ಸೇಡಂ: ತಮ್ಮ ವ್ಯಾಪ್ತಿಯಲ್ಲಿ ಬಂದ ಅರಬ್ಬಿ ವರ್ತಕರಿಗೆ ಮಸೀದಿ ನಿರ್ಮಿಸುವ ಮೂಲಕ ರಾಷ್ಟ್ರಕೂಟ ಅರಸರು ಭಾವೈಕ್ಯತೆ ಸಾರಿದ್ದರು ಎಂದು ಕಲಬುರಗಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಡಾ| ಅಪ್ಪಗೆರೆ ಸೋಮಶೇಖರ ಹೇಳಿದರು.
ತಾಲೂಕಿನ ಮಳಖೇಡದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ರಾಷ್ಟ್ರಕೂಟರ ಉತ್ಸವದ ಗೋಷ್ಠಿ-1ರಲ್ಲಿ ಅವರು ರಾಷ್ಟ್ರಕೂಟರು ಮತ್ತು ಧಾರ್ಮಿಕ ಸಹಿಷ್ಣುತೆ ಕುರಿತು ಉಪನ್ಯಾಸ ನೀಡಿದರು.
ರಾಷ್ಟ್ರಕೂಟರು ಶೈವರು ಮತ್ತು ವೈಷ್ಣ ಧರ್ಮಗಳಿಗೆ ತಮ್ಮ ಕಾಲದಲ್ಲಿ ಪ್ರೋತ್ಸಾಹ ನೀಡಿದ್ದರು. ಹೊರದೇಶಿಗರಿಗೆ ತಮ್ಮ ಧರ್ಮ ಆಚರಣೆ ಮಾಡಲು ಅನುವು ಮಾಡಿಕೊಟ್ಟಿದ್ದರು. ರಾಷ್ಟ್ರಕೂಟರ ಪ್ರಾಂತ್ಯ ಸಂಪೂರ್ಣವಾಗಿ ಸರ್ವ ಧರ್ಮಿಯರ ಕೇಂದ್ರವಾಗಿ ಮಾರ್ಪಟ್ಟಿತ್ತು ಎಂದು ಹೇಳಿದರು.
ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಪ್ರೊ| ಆರ್. ಎಂ. ಷಡಕ್ಷರಯ್ಯ ರಾಷ್ಟ್ರಕೂಟರ ಇತಿವೃತ್ತಿ ಕುರಿತು ಮಾತನಾಡಿದರು. ಪ್ರೊ| ಮಂಜುಳಾ ಚಿಂಚೋಳಿ ಆಶಯ ನುಡಿ ವ್ಯಕ್ತಪಡಿಸಿದರು. ಗುಲಬರ್ಗಾ ವಿಶ್ವವಿದ್ಯಾಲಯದ ಡಾ| ಎಂ.ಬಿ. ಕಟ್ಟಿ ನಿರೂಪಿಸಿದರು. ಮಹಿಪಾಲರೆಡ್ಡಿ ಮುನ್ನೂರು ವಂದಿಸಿದರು. ಶಂಕರ ಹೂಗಾರ ಕಲ್ಲೂರ ವಚನಗಾಯನ ಮತ್ತು ಅಣ್ಣಾರಾವ ಶೆಳ್ಳಗಿ ಅವರ ತತ್ವಪದ ಸಂಗೀತಾಸಕ್ತರ ಮನತಣಿಸಿತು.
ಮಧ್ಯಾಹ್ನ ನಡೆದ ಗೋಷ್ಠಿ-2ರಲ್ಲಿ ಕವಿರಾಜಮಾರ್ಗದ ದೇಸೀ ಮಾರ್ಗ ಕುರಿತು ಪ್ರೊ| ಶಾಂತಿನಾಥ ದಿಬ್ಬದ್ ಮಾತನಾಡಿ, ರಾಷ್ಟ್ರಕೂಟರ ಇತಿಹಾಸ ಇಡೀ ವಿಶ್ವ ವ್ಯಾಪಿಸಿದೆ. ಮಳಖೇಡದಲ್ಲಿರುವ ಕೋಟೆ ಸ್ಥಳದಲ್ಲಿ ಮತ್ತಷ್ಟು ಉತ್ಖನನದ ಅವಶ್ಯಕತೆ ಇದೆ. ಇನ್ನೂ ಅನೇಕ ಕುರುಹುಗಳನ್ನು ಇಲ್ಲಿ ಪತ್ತೆ ಮಾಡುವ ಅವಶ್ಯಕತೆ ಇದೆ. ರಾಷ್ಟ್ರಕೂಟರ ಇತಿಹಾಸವನ್ನು ದಾಖಲೆ ರೂಪದಲ್ಲಿ ಹೊರತರಬೇಕಿದೆ ಎಂದು ಹೇಳಿದರು.