Advertisement

Contractor ಆತ್ಮಹ*ತ್ಯೆ: ರಾಜಕೀಯ ಜಟಾಪಟಿ

01:57 AM Dec 29, 2024 | Team Udayavani |

ಬೆಂಗಳೂರು: ಗುತ್ತಿಗೆದಾರ ಸಚಿನ್‌ ಪಂಚಾಳ್‌ ಆತ್ಮಹತ್ಯೆಗೆ ಸಂಬಂಧಿಸಿ ರಾಜ್ಯ ಬಿಜೆಪಿಯು ಸಚಿವ ಪ್ರಿಯಾಂಕ್‌ ಖರ್ಗೆ ವಿರುದ್ಧ ಸಮರ ಸಾರಿದೆ. ರಿಪಬ್ಲಿಕ್‌ ಆಫ್ ಕಲಬುರಗಿಯಲ್ಲಿ ಆಡಳಿತ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಮರಳು ದಂಧೆ, ಟೈಲ್ಸ್, ಸಿಮೆಂಟ್‌ ಫ್ಯಾಕ್ಟರಿಗಳ ದಂಧೆ ನಡೆಯುತ್ತಿದೆ. ಗುತ್ತಿಗೆ ವಿಷಯದಲ್ಲಿ ಬೇಕಾದವರ ನೇಮಕವಾಗಿದ್ದು, ಇದೇ ಕಾರಣಕ್ಕೆ ಸಚಿನ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯನವರು ತತ್‌ಕ್ಷಣ ಪ್ರಿಯಾಂಕ್‌ ಅವರ ರಾಜೀನಾಮೆ ಪಡೆಯಬೇಕು ಎಂದು ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ.

Advertisement

ಬೆಂಗಳೂರಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿ ಯಲ್ಲಿ ವಿಧಾನ ಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಹಾಗೂ ಸದಸ್ಯ ಎನ್‌. ರವಿಕುಮಾರ್‌ ಮಾತನಾಡಿ, ಪ್ರಿಯಾಂಕ್‌ ಖರ್ಗೆ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಮಧ್ಯೆ ಬಿಜೆಪಿಯು ರವಿವಾರದಿಂದಲೇ ಹೋರಾಟ ತೀವ್ರಗೊಳಿಸಲು ನಿರ್ಧರಿಸಿದೆ. ಆತ್ಮಹತ್ಯೆಗೆ ಮುನ್ನ ಸಚಿನ್‌ ಬರೆದಿಟ್ಟಿದ್ದರು ಎನ್ನಲಾದ ಏಳು ಪುಟಗಳ ಡೆತ್‌ ನೋಟನ್ನು ಮುಂದಿಟ್ಟುಕೊಂಡು, ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹಿಸಿದೆ.

ರಾಜೀನಾಮೆಗೆ ಆಗ್ರಹ
ಗುತ್ತಿಗೆದಾರ ಸಚಿನ್‌ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಸ್ಥಾನಕ್ಕೆ ಪ್ರಿಯಾಂಕ್‌ ಖರ್ಗೆ ಮೊದಲು ರಾಜೀನಾಮೆ ನೀಡಬೇಕು. ಅನಂತರ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು ಎಂದು ಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.

ಪರಿಷತ್‌ ಸದಸ್ಯ ಎನ್‌.ರವಿಕುಮಾರ್‌ ಮಾತನಾಡಿ, ಈಶ್ವರಪ್ಪ ಪ್ರಕರಣ ಹಾಗೂ ಸಚಿವ ಪ್ರಿಯಾಂಕ್‌ ಖರ್ಗೆ ಪ್ರಕರಣಕ್ಕೂ ಸಾಮ್ಯತೆಯಿದೆ. ತನಿಖೆ ನಡೆಸಿ ಎಂದು ಮೊದಲಿಗೆ ತಾವೇ ಹೇಳಿ, ತಪ್ಪಿಸಿಕೊಳ್ಳುವ ಚಾಣಾಕ್ಷತೆಯನ್ನು ಪ್ರಿಯಾಂಕ್‌ ಖರ್ಗೆ ತೋರಿಸುತ್ತಿದ್ದಾರೆ. ಬುದ್ಧಿವಂತಿಕೆ ಪ್ರದರ್ಶಿಸುವುದು ಬಿಟ್ಟು, ಈಶ್ವರಪ್ಪ ಅವರಿಗೆ ಹೇಳಿದ್ದನ್ನು ನೀವೀಗ ಪಾಲಿಸಲೇಬೇಕು. ಮೊದಲಿಗೆ ರಾಜೀನಾಮೆ ನೀಡಿ, ತನಿಖೆ ಎದುರಿಸಬೇಕು. ಆರೋಪ ಮುಕ್ತರಾದ ಬಳಿಕ ಸಚಿವರಾಗಲು ಅಭ್ಯಂತರವೇನಿಲ್ಲ ಎಂದರು.

ಪ್ರಿಯಾಂಕ್‌ ಖರ್ಗೆ ಆಪ್ತರೊಂದಿಗೆ ಸಚಿನ್‌ ಐದಾರು ಬಾರಿ ಭೇಟಿಯಾಗಿ ¨ªಾರೆ. ಟೆಂಡರ್‌, ಗುತ್ತಿಗೆ ವ್ಯವಹಾರದ ಮಾತುಕತೆಯೂ ಈ ವೇಳೆ ನಡೆದಿರಬಹುದು ಎಂದರು.

Advertisement

ವೀಡಿಯೋ ತಿರುಗುಬಾಣ
ಬಿಜೆಪಿ ಆಡಳಿತಾವಧಿಯಲ್ಲಿ ಸಂತೋಷ ಪಾಟೀಲ್‌ ಆತ್ಮಹತ್ಯೆ ಪ್ರಕರಣ ಸಂಬಂಧ ಪ್ರಿಯಾಂಕ್‌ ಖರ್ಗೆ ನೀಡಿದ ಹೇಳಿಕೆಯ ವೀಡಿಯೋ ತುಣುಕನ್ನು ವಿಪಕ್ಷ ನಾಯಕ ಆರ್‌. ಅಶೋಕ್‌ ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

“ಸಿಎಂ ಯಡಿಯೂರಪ್ಪ ಅಸಹಾ ಯಕರಾಗದೆ ಪಾರದರ್ಶಕ ತನಿಖೆಗೆ ಈಶ್ವರಪ್ಪ ಅವರ ರಾಜೀನಾಮೆ ಪಡೆಯಬೇಕು’ ಎಂದು ಪ್ರಿಯಾಂಕ್‌ ಖರ್ಗೆ ಆಗ್ರಹಿಸಿದ್ದನ್ನೇ ತಿರುಗುಬಾಣ ವಾಗಿಸಿದ್ದಾರೆ. ಸಚಿನ್‌ ಆತ್ಮಹತ್ಯೆ ಪ್ರಕರಣದಲ್ಲೂ ಸಿಎಂ ಸಿದ್ದರಾಮಯ್ಯ ಪ್ರಿಯಾಂಕ್‌ ರಾಜೀನಾಮೆ ಪಡೆಯ ಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಗತಿಯ ರಿಪಬ್ಲಿಕ್‌: ಪ್ರಿಯಾಂಕ್‌ ಸೆಡ್ಡು
ಬೆಂಗಳೂರು: ಕಲಬುರಗಿ ಒಂದು ರಿಪಬ್ಲಿಕ್‌, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಖಂಡಿತವಾಗಿಯೂ ಕಲಬುರಗಿ ರಿಪಬ್ಲಿಕ್‌ ಆಗಿದೆ, ಆದರೆ ಅದು ಬಳ್ಳಾರಿ ರಿಪಬ್ಲಿಕ್‌ ನಂತೆ ಅಲ್ಲ. ಪ್ರಜಾ ಪ್ರಭುತ್ವದ ಅಭಿವೃದ್ಧಿಯ ರಿಪಬ್ಲಿಕ್‌ ಆಗಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ತಿರುಗೇಟು ನೀಡಿದ್ದಾರೆ.

ಕಲಬುರಗಿಯಲ್ಲಿ ಜಯದೇವ ಆಸ್ಪತ್ರೆ ತೆರೆಯಲಾಗಿದೆ, ಕೆಕೆಆರ್‌ಡಿಬಿಗೆ 5 ಸಾವಿರ ಕೋಟಿ ರೂ. ಕೊಟ್ಟು ಆ ಭಾಗದ ಆಶೋತ್ತರಗಳಿಗೆ ಸ್ಪಂದಿಸುವ ಕೆಲಸ ಆಗಿದೆ, ಕಲ್ಯಾಣ ಪಥ ಆಗುತ್ತಿದೆ, ಆಳಂದ, ಜೇವರ್ಗಿ ಮುಂತಾದೆಡೆ ಕುಡಿಯುವ ನೀರು ಯೋಜನೆಗಳು ಜಾರಿಯಾಗುತ್ತಿವೆ. ನಿಮ್ಮಂತೆ ದೌರ್ಜನ್ಯದ ರಿಪಬ್ಲಿಕ್‌ ಆಗಿಲ್ಲ ಎಂದು ಪ್ರಿಯಾಂಕ್‌ ಶನಿ ವಾರ ಪತ್ರಿಕಾಗೋಷ್ಠಿ ನಡೆಸಿ ಬಿಜೆಪಿ ನಾಯಕರ ಆರೋಪ ಗಳಿಗೆ ಪ್ರತ್ಯುತ್ತರ ನೀಡಿದರು.

ಬೀದರ್‌ನ ಯುವ ಗುತ್ತಿಗೆದಾರ ಸಚಿನ್‌ ಆತ್ಮಹತ್ಯೆ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ವಹಿಸುವಂತೆ ನಾನೇ ಗೃಹ ಸಚಿವ ಡಾ| ಪರಮೇ ಶ್ವರ್‌ ಅವರಿಗೆ ಮನವಿ ಮಾಡುತ್ತೇನೆ ಎಂದೂ ತಿಳಿಸಿದರು.

ನಮ್ಮ ಬಗ್ಗೆ ಮಾತನಾಡುವ ಮುನ್ನ ನಿಮ್ಮ ಪಕ್ಷದ ಕಲಬುರಗಿ ನಾಯಕರ ಇತಿಹಾಸ ತಿಳಿಯುವುದು ಒಳ್ಳೆಯದು. ಬೀದರ್‌, ಯಾದಗಿರಿಯಂತಹ ಅಕ್ಕಪಕ್ಕದ ಜಿಲ್ಲೆಗಳ ಬಿಜೆಪಿ ನಾಯಕರನ್ನೇ ಕೇಳಿನೋಡಿ, ಉತ್ತರ ಸಿಗುತ್ತದೆ. ಕಲಬುರಗಿಯಲ್ಲಿ ಐಪಿಎಲ್‌ ಬೆಟ್ಟಿಂಗ್‌ ದಂಧೆ ನಡೆಸುತ್ತಿದ್ದವರು ಯಾರು? ಮರಳು ಮಾಫಿಯಾ ನಡೆಸುತ್ತಿದ್ದವರು ಯಾರು? ಪಡಿತರ ಅಕ್ಕಿ, ಅಂಗನವಾಡಿಯಲ್ಲಿ ಮಕ್ಕಳಿಗೆ ಕೊಡುವ ಹಾಲಿನ ಪುಡಿ ದುರುಪಯೋಗ ಮಾಡಿಕೊಂಡವರು ಯಾರು? ರೈತರಿಗೆ ವಂಚಿಸಿ ಸಿಬಿಐಯಿಂದ ಚಾರ್ಜ್‌ಶೀಟ್‌ ಹಾಕಿಸಿಕೊಂಡವರು ಯಾರು? ಈ ರತ್ನಗಳು ಯಾರು ಎಂಬುದನ್ನು ನಿಮ್ಮ ನಾಯಕರನ್ನೇ ಕೇಳಿ ತಿಳಿದುಕೊಳ್ಳಿ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಸವಾಲು ಹಾಕಿದ್ದಾರೆ.

ಉನ್ನತ ಮಟ್ಟದ ತನಿಖೆಯಾಗಲಿ
ಬೀದರ್‌ನ ಯುವ ಗುತ್ತಿಗೆದಾರ ಸಚಿನ್‌ ಆತ್ಮಹತ್ಯೆ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ವಹಿಸುವಂತೆ ನಾನೇ ಗೃಹ ಸಚಿವ ಡಾ| ಪರಮೇಶ್ವರ್‌ ಅವರಿಗೆ ಮನವಿ ಮಾಡುತ್ತೇನೆ. ಯುವ ಗುತ್ತಿಗೆದಾರ ಸಚಿನ್‌ ಆತ್ಮಹತ್ಯೆಯಂತಹ ಘಟನೆ ನಡೆಯಬಾರದಿತ್ತು. ಆ ಬಗ್ಗೆ ನನಗೂ ನೋವಿದೆ. ಆದರೆ ಈ ಪ್ರಕರಣದಲ್ಲಿ ನನ್ನ ಹೆಸರು ತಳಕು ಹಾಕುತ್ತಿರುವುದು ತಪ್ಪು. ಬಿಜೆಪಿಯವರಿಗೆ ನನ್ನ ರಾಜೀನಾಮೆ ಕೇಳುವುದು ಒಂದು ಫ್ಯಾಶನ್‌ ಆಗಿದೆ ಎಂದು ದೂರಿದರು.

ಈ ಹಿಂದೆ ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಯಾದಗಿರಿಯಲ್ಲಿ ಮದ್ಯಪಾನ ಮಾಡಿ ಅಪಘಾತಕ್ಕೀಡಾದಾಗಲೂ ನಾನು ಮಾರಣಾಂತಿಕ ಹಲ್ಲೆ ಮಾಡಿಸಿದ್ದಾಗಿ ಆರೋಪಿಸಿದ್ದರು. ಮಾಡಾಳು ವಿರೂಪಾಕ್ಷಪ್ಪ ಅವರ ಮಾತು ಕೇಳಿ ಕಾಮಗಾರಿ ನಡೆಸಿದ್ದ ಕೆಆರ್‌ಐಡಿಎಲ್‌ ಉಪಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಾಗಲೂ ಬಿಜೆಪಿಯವರು ನನ್ನ ರಾಜೀನಾಮೆ ಕೇಳಿದ್ದರು. ಈಶ್ವರಪ್ಪ ರಾಜೀನಾಮೆ ಕೊಟ್ಟಿರಲಿಲ್ಲವೇ, ನೀವೂ ಕೊಡಿ ಎನ್ನುವ ರೀತಿ ಮಾತನಾಡುತ್ತಿದ್ದಾರೆ. ಆ ಪ್ರಕರಣದಲ್ಲಿ ಈಶ್ವರಪ್ಪ ಅವರ ಮೌಖೀಕ ಆದೇಶದ ಮೇರೆಗೆ ಕಾಮಗಾರಿ ನಡೆಸಿದ್ದಾಗಿ ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರನೇ ಮರಣಪತ್ರದಲ್ಲಿ ಬರೆದಿದ್ದ. ಈ ಪ್ರಕರಣದಲ್ಲಿ ನನ್ನ ಪಾತ್ರ ಏನಿದೆ ಎಂದು ಮರುಪ್ರಶ್ನೆ ಹಾಕಿದರು.

ಕಾನೂನು ಪ್ರಕಾರವೇ ವ್ಯವಹಾರ ನಡೆದಿದೆ
ಆತ್ಮಹತ್ಯೆ ಮಾಡಿಕೊಂಡಿರುವ ಸಚಿನ್‌ ಡೆತ್‌ನೋಟ್‌ನಲ್ಲಿ 8 ಜನರ ಹೆಸರನ್ನು ಬರೆದಿದ್ದು, ನನ್ನ ಹೆಸರು ಅದರಲ್ಲಿಲ್ಲ. ನಾನು ಪ್ರಭಾ ವ ಬೀರಿದ್ದಾಗಿ ಎಲ್ಲಾದರೂ ಉಲ್ಲೇಖವಾಗಿದೆಯೇ? ಸಚಿನ್‌ ಕೆಲಸ ಮಾಡುತ್ತಿದ್ದ ಕಂಪೆನಿಗೆ ಗುತ್ತಿಗೆ ಸಿಕ್ಕಿದ್ದರಿಂದ ಇಎಂಡಿಗಾಗಿ 65 ಲಕ್ಷ ರೂ. ನೆರವು ಕೇಳಿದ್ದು, ಅದನ್ನೇ ಕೊಟ್ಟಿರುವುದಾಗಿ ಆರೋಪಿಗಳೂ ಒಪ್ಪಿಕೊಂಡಿದ್ದಾರೆ. ಇದರಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ. ಅಡ್ಡದಾರಿಯಿಂದ ಹಣ ಕೊಟ್ಟಿಲ್ಲ. ಎಲ್ಲವೂ ಕಾನೂನು ಪ್ರಕಾರವೇ ನಡೆದಿದೆ. ಆದರೆ ಕೆಐಎಡಿಬಿ, ಮೃಗಾಲಯ ಪ್ರಾಧಿಕಾರದಿಂದ ನೆರವು ಕೊಡಿಸುವುದಾಗಿ ಹೇಳಿ ವಂಚಿಸಿದ್ದಾರೆ ಎಂದು ಸಚಿನ್‌ ಆರೋಪಿಸಿದ್ದಾರೆ ಎಂದರು.

ತನಿಖೆ ನಡೆಯಲಿ, ಸಂಪೂರ್ಣ ಸಹಕಾರವಿದೆ
ಇದು ಪರಿಪೂರ್ಣವಾಗಿ ವೈಯಕ್ತಿಕ ವ್ಯವಹಾರ. ಇದಕ್ಕೂ ಸರಕಾರ, ಇಲಾಖೆ ಅಥವಾ ನನಗೂ ಸಂಬಂಧವೇ ಇಲ್ಲ. ಆದರೂ ತನಿಖೆ ಆಗಲಿ ಎಂದು ನಾನೇ ಹೇಳುತ್ತಿದ್ದೇನೆ. ಸದ್ಯಕ್ಕೆ ರೈಲ್ವೇ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಹಕಾರ ನೀಡುವಂತೆ ಬೀದರ್‌ ಹಾಗೂ ಕಲಬುರಗಿ ಜಿಲ್ಲಾಡಳಿತಕ್ಕೆ ನಾನೂ ಮನವಿ ಮಾಡಿದ್ದೇನೆ. ಅವರೇ ತನಿಖೆ ಮುಂದುವರಿಸಿದರೂ ಸರಿ. ಅವರು ರಾಜ್ಯ ಪೊಲೀಸರಿಗೆ ವರ್ಗಾಯಿಸುವುದಾದರೆ, ನಾನೇ ಗೃಹ ಸಚಿವ ಡಾ| ಪರಮೇಶ್ವರ್‌ ಅವರಿಗೆ ಸಿಐಡಿ ಅಥವಾ ಸ್ವಾಯತ್ತವಾದ ಉನ್ನತ ಮಟ್ಟದ ತನಿಖೆಗೆ ವಹಿಸುವಂತೆ ಕೋರುತ್ತೇನೆ ಎಂದರು.

ಬಿಜೆಪಿಯವರಿಗೆ ಕಾನೂನಿನ ಅರಿವಿಲ್ಲ, ಸಂವಿಧಾನದ ಮೇಲೆ ಗೌರವವಿಲ್ಲ. ಎಲ್ಲದಕ್ಕೂ ರಾಜೀನಾಮೆ ಕೇಳುವುದು, ಸಿಬಿಐ ತನಿಖೆಗೆ ಆಗ್ರಹಿಸುವುದು ಮಾತ್ರ ಗೊತ್ತಿದೆ. ಯಡಿಯೂರಪ್ಪ ವಿರುದ್ಧದ ಪೋಕೊÕà, ಮುನಿರತ್ನ, ಸಿ.ಟಿ. ರವಿ ವಿರುದ್ಧದ ಪ್ರಕರಣಗಳು, ಗುಲಾಬ್‌ ಜಾಮೂನು ಇತ್ಯಾದಿ ಪ್ರಕರಣಗಳನ್ನು ಮುಚ್ಚಿಕೊಳ್ಳಲು, ಇವರೊಳಗಿರುವ ಕಲಹ ಮುಚ್ಚಿಕೊಳ್ಳಲು ಆರೋಪ ಮಾಡುತ್ತಿದ್ದಾರೆ ಎಂದರು.

ಸಚಿವ ಖರ್ಗೆ ಆಪ್ತ ಸೇರಿ 6 ಮಂದಿ ವಿರುದ್ಧ ಪ್ರಕರಣ
ಕಲಬುರಗಿ: ಬೀದರ್‌ ಜಿಲ್ಲೆಯ ಭಾಲ್ಕಿ ತಾಲೂಕಿನ ಗುತ್ತಿಗೆದಾರ ಸಚಿನ್‌ ಪಾಂಚಾಳ ಡೆತ್‌ನೋಟ್‌ನಲ್ಲಿ ಉಲ್ಲೇಖೀಸಿದಂತೆ ಪ್ರತಿಷ್ಠಿತ ವ್ಯಕ್ತಿಗಳ ಕೊಲೆಗೆ ಸುಫಾರಿ ನೀಡಿ ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ಪ್ರಮುಖ ಆರೋಪಿ, ಸಚಿವ ಪ್ರಿಯಾಂಕ್‌ ಖರ್ಗೆ ಆಪ್ತ ರಾಜು ಕಪನೂರ, ನಂದಕುಮಾರ ನಾಗಭುಜಂಗೆ, ಗೋರಖನಾಥ ಸಜ್ಜನ್‌, ಪ್ರತಾಪ್‌ದೀರ್‌ ಪಾಟೀಲ, ಮನೋಜ್‌ ಶೇಜವಾಲ್‌, ರಾಮನಗೌಡ ಪಾಟೀಲ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.
ಆಂದೋಲಾ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಶಾಸಕ ಬಸವರಾಜ ಮತ್ತಿಮಡು, ಬಿಜೆಪಿ ನಗರಾಧ್ಯಕ್ಷ ಚಂದು ಪಾಟೀಲ್‌, ಮಣಿಕಂಠ ರಾಠೊಡ ಕೊಲೆಗೆ ಸುಫಾರಿ ನೀಡಿರುವ ಕುರಿತು ಪಾಂಚಾಳ ಡೆತ್‌ನೋಟ್‌ನಲ್ಲಿ ಉಲ್ಲೇಖೀಸಿದ್ದರು. ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ ನೀಡಿದ ದೂರಿನಂತೆ ಸ್ಟೇಷನ್‌ ಬಜಾರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಕ್ಕುಚ್ಯುತಿ ಮಂಡಿಸುತ್ತೇನೆ
ಈ ನಡುವೆ ಠಾಣೆಗೆ ದೂರು ನೀಡಲು ಬಿಜೆಪಿ ನಿಯೋಗದೊಂದಿಗೆ ಹೋದಾಗ ಪೊಲೀಸ್‌ ಅಧಿಕಾರಿ ಶಕೀಲ ಅಂಗಡಿ ಅನುಚಿತ ವರ್ತನೆ ತೋರಿದ್ದಲ್ಲದೇ ಏಕವಚನದಲ್ಲಿ ಮಾತನಾಡಿದ್ದಾರೆ. ಜನಪ್ರತಿನಿಧಿ ಎನ್ನುವ ಗೌರವವನ್ನೂ ನೀಡದೆ ಶಾಸಕನಾದ ನನ್ನ ಹಕ್ಕಿನ ವಿರುದ್ಧ ವರ್ತಿಸಿದ್ದಾರೆ. ಈ ಕುರಿತು ವಿಧಾನಸಭೆ ಸಭಾಧ್ಯಕ್ಷರ ಗಮನಕ್ಕೆ ತಂದು ಹಕ್ಕುಚ್ಯುತಿ ಮಂಡಿಸುತ್ತೇನೆ ಎಂದು ಶಾಸಕ ಬಸವರಾಜ ಮತ್ತಿಮಡು ತಿಳಿಸಿದರು.

ಬಿಜೆಪಿ ಪ್ರತಿಭಟನೆ
ಇನ್ನೊಂದೆಡೆ ಪಾಂಚಾಳ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಬರೆದಿಟ್ಟ ಡೆತ್‌ನೋಟ್‌ದಲ್ಲಿ ಬಿಜೆಪಿ ನಾಯಕರ ಹತ್ಯೆಗೆ ಸಚಿವ ಖರ್ಗೆ ಬೆಂಬಲಿಗರು ಸಂಚು ರೂಪಿಸಿದ್ದಾರೆ ಎಂದು ತಿಳಿಸಿರುವ ಹಿನ್ನೆಲೆಯಲ್ಲಿ ಸಚಿವ ಪ್ರಿಯಾಂಕ್‌ ಖರ್ಗೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬಿಜೆಪಿ ಶನಿವಾರ ನಗರದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿತು.

ಈ ಪ್ರಕರಣವನ್ನು ಕೂಡಲೇ ಸಿಬಿಐಗೆ ಒಪ್ಪಿಸುವುದರ ಜತೆಗೆ ಆರೋಪಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿ ನಾಲ್ಕು ಗಂಟೆಗಳಿಗೂ ಅಧಿಕ ಕಾಲ ರಸ್ತೆ ತಡೆ ನಡೆಸಿ ಒಕ್ಕೋರಲಿನಿಂದ ಆಗ್ರಹಿಸಿದರು. ಬೆಳಗ್ಗೆ 11ರಿಂದ ಮಧ್ಯಾಹ್ನ 2 ಗಂಟೆವರೆಗೆ ಸಾವಿರಾರು ಬಿಜೆಪಿ ಕಾರ್ಯಕರ್ತರು ರಸ್ತೆ ತಡೆ ನಡೆಸಿ, ಕಾಂಗ್ರೆಸ್‌ ಸರಕಾರ, ದರ್ಪ ತೋರಿಸುತ್ತಿರುವ ಪೊಲೀಸರು, ಗೂಂಡಾ ರಾಜ್ಯ, ರೌಡಿಗಳ ಆಡಳಿತ, ಸಚಿವರ ವರ್ತನೆ ಖಂಡಿಸಿ ವಾಹನ ಸಂಚಾರ ತಡೆದು, ಟಯರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಡಿಸಿಪಿ ಕನ್ನಿಕಾ ಸಿಕ್ರಿವಾಲ್‌ ಮನವಿ ಸ್ವೀಕರಿಸಿ, ಎಫ್ಐಆರ್‌ ಪ್ರತಿಯನ್ನು ಹೋರಾಟಗಾರರಿಗೆ ನೀಡಿ, ತನಿಖೆ ಭರವಸೆ ನೀಡಿದ ಅನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ಸಚಿನ್‌ ಕುಟುಂಬಕ್ಕೆ ಇಂದು ವಿಜಯೇಂದ್ರ ಸಾಂತ್ವನ
ಬೀದರ್‌: ಟೆಂಡರ್‌ ವಂಚನೆ ಹಿನ್ನೆಲೆಯಲ್ಲಿ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಭಾಲ್ಕಿ ತಾಲೂಕಿನ ಕಟ್ಟಿ ತುಗಾಂವ ಗ್ರಾಮದ ಯುವ ಗುತ್ತಿಗೆದಾರ ಸಚಿನ್‌ ಪಾಂಚಾಳ್‌ ಅವರ ಮನೆಗೆ ಡಿ.29ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದ ತಂಡ ಭೇಟಿ ನೀಡಲಿದೆ. ಈ ವೇಳೆ ಸಚಿನ್‌ ಕುಟುಂಬಕ್ಕೆ ಸಾಂತ್ವನ ಹೇಳಿ ಮಾಹಿತಿ ಪಡೆದುಕೊಳ್ಳಲಿದ್ದಾರೆ.

ಗುತ್ತಿಗೆದಾರ ಆತ್ಮಹತ್ಯೆ ಮುಚ್ಚಿ ಹಾಕಲು ಪ್ರಯತ್ನ: ಮುತಾಲಿಕ್‌
ಬಾಗಲಕೋಟೆ: ಬೀದರ್‌ನ ಗುತ್ತಿಗೆದಾರ ಸಚಿನ್‌ ಪಾಂಚಾಳ ಆತ್ಮಹತ್ಯೆ ಘಟನೆ ಕುರಿತು ಸಮಗ್ರ ತನಿಖೆ ನಡೆಸಬೇಕು. ಈ ಘಟನೆಯ ಹಿಂದೆ ಸಚಿವ ಪ್ರಿಯಾಂಕ್‌ ಖರ್ಗೆ ಅವರ ಆಪ್ತರಿದ್ದಾರೆ. ಈ ಘಟನೆಯಲ್ಲಿ ಎಲ್ಲ ದಾಖಲೆ ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next