Advertisement

ರಾಯಣ್ಣ ಬ್ರಿಗೇಡ್‌ಗೆ ಬ್ರೇಕ್‌ ಹಾಕುವುದಿಲ್ಲ

03:45 AM Feb 12, 2017 | Team Udayavani |

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮತ್ತು ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ ನಡುವಿನ ಭಿನ್ನಮತ ಶಮನವಾದ ಬಳಿಕ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ಗೆ “ಬ್ರೇಕ್‌’ ಬೀಳುತ್ತದೆ ಎಂಬ ನಿರೀಕ್ಷೆ ಹುಸಿಯಾಗಿದೆ. ರಾಜಕೀಯದಿಂದ ಹೊರತಾಗಿ ಸಾಮಾಜಿಕ ಚಟುವಟಿಕೆಗಳೊಂದಿಗೆ ಬ್ರಿಗೇಡ್‌ನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮುಂದುವರಿಸಲು ತೀರ್ಮಾನಿಸಲಾಗಿದೆ.

Advertisement

ಕೆ.ಎಸ್‌.ಈಶ್ವರಪ್ಪ ನೇತೃತ್ವದಲ್ಲಿ ಶನಿವಾರ ಶಾಸಕರ ಭವನದಲ್ಲಿ ನಡೆದ ಬ್ರಿಗೇಡ್‌ ಪದಾಧಿಕಾರಿಗಳ ಸಭೆಯಲ್ಲಿ ಈ ಕುರಿತು ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ. ಅದರಂತೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಬ್ರಿಗೇಡ್‌ ಸಮಿತಿ ರಚನೆ, ತಾಲೂಕು ಮಟ್ಟದ ಪದಾಧಿಕಾರಿಗಳ ಆಯ್ಕೆ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಬ್ರಿಗೇಡ್‌ನಿಂದ 2,500 ರೂ.ಬಹುಮಾನ ವಿತರಿಸುವುದು, ವಿದ್ಯಾರ್ಥಿಗಳ ಸಮಾವೇಶ ನಡೆಸುವುದು ಸೇರಿ ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ.

ಸಭೆಯಲ್ಲಿ ಮಾತನಾಡಿದ ಈಶ್ವರಪ್ಪ, ಬ್ರಿಗೇಡ್‌ ಮೂಲಕ ಸಾಮಾಜಿಕ ಚಟುವಟಿಕೆಗಳನ್ನು ನಡೆಸಿ ಅದನ್ನು ಇನ್ನಷ್ಟು ಕ್ರಿಯಾಶೀಲಗೊಳಿಸುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ಅಲ್ಲದೆ, ಅಗತ್ಯ ಬಿದ್ದರೆ ಶಕ್ತಿ ಪ್ರದರ್ಶನಕ್ಕೂ ಸಿದ್ಧವಾಗಿರುವಂತೆ ಸಂಘಟನೆ ಮುಖಂಡರಿಗೆ ಸೂಚಿಸಿದ್ದಾರೆ. ಜತೆಗೆ, ಬ್ರಿಗೇಡ್‌ ಸಭೆಗೆ ಪ್ರಧಾನಿ ನರೇಂದ್ರ ಮೋದಿ ಅಥವಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರನ್ನು ಕರೆಸಲು ಪ್ರಯತ್ನಿಸುವುದಾಗಿಯೂ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ರಾಜ್ಯಾದ್ಯಂತ ಬಿಜೆಪಿ ಒಬಿಸಿ ಮೋರ್ಚಾ ಸಮಾವೇಶಗಳನ್ನು ಸಂಗೊಳ್ಳಿ ರಾಯಣ್ಣ ಅವರ ಹೆಸರಿನಲ್ಲಿ ನಡೆಸಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಸೂಚಿಸಿದ್ದಾರೆ. ಒಬಿಸಿ ಮೋರ್ಚಾದ ಜತೆ ಜತೆಗೆ ಸಂಗೊಳ್ಳಿ ರಾಯಣ್ಣ ಅವರ ಹೆಸರಿನಲ್ಲಿ ಸಾಮಾಜಿಕ ಚಟುವಟಿಕೆಗಳನ್ನು ನಡೆಸಲು ಬ್ರಿಗೇಡ್‌ ಬಳಸಿಕೊಳ್ಳೋಣ. ಇದರ ಮೂಲಕ ರಾಜಕೀಯ ಬೇಡ ಎಂದೂ ಈಶ್ವರಪ್ಪ ಹೇಳಿದಾಗ ಸಭೆಯಲ್ಲಿದ್ದ ಪದಾಧಿಕಾರಿಗಳು ಒಪ್ಪಿಕೊಂಡರು ಎಂದು ತಿಳಿದು ಬಂದಿದೆ.

ಬ್ರಿಗೇಡ್‌ನ‌ಲ್ಲಿ ರಾಜಕೀಯ ಇಲ್ಲ:  ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಅವರಿಗೆ ಬ್ರಿಗೇಡ್‌ನ‌ ಉದ್ದೇಶ ತಿಳಿಸಿದ್ದು, ಅದನ್ನು ಒಪ್ಪಿಕೊಂಡು ಮುಂದುವರಿಯಲು ಹೇಳಿದ್ದಾರೆ. ಅದರಂತೆ ಬ್ರಿಗೇಡ್‌ ರಾಜಕೀಯೇತರ ಚಟುವಟಿಕೆಗಳೊಂದಿಗೆ ಉಳಿದುಕೊಳ್ಳುತ್ತದೆ. ಕಳೆದ ಏಳು ತಿಂಗಳಲ್ಲಿ ಬ್ರಿಗೇಡ್‌ಗೆ ದೊರೆತ ಜನ ಬೆಂಬಲವನ್ನು ಗಮನದಲ್ಲಿಟ್ಟುಕೊಂಡು ಆ ಮೂಲಕ ಹಿಂದುಳಿದವರು, ದಲಿತರು, ಬಡವರಿಗೆ ಶೈಕ್ಷಣಿಕವಾಗಿ ಬೆಂಬಲ ನೀಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇನ್ನು ಒಂದು ತಿಂಗಳಲ್ಲಿ ಜಿಲ್ಲಾ ಸಮಿತಿ ರಚಿಸುವ ಕುರಿತು ಮತ್ತು ಮಾ.4ರಂದು ಜಿಲ್ಲಾ ಸಮಿತಿಯ ಸಭೆ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

Advertisement

“ಬ್ರಿಗೇಡ್‌ನ‌ ಸಾಮಾಜಿಕ ಚಟುವಟಿಕೆಗಳಲ್ಲಿ ಮಾತ್ರ ನಾನು ಭಾಗವಹಿಸುತ್ತೇನೆ. ಈಗಾಗಲೇ ಬಿಜೆಪಿಯ ಹಿಂದುಳಿದ ಮೋರ್ಚಾ ಸಮಾವೇಶಗಳನ್ನು ನಡೆಸುವ ಜವಾಬ್ದಾರಿಯನ್ನು ಅಮಿತ್‌ ಶಾ ನನಗೆ ನೀಡಿದ್ದಾರೆ. ಈ ಕುರಿತು ಕಾರ್ಯಕ್ರಮಗಳನ್ನು ಹಾಕಿಕೊಳ್ಳುವ ಬಗ್ಗೆ ಫೆ.13ರಂದು ನಡೆಯಲಿರುವ ಬಿಜೆಪಿ ಕೋರ್‌ ಕಮಿಟಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಹೀಗಾಗಿ ಬ್ರಿಗೇಡ್‌ ಮೂಲಕ ರಾಜಕೀಯ ಚಟುವಟಿಕೆಗಳನ್ನು ನಡೆಸುವ ಪ್ರಶ್ನೆಯೇ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ರಾಯಣ್ಣ ಬ್ರಿಗೇಡ್‌ ಅಧ್ಯಕ್ಷರೂ ಆಗಿರುವ ಮಾಜಿ ಸಂಸದ ವಿರೂಪಾಕ್ಷಪ್ಪ ಮಾತನಾಡಿ, ಬ್ರಿಗೇಡ್‌ಗೆ ಯಾವುದೇ ರಾಜಕೀಯ ಪಕ್ಷದ ಜತೆ ಸಂಬಂಧವಿಲ್ಲ. ಇದೊಂದು ಸಾಮಾಜಿಕ ಚಟುವಟಿಕೆಗಳನ್ನು ನಡೆಸುವ ಸಂಘಟನೆಯಾಗಿದ್ದು, ಯಾವ ಪಕ್ಷದವರು ಬೇಕಾದರೂ ಪಾಲ್ಗೊಳ್ಳಬಹುದು. ಯಾವುದೇ ಕಾರಣಕ್ಕೂ ಬ್ರಿಗೇಡ್‌ಗೆ ಬ್ರೇಕ್‌ ಹಾಕುವುದಿಲ್ಲ. ಅದರ ಮೂಲಕ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಸಭೆಯಲ್ಲಿ ವಿಧಾನ ಪರಿಷತ್‌ ಸದಸ್ಯ ಸೋಮಣ್ಣ ಬೇವಿನಮರದ, ಮುಖಂಡರಾದ ಮುಕುಡಪ್ಪ, ಬಿಬಿಎಂಪಿ ಮಾಜಿ ಮೇಯರ್‌ ಡಿ.ವೆಂಕಟೇಶಮೂರ್ತಿ, ನಿವೃತ್ತ ಪೊಲೀಸ್‌ ಅಧಿಕಾರಿ ಸಂಗ್ರಾಮ… ಸಿಂಗ್‌, ವಿಜಯಪುರದ ಸೋಮೇಶ್ವರ ಸ್ವಾಮೀಜಿ, ವಿಧಾನ ಪರಿಷತ್‌ ಮಾಜಿ ಸದಸ್ಯ ಡಾ.ಶಿವಯೋಗಿಸ್ವಾಮಿ, ಮಾಜಿ ಶಾಸಕ ನೇಮಿರಾಜ ನಾಯ್ಕ… ಮತ್ತಿತರರು ಭಾಗವಹಿಸಿದ್ದರು.

ಬ್ರಿಗೇಡ್‌ ಜೀವಂತವಿಡುವ ಮೂಲಕ ಒತ್ತಡ ತಂತ್ರ
ಬಿಜೆಪಿ ಜಿಲ್ಲಾ ಪದಾಧಿಕಾರಿಗಳ ಆಯ್ಕೆ ಕುರಿತಂತೆ ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ವಿರುದ್ಧ ಮುನಿಸಿಕೊಂಡಿದ್ದ ಈಶ್ವರಪ್ಪ ಅವರು ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ರಚಿಸಿದ್ದರು. ಇದು ಪಕ್ಷದಲ್ಲಿ ಭಿನ್ನಮತಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಇಬ್ಬರನ್ನೂ ಕರೆಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು, ಪದಾಧಿಕಾರಿಗಳ ಪಟ್ಟಿ ಪರಿಷ್ಕರಿಸುವಂತೆ ಯಡಿಯೂರಪ್ಪಗೆ ಸೂಚಿಸಿದ್ದರು. ಅಲ್ಲದೆ, ಬ್ರಿಗೇಡ್‌ನಿಂದ ಹೊರಬರುವಂತೆ ಈಶ್ವರಪ್ಪಗೆ ತಿಳಿಸಿದ್ದರು. ಇದಕ್ಕೆ ಈಶ್ವರಪ್ಪ ಒಪ್ಪಿದ್ದರಾದರೂ ನಂತರದಲ್ಲಿ ಪದಾಧಿಕಾರಿಗಳ ಪಟ್ಟಿ ಪರಿಷ್ಕರಣೆ ಆಗಲಿಲ್ಲ. ಹೀಗಾಗಿ, ಬಿಗೇಡ್‌ನ್ನು ರಾಜಕೀಯೇತರ ಸಂಘಟನೆಯಾಗಿ ಮುಂದುವರಿಸುವ ಮೂಲಕ ಸಾಮಾಜಿಕ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳುವ ಬಗ್ಗೆ ತೀರ್ಮಾನಿಸಲಾಗಿದೆ. ಪದಾಧಿಕಾರಿಗಳ ಪಟ್ಟಿ ಪರಿಷ್ಕರಣೆ ಮಾಡಲು ಒತ್ತಡ ತಂತ್ರವಾಗಿ ಮತ್ತು ತಮ್ಮನ್ನು ಹಿಂದುಳಿದ ವರ್ಗಗಳ ನಾಯಕನಾಗಿ ಗುರುತಿಸಿಕೊಳ್ಳುವ ಉದ್ದೇಶದೊಂದಿಗೆ ಬ್ರಿಗೇಡ್‌ನ್ನು ಜೀವಂತವಾಗಿ ಉಳಿಸಿಕೊಳ್ಳಲು ಈಶ್ವರಪ್ಪ ತೀರ್ಮಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಬ್ರಿಗೇಡ್‌ ಸಭೆಯ ನಿರ್ಧಾರಗಳು
– ಬಿಜೆಪಿ ಸಂಘಟನೆಗೆ ಧಕ್ಕೆಯಾಗದಂತೆ ಬ್ರಿಗೇಡ್‌ ಚಟುವಟಿಕೆ ಮುಂದುವರಿಸುವುದು.
– ಪ್ರತಿ ವಿಧಾನಸಭೆ ಕ್ಷೇತ್ರಕ್ಕೆ ಬ್ರಿಗೇಡ್‌ ಸಮಿತಿ ರಚನೆ. ಮಹಿಳಾ ಸಮಿತಿಯೂ ರಚನೆಯಾಗಬೇಕು.
– ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಇಬ್ಬರಿಗೆ ತಲಾ 2.5 ಸಾವಿರ ನಗದು ಬಹುಮಾನ ವಿತರಣೆ.
– ಮೇ ಅಥವಾ ಜೂನ್‌ನಲ್ಲಿ ವಿದ್ಯಾರ್ಥಿಗಳು ಮತ್ತು ಪಾಲಕರನ್ನು ಸೇರಿಸಿ ಸಮಾವೇಶ ನಡೆಸುವುದು.
– ತಿಂಗಳಲ್ಲಿ ಜಿಲ್ಲಾ ಸಮಿತಿ ರಚನೆ. ತಾಲೂಕು ಮಟ್ಟದ ಪದಾಧಿಕಾರಿಗಳ ನೇಮಕ.

ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ಗೆ ಬ್ರೇಕೂ ಇಲ್ಲ, ಏನೂ ಇಲ್ಲ. ಎಲ್ಲ ಬಡವರು, ಹಿಂದುಳಿದ, ದಲಿತರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬ್ರಿಗೇಡ್‌ ಕೆಲಸ ಮಾಡಲಿದೆ. ಅದೇನೂ ರಾಜಕೀಯ ಪಕ್ಷವಲ್ಲ. ನಾನು ನೇರವಾಗಿಯೇ ಇದರಲ್ಲಿ ಭಾಗವಹಿಸುತ್ತೇನೆ. ಜನವರಿಯಲ್ಲಿ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಪಕ್ಷಕ್ಕೆ ಧಕ್ಕೆಯಾಗದಂತೆ ಬ್ರಿಗೇಡ್‌ ಚಟುವಟಿಕೆ ಮುಂದುವರಿಸುವಂತೆ ಅಮಿತ್‌ ಶಾ ಸೂಚನೆ ಕೊಟ್ಟಿದ್ದಾರೆ. ಯಡಿಯೂರಪ್ಪ ಕೂಡಾ ಒಪ್ಪಿಕೊಂಡಿದ್ದಾರೆ.
– ಕೆ.ಎಸ್‌.ಈಶ್ವರಪ್ಪ, ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next