ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯವು ಪ್ರತಿಷ್ಠಿತ ಪ್ರಧಾನಮಂತ್ರಿ “ಉಚ್ಚತರ ಶಿಕ್ಷಾ ಅಭಿಯಾನ’ ಯೋಜನೆಯಲ್ಲಿ ವಿಶ್ವವಿದ್ಯಾನಿಲಯದ ಅಭಿವೃದ್ಧಿಯ ಬಲವರ್ಧನೆಗೆ 20 ಕೋ.ರೂ. ಅನುದಾನ ಲಭ್ಯವಾಗಿದೆ.
ಈ ಅನುದಾನವನ್ನು ವಿ.ವಿ.ಯ ಮೂಲ ಸೌಕರ್ಯಗಳ ಅಭಿವೃದ್ಧಿ, ಸಂಶೋಧನಾ ಉಪಕರಣಗಳ ಖರೀದಿ ಮತ್ತು ಮೃದು ಕೌಶಲಗಳ ಅಭಿವೃದ್ಧಿಗಾಗಿ ನೀಡಲಾಗುತ್ತದೆ. ಇದರಿಂದ ಬೋಧನೆ ಮತ್ತು ಸಂಶೋಧನಾ ಮಟ್ಟದಲ್ಲಿ ಕಲಿಕಾ ಚಟುವಟಿಕೆಗಳಿಗೆ ಹೊಸತನ ಹಾಗೂ ಅಭಿವೃದ್ದಿ ಹೊಂದಿ ಒಟ್ಟು ಸದೃಢ ಶಿಕ್ಷಣ ವ್ಯವಸ್ಥೆಯ ಪರಿಸರ ನಿರ್ಮಾಣವಾಗುತ್ತದೆ ಎಂದು ಆಶಿಸಲಾಗಿದೆ. ಈ ಅನುದಾನದ ಮೂಲಕ ಮಂಗಳೂರು ವಿ.ವಿ.ಯು ರಾಷ್ಟ್ರಮಟ್ಟದಲ್ಲಿ ಉತ್ತಮ ಗುಣಮಟ್ಟದ ವಿ.ವಿ. ಆಗಿ ಗುರುತಿಸಿಕೊಳ್ಳಲು ಪೂರಕವಾಗಿದೆ. ಕರ್ನಾಟಕ ರಾಜ್ಯದಲ್ಲಿ ಈ ಅನುದಾನಕ್ಕೆ ಕೇವಲ 4 ವಿ.ವಿ.ಗಳು ಆಯ್ಕೆಯಾಗಿದ್ದು, ಮಂಗಳೂರು ವಿ.ವಿ.ಯೂ ಒಂದಾಗಿದೆ.
ಅಭಿಯಾನದ ಯೋಜನೆಯನ್ನು ಫೆ. 20ರಂದು ಪ್ರಧಾನಿ ಮೋದಿ ಅವರು ಆನ್‌ಲೈನ್ ಮುಖಾಂತರ ಬೆಳಗ್ಗೆ 11.30ಕ್ಕೆ ಉದ್ಘಾಟಿಸಲಿದ್ದಾರೆ.
ಈ ಪ್ರಯುಕ್ತ ಮಂಗಳೂರು ವಿ.ವಿ.ಯ ಡಾ|ಯು.ಆರ್. ರಾವ್ ಸಭಾಂಗಣದಲ್ಲಿ ಕಾರ್ಯಕ್ರಮದ ಪ್ರಸಾರವನ್ನು ಆಯೋಜಿಸಲಾಗಿದೆ. ಸಂಸದರು, ವಿಧಾನ ಸಭೆ, ವಿಧಾನ ಪರಿಷತ್ ಸದಸ್ಯರು ಹಾಗೂ ವಿ.ವಿ. ಸಿಂಡಿಕೇಟ್ ಮತ್ತು ಶೈಕ್ಷಣಿಕ ಮಂಡಳಿ ಸದಸ್ಯರು, ಬೋಧಕ ಹಾಗೂ ಬೋಧಕೇತರ ಸಿಬಂದಿ, ವಿದ್ಯಾರ್ಥಿಗಳು ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ವಿ.ವಿ.ಯ ಕುಲಪತಿ ಪ್ರೊ|ಜಯರಾಜ್ ಅಮೀನ್ ವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.