಗಳಿಂದಲೂ ಆರ್‌ಬಿಐ ರೆಪೋ ಬಡ್ಡಿ ದರ ಹೆಚ್ಚಳ ಮಾಡಿದ್ದು, ಇದರ ಅನುಗುಣವಾಗಿ ಬ್ಯಾಂಕುಗಳು ಗ್ರಾಹಕರ ಸಾಲದ ಮೇಲಿನ ಬಡ್ಡಿದರವನ್ನೂ ಹೆಚ್ಚಳ ಮಾಡಿವೆ. ಆದರೆ, ಹಲವಾರು ಗ್ರಾಹಕರು ಈ ಬಗ್ಗೆ ದೂರು ನೀಡಿದ್ದು, ತಮಗೆ ಅರಿವಿಲ್ಲದೇ ಇಎಂಐ ಸಂಖ್ಯೆ ಹೆಚ್ಚಳವಾಗಿದೆ ಎಂದಿದ್ದಾರೆ. ಇದನ್ನು ಮನಗಂಡಿರುವ ಆರ್‌ಬಿಐ, ಇನ್ನು ಮುಂದೆ ಬಡ್ಡಿ ದರ ಹೆಚ್ಚಳವಾದಾಗ, ಪ್ರತಿಯೊಬ್ಬ ಗ್ರಾಹಕನಿಗೂ ಮಾಹಿತಿ ನೀಡಬೇಕು. ಜತೆಗೆ, ಬಡ್ಡಿ ದರ ಎಷ್ಟು ಹೆಚ್ಚಳವಾಗಿದೆ? ಇಎಂಐ ಪ್ರಮಾಣ ಎಷ್ಟು ಹೆಚ್ಚಾಗಲಿದೆ? ಅಥವಾ ಇಎಂಐ ಅವಧಿ ಎಷ್ಟು ವಿಸ್ತರಣೆಯಾಗಿದೆ ಎಂಬ ಬಗ್ಗೆಯೂ ಮಾಹಿತಿ ಕೊಡಬೇಕು ಎಂದಿದೆ.
ದಿಢೀರ್ ಸಾಲಕ್ಕೆ ವೇದಿಕೆ: ಆರ್‌ಬಿಐ ಸಾರ್ವಜನಿಕ ತಾಂತ್ರಿಕ ಸಾಲ ವೇದಿಕೆ ಎಂಬ ಹೊಸ ವ್ಯವಸ್ಥೆ ರೂಪಿಸಿದ್ದು, ಇದನ್ನು ಪ್ರಾಯೋಗಿಕವಾಗಿ ಜಾರಿ ಮಾಡಲು ಮುಂದಾಗಿದೆ. ಈ ಮೂಲಕ ಸಣ್ಣಪುಟ್ಟ ರೂಪದಲ್ಲಿ ಗ್ರಾಹಕರು ದಿಢೀರನೇ ಸಾಲ ಪಡೆಯಬಹುದಾಗಿದೆ. ಅಂದರೆ, ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು, ಕಿಸಾನ್ ಕಾರ್ಡ್‌ಗಳ ಮೂಲಕ 1.60 ಲಕ್ಷ ರೂ.ವರೆಗೆ ದಿಢೀರ್ ಸಾಲ ನೀಡಬಹುದು. ಅಷ್ಟೇ ಅಲ್ಲ, ವೈಯಕ್ತಿಕ ಮತ್ತು ಗೃಹ ಸಾಲ ನೀಡಲು ಈ ವೇದಿಕೆ ಬಳಸಿಕೊಳ್ಳಬಹುದು.
ಸಾಲ ನೀಡುವವರು ಮತ್ತು ಸಾಲ ಪಡೆಯುವವರ ನ ಡುವೆ ಈ ವೇದಿಕೆಯ ಮೂಲಕ ಸಂಪರ್ಕ ಕಲ್ಪಿಸ ಲಾಗುತ್ತದೆ. ಇದನ್ನು ಆರ್‌ಬಿಐನ ನಾವೀನ್ಯತಾ ಸಂಸ್ಥೆ ರೂಪಿಸಿದೆ.