ಮಹಾನಗರ: ನಗರದ ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನದ ವಾರ್ಷಿಕ ಮಹೋತ್ಸವವಾದ ಮಂಗಳೂರು ರಥೋತ್ಸವ ಪ್ರಯುಕ್ತ ಮಂಗಳವಾರ ಶ್ರೀ ದೇಗುಲದಲ್ಲಿ ಕಾಶಿ ಮಠಾಧೀಶರಾದ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಮಹಾ ಪ್ರಾರ್ಥನೆ ಬಳಿಕ ಶ್ರೀ ದೇವರಿಗೆ ಪಂಚಾಮೃತ, ಗಂಗಾಭಿಷೇಕ, ಶತಕಲಶಾಭಿಷೇಕಗಳು ನೆರವೇರಿದವು.
ಬಳಿಕ ಯಜ್ಞ ಮಂಟಪದಲ್ಲಿ ಶ್ರೀ ದೇವರು ಚಿತ್ತೈಸಿ ಯಜ್ಞದಲ್ಲಿ ಮಹಾ ಪೂರ್ಣಾಹುತಿ ಜರಗಿತು. ಇದೇ ವೇಳೆ ಕಾಶಿ ಮಠಾಧೀಶರ ತಿರುಮಲ ಚಾತುರ್ಮಾಸ್ಯದ ವಿಶೇಷ ಸ್ಮರಣ ಸಂಚಿಕೆಯನ್ನು ಸ್ವಾಮೀಜಿಯವರು ಬಿಡುಗಡೆ ಮಾಡಿದರು.
ಮಂಗಳೂರು ರಥೋತ್ಸವ ಪ್ರಯುಕ್ತ ಸೋಮವಾರ ಸಣ್ಣ ರಥೋತ್ಸವ ಶ್ರೀ ಕಾಶಿ ಮಠ ಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ ಸಂಯಮೀಂದ್ರತೀರ್ಥ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ವಿಜೃಂಭಣೆಯಿಂದ ಜರಗಿದವು.
ಮೃಗಬೇಟೆ ಉತ್ಸವ
ಶ್ರೀ ದೇವರ ವಿಶೇಷವಾಗಿ ಪುಷ್ಪಾಲಂಕೃತ ಬೆಳ್ಳಿ ಲಾಲಕಿಯಲ್ಲಿ ಮೃಗಬೇಟೆ ಉತ್ಸವ ರಥಬೀದಿಯಲ್ಲಿ ಶ್ರೀಗಳವರ ದಿವ್ಯ ಉಪಸ್ಥಿತಿಯಲ್ಲಿ ನಡೆಯಿತು.
ಬೆಳಗ್ಗೆ ಭವ್ಯ ಯಜ್ಞ ಮಂಟಪದಲ್ಲಿ ಯಜ್ಞ ಆರಂಭಗೊಂಡು ಯಜ್ಞ ಆರತಿ, ಮಹಾಬಲಿ, ಪೇಟೆ ಹಗಲೋತ್ಸವ ಬಳಿಕ ಮೃಗಬೇಟೆ, ಸಮಾರಾಧನೆ ತದನಂತರ ಸಣ್ಣ ರಥೋತ್ಸವ ನೆರವೇರಿತು.