Advertisement

ಸೆನಗಲ್‌ನಿಂದ ಐವರಿ ಕೋಸ್ಟ್‌ಗೆ ಪರಾರಿಯಾಗಲಿದ್ದ ರವಿ ಪೂಜಾರಿ !

12:30 AM Feb 08, 2019 | |

ಮಂಗಳೂರು: ಆಫ್ರಿಕದ ಸೆನಗಲ್‌ ಪೊಲೀಸರ ವಶದಲ್ಲಿರುವ ಭೂಗತ ಪಾತಕಿ ರವಿ ಪೂಜಾರಿ ನಾಲ್ಕು ತಿಂಗಳ ಹಿಂದೆಯಷ್ಟೇ ಆ ದೇಶಕ್ಕೆ ಬಂದು ತಾತ್ಕಾಲಿಕವಾಗಿ ನೆಲೆ ನಿಂತಿದ್ದ ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ.

Advertisement

ಒಂದುವೇಳೆ ಗುಪ್ತಚರ ಇಲಾಖೆ ಅಧಿಕಾರಿಗಳು ಹೆಣೆದಿದ್ದ ಬಲೆಗೆ ಜ. 21ರಂದು ಬೀಳದೆ ಹೋಗುತ್ತಿದ್ದರೆ ಆತ 15 ದಿನದೊಳಗೆ ಅಲ್ಲಿಂದ ಸಮೀಪದ ಐವರಿ ಕೋಸ್ಟ್‌ಗೆ ಹೋಗಿ ಶಾಶ್ವತವಾಗಿ ಭೂಗತ ನಾಗುವುದಕ್ಕೆ ಸಿದ್ಧತೆ ಮಾಡಿಕೊಂಡಿದ್ದ ಎನ್ನಲಾಗಿದೆ.

ಸದ್ಯದಲ್ಲೇ ಆತ ಐವರಿ ಕೋಸ್ಟ್‌ಗೆ ಸ್ಥಳಾಂತರ ಆಗಲಿದ್ದಾನೆ ಎಂಬ ಸುಳಿವು ಪಡೆದೇ ಎರಡು ತಿಂಗಳ ಹಿಂದೆ ಮಂಗಳೂರು ಮೂಲದ ಮತ್ತೂಬ್ಬ ಭೂಗತ ಪಾತಕಿ ವಿಕ್ಕಿ ಶೆಟ್ಟಿ, ರವಿ ಪೂಜಾರಿಯನ್ನು ಮುಗಿಸುವುದಕ್ಕೆ ಸ್ಕೆಚ್‌ ಹಾಕಿದ್ದ ಎನ್ನಲಾಗಿದೆ.

ಹೊಟೇಲ್‌ಗ‌ಳಲ್ಲಿ ಹೂಡಿಕೆ
ರವಿ ಪೂಜಾರಿ ಭಾರತದ ಹಲವು ಕಡೆಗಳಲ್ಲಿ ಕೊಲೆ ಬೆದರಿಕೆ ಕರೆಗಳನ್ನು ಮಾಡಿ ವಸೂಲಾದ ಕೋಟಿಗಟ್ಟಲೆ ರೂ. ಹಫ್ತಾ ಹಣವನ್ನು ಬರ್ಕಿನೊ ಫಾಸೊ, ಸೆನಗಲ್‌ನ ಡಕಾರ್‌, ಐವರಿ ಕೋಸ್ಟ್‌, ಗಹನಾ ಮೊದಲಾದ ಸಣ್ಣ ಸಣ್ಣ ದೇಶಗಳಲ್ಲಿ ಹೊಟೇಲ್‌ ಉದ್ಯಮದಲ್ಲಿ ಹೂಡಿಕೆ ಮಾಡುತ್ತಿದ್ದ. ಹೆಚ್ಚಿನ ಉದ್ಯಮಗಳಲ್ಲಿ ಭಾರತೀಯ ಮೂಲದ ಅನಿಲ್‌ ಅಗರ್‌ವಾಲ್‌ ಪಾಲುದಾರರು. ರವಿ ಪೂಜಾರಿ ಪತ್ನಿ ಪದ್ಮಾ ಕೂಡ ಆತನ ಉದ್ಯಮದಲ್ಲಿ ಕೈಜೋಡಿಸಿದ್ದಳು. ಆಕೆ ಕೂಡ ನಕಲಿ ಪಾಸ್‌ಪೋರ್ಟ್‌ ಹೊಂದಿದ್ದು, ಪಶ್ಚಿಮ ಆಫ್ರಿಕಾದ ದೇಶವೊಂದರಲ್ಲಿ ತಲೆಮರೆಸಿಕೊಂಡಿದ್ದಾಳೆ.

ಮುಳುವಾಯಿತು ಕ್ರಿಕೆಟ್‌  ಪ್ರಾಯೋಜಕತ್ವ
ಸೆನಗಲ್‌ನಲ್ಲಿ ನೆಲೆಸಿರುವ ಭಾರತೀಯ ಮೂಲದ ಕೆಲವರು ಆಯೋಜಿಸಿದ್ದ ಕ್ರಿಕೆಟ್‌ ಪಂದ್ಯದಲ್ಲಿ ಭಾಗವಹಿಸಿದ್ದೇ ರವಿ ಪೂಜಾರಿಗೆ ಮುಳುವಾಗಿದೆ. ಹಲವು ವರ್ಷಗಳಿಂದ ಬರ್ಕಿನೊ ಫಾಸೊ ಹಾಗೂ ಐವರಿ ಕೋಸ್ಟ್‌ಗಳಲ್ಲಿಯೇ ಹೆಚ್ಚಾಗಿ ನೆಲೆಸುತ್ತಿದ್ದ ಈತ ಬರ್ಕಿನೊ ಫಾಸೊದಲ್ಲಿ “ನಮಸ್ತೆ ಇಂಡಿಯಾ’ ಹಾಗೂ ಸೆನಗಲ್‌ನಲ್ಲಿ “ಮಹಾರಾಜ’ ಎಂಬ ಎರಡು ಹೊಟೇಲ್‌ಗ‌ಳನ್ನು ಭಾರತೀಯ ಮೂಲದ ಅನಿಲ್‌ ಅಗರ್‌ವಾಲ್‌ ಪಾಲುದಾರಿಕೆಯಲ್ಲಿ ನಡೆಸುತ್ತಿದ್ದ. ಆತ ಸೆನಗಲ್‌ನಲ್ಲಿ ಓಡಾಡುತ್ತಿರುವ ಬಗ್ಗೆ ಖಚಿತ ಮಾಹಿತಿ 3 ತಿಂಗಳ ಹಿಂದೆಯಷ್ಟೇ ಗುಪ್ತಚರ ಅಧಿಕಾರಿಗಳಿಗೆ ಲಭಿಸಿತ್ತು. ಸೂಕ್ತ ಸುಳಿವು ಕೊಟ್ಟದ್ದು, ಆತನ ಜತೆಗೆ ಓಡಾಡುತ್ತಿದ್ದವರು ಐದಾರು ತಿಂಗಳ ಹಿಂದೆ ಆಯೋಜಿಸಿದ್ದ ಕ್ರಿಕೆಟ್‌ ಪಂದ್ಯ.

Advertisement

ಪಂದ್ಯಾಟದ ಪ್ರಾಯೋಜಕತ್ವವನ್ನು ರವಿ ಪೂಜಾರಿ ಮತ್ತು ಬೆಂಬಲಿಗರು ವಹಿಸಿದ್ದರು. ಪ್ರತ್ಯೇಕ ಟೀ-ಶರ್ಟ್‌ಗಳನ್ನು ಸಿದ್ಧಪಡಿಸಲಾಗಿದ್ದು, ಅದರಲ್ಲಿ “ಇಂಡಿಯನ್‌ ಸೆನಗಲ್‌ ಕ್ರಿಕೆಟ್‌ ಕ್ಲಬ್‌’ ಎಂದು ಬರೆಯಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸುವುದಕ್ಕೆ ಖುದ್ದು ರವಿ ಪೂಜಾರಿಯೇ ಬಂದಿದ್ದು, ಆ ಸಂದರ್ಭ ಭಾವಚಿತ್ರಗಳು ಗುಪ್ತಚರ ಅಧಿಕಾರಿಗಳಿಗೆ ಲಭಿಸಿದ್ದವು. ಆತ ಅಲ್ಲೇ ಇರುವುದು ದೃಢವಾದ್ದರಿಂದ ಅಧಿಕಾರಿಗಳು 3 ತಿಂಗಳಿನಿಂದ ಆತನ ಬೆನ್ನು ಬಿದ್ದಿದ್ದರು ಎಂದು ಉನ್ನತ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next