Advertisement

ಹ್ಯಾಮಿಲ್ಟನ್‌ ಟೆಸ್ಟ್‌: ಕಿವೀಸ್‌ಗೆ ಗ್ಯಾಬ್ರಿಯಲ್‌ ಬ್ರೇಕ್‌

06:20 AM Dec 10, 2017 | Team Udayavani |

ಹ್ಯಾಮಿಲ್ಟನ್‌: ಇಲ್ಲಿನ “ಸೆಡ್ಡನ್‌ ಪಾರ್ಕ್‌’ನಲ್ಲಿ ಶನಿವಾರ ಆರಂಭಗೊಂಡ ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ಬ್ಯಾಟಿಂಗಿಗೆ ಸಡ್ಡು ಹೊಡೆಯುವಲ್ಲಿ ವೆಸ್ಟ್‌ ಇಂಡೀಸ್‌ ಬೌಲರ್‌ಗಳು ಯಶಸ್ವಿಯಾಗಿದ್ದಾರೆ. ಮೊದಲ ದಿನದಾಟದ ಅಂತ್ಯಕ್ಕೆ ಕಿವೀಸ್‌ 7 ವಿಕೆಟ್‌ ಕಳೆದುಕೊಂಡು 286 ರನ್‌ ಮಾಡಿದೆ.

Advertisement

ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ವೆಸ್ಟ್‌ ಇಂಡೀಸಿಗೆ ಆರಂಭಿಕ ಮೇಲುಗೈ ಸಾಧಿಸಲು ಸಾಧ್ಯವಾಗಲಿಲ್ಲ. ಆದರೆ ಕೊನೆಯ ಅವಧಿಯಲ್ಲಿ, ಅದರಲ್ಲೂ ಹೊಸ ಚೆಂಡನ್ನು ಕೈಗೆತ್ತಿಕೊಂಡ ಬಳಿಕ ಕೆರಿಬಿಯನ್ನರಿಗೆ ಯಶಸ್ಸು ಕೈಹಿಡಿಯಿತು. ವೇಗಿ ಗ್ಯಾಬ್ರಿಯಲ್‌ ವಿಂಡೀಸಿನ ಯಶಸ್ವಿ ಬೌಲರ್‌ ಆಗಿದ್ದು, 79 ರನ್ನಿಗೆ 3 ವಿಕೆಟ್‌ ಕಿತ್ತರು. ಇದರಲ್ಲಿ 2 ವಿಕೆಟ್‌ 2ನೇ ಹೊಸ ಚೆಂಡಿನ ದಾಳಿಯ ವೇಳೆ ಲಭಿಸಿತು. ಮಿಗ್ಯುಯೆಲ್‌ ಕಮಿನ್ಸ್‌ 2 ವಿಕೆಟ್‌, ಕೆಮರ್‌ ರೋಶ್‌ ಹಾಗೂ ಮೊದಲ ಟೆಸ್ಟ್‌ ಆಡಲಿಳಿದ ರೇಮನ್‌ ರೀಫ‌ರ್‌ ಒಂದೊಂದು ವಿಕೆಟ್‌ ಕಿತ್ತರು.

84 ರನ್‌ ಬಾರಿಸಿದ ಆರಂಭಕಾರ ಜೀತ್‌ ರಾವಲ್‌ ನ್ಯೂಜಿಲ್ಯಾಂಡ್‌ ಸರದಿಯ ಟಾಪ್‌ ಸ್ಕೋರರ್‌. ರಾವಲ್‌-ಟಾಮ್‌ ಲ್ಯಾಥಂ (22) ಸೇರಿಕೊಂಡು ಸರಿಯಾಗಿ 20 ಓವರ್‌ ನಿಭಾಯಿಸಿ ಮೊದಲ ವಿಕೆಟಿಗೆ 65 ರನ್‌ ಒಟ್ಟುಗೂಡಿಸಿದರು. ನಾಯಕ ಕೇನ್‌ ವಿಲಿಯಮ್ಸನ್‌ 43 ರನ್‌ ಹೊಡೆದರು. ಒಂದು ಹಂತದಲ್ಲಿ ನ್ಯೂಜಿಲ್ಯಾಂಡ್‌ ಒಂದೇ ವಿಕೆಟಿಗೆ 154 ರನ್‌ ಪೇರಿಸಿ ಮುನ್ನುಗ್ಗುವ ಸೂಚನೆ ನೀಡಿತ್ತು. ಆದರೆ ಇಲ್ಲಿಂದ ಮುಂದೆ ವಿಂಡೀಸ್‌ ಬೌಲರ್‌ಗಳ ಕೈ ಮೇಲಾಯಿತು. ರಾಸ್‌ ಟಯ್ಲರ್‌ (16), ಹೆನ್ರಿ ನಿಕೋಲ್ಸ್‌ (13) ಕ್ರೀಸ್‌ ಆಕ್ರಮಿಸಲು ವಿಫ‌ಲರಾದರು. 189ಕ್ಕೆ 5 ವಿಕೆಟ್‌ ಉರುಳಿತು.

ಮತ್ತೆ ಗ್ರ್ಯಾಂಡ್ಹೊಮ್‌ ಅಬ್ಬರ
ಈ ಹಂತದಲ್ಲಿ ಮಿಚೆಲ್‌ ಸ್ಯಾಂಟ್ನರ್‌ (24) ಮತ್ತು ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌ (58) ತಂಡದ ನೆರವಿಗೆ ನಿಂತರು. 6ನೇ ವಿಕೆಟಿಗೆ 76 ರನ್‌ ಹರಿದು ಬಂತು. ಮತ್ತೆ ಬಿರುಸಿನ ಬ್ಯಾಟಿಂಗ್‌ ನಡೆಸಿದ ಗ್ರ್ಯಾಂಡ್‌ಹೋಮ್‌ 63 ಎಸೆತಗಳಿಂದ 58 ರನ್‌ ಬಾರಿಸಿದರು. ಇದು 5 ಬೌಂಡರಿ ಹಾಗೂ 4 ಸಿಕ್ಸರ್‌ಗಳನ್ನು ಒಳಗೊಂಡಿತ್ತು.

2ನೇ ಹೊಸ ಚೆಂಡನ್ನು ಕೈಗೆತ್ತಿಕೊಂಡ ಗ್ಯಾಬ್ರಿಯಲ್‌ 2ನೇ ಎಸೆತದಲ್ಲೇ ಸ್ಯಾಂಟ್ನರ್‌ಗೆ ಪೆವಿಲಿಯನ್‌ ಹಾದಿ ತೋರಿಸಿದರು. ದಿನದಾಟದ ಮುಕ್ತಾಯಕ್ಕೆ 3 ಓವರ್‌ ಇರುವಾಗ ಗ್ರ್ಯಾಂಡ್‌ಹೋಮ್‌ ವಿಕೆಟ್‌ ಉಡಾಯಿಸಿದರು. ಇಬ್ಬರೂ ಕ್ಲಿನ್‌ ಬೌಲ್ಡ್‌ ಆದರು.

Advertisement

ಸಂಕ್ಷಿಪ್ತ ಸ್ಕೋರ್‌: ನ್ಯೂಜಿಲ್ಯಾಂಡ್‌ ಪ್ರಥಮ ಇನ್ನಿಂಗ್ಸ್‌-7 ವಿಕೆಟಿಗೆ 286 (ರಾವಲ್‌ 84, ಗ್ರ್ಯಾಂಡ್‌ಹೋಮ್‌ 58, ವಿಲಿಯಮ್ಸನ್‌ 43, ಗ್ಯಾಬ್ರಿಯಲ್‌ 79ಕ್ಕೆ 3, ಕಮಿನ್ಸ್‌ 37ಕ್ಕೆ 2).

Advertisement

Udayavani is now on Telegram. Click here to join our channel and stay updated with the latest news.

Next