ಮಥುರಾ: ಪೊಲೀಸರು ವಶಪಡಿಸಿಕೊಂಡಿದ್ದ ಬರೋಬ್ಬರಿ 500 ಕೆಜಿ ಮಾದಕದ್ರವ್ಯವನ್ನು ಇಲಿಗಳು ತಿಂದು ಹಾಕಿವೆಯಂತೆ!
ಹೀಗೆಂದು ಸ್ವತಃ ಉತ್ತರಪ್ರದೇಶದ ಮಥುರಾದ ಪೊಲೀಸರು ವಿಶೇಷ ಎನ್‌ಡಿಪಿಎಸ್ ಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.
ಎನ್‌ಡಿಪಿಎಸ್ ಕಾಯ್ದೆಯಡಿ ವಶಪಡಿಸಿಕೊಂಡಿರುವ ಮರಿಜುವಾನಾ(ಒಂದು ಬಗೆಯ ಡ್ರಗ್)ವನ್ನು ಕೋರ್ಟ್ ಮುಂದೆ ಹಾಜರುಪಡಿಸುವಂತೆ ನ್ಯಾಯಾಧೀಶರು ಪೊಲೀಸರಿಗೆ ಸೂಚಿಸಿದ್ದರು. ಆದರೆ, ಖಾಲಿ ಕೈಯ್ಯಲ್ಲಿ ಹಾಜರಾದ ಪೊಲೀಸರು, ಶೇರ್‌ಗಡದ ದಾಸ್ತಾನು ಕೇಂದ್ರ ಮತ್ತು ಹೆದ್ದಾರಿ ಪೊಲೀಸ್ ಠಾಣೆಯಲ್ಲಿ ತಾವು ಸಂಗ್ರಹಿಸಿಟ್ಟಿದ್ದ 500 ಕೆಜಿ ಡ್ರಗ್ಸ್ ಅನ್ನು ಇಲಿಗಳು ತಿಂದು ತೇಗಿವೆ ಎಂಬ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಜಡ್ಜ್, “ಮೊದಲು ಇಲಿಕಾಟವನ್ನು ನಿಯಂತ್ರಿಸಿ. ನಂತರ 60 ಲಕ್ಷ ರೂ. ಮೌಲ್ಯದ ಡ್ರಗ್ ಅನ್ನು ಇಲಿಗಳೇ ತಿಂದಿವೆ ಎನ್ನುವುದಕ್ಕೆ ಸಾಕ್ಷ್ಯ ಒದಗಿಸಿ’ ಎಂದು ಸೂಚಿಸಿದ್ದಾರೆ.