Advertisement

Dharmasthala: ಭಜನೆಯಿಂದ ಸನಾತನ ಧರ್ಮ, ಸಂಸ್ಕೃತಿ ರಕ್ಷಣೆ

01:12 AM Sep 30, 2024 | Team Udayavani |

ಬೆಳ್ತಂಗಡಿ: ಆಡು ಮುಟ್ಟದ ಸೊಪ್ಪಿಲ್ಲ, ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ತಲುಪದ ಕ್ಷೇತ್ರ ಮತ್ತು ಸೇವೆಯಿಲ್ಲ. ಗ್ರಾಮಾಭಿವೃದ್ಧಿ, ಆರೋಗ್ಯ, ಶಿಕ್ಷಣ, ದೇವಸ್ಥಾನಗಳ ಜೀರ್ಣೋದ್ಧಾರ, ಶುದ್ಧನೀರಿನ ಘಟಕಗಳು, ಕೆರೆಗಳ ಪುನಶ್ಚೇತನ, ಮಹಿಳಾ ಸಶಕ್ತೀಕರಣ, ಜನಜಾಗೃತಿ ವೇದಿಕೆ ಮೂಲಕ ವ್ಯಸನಮುಕ್ತ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಇತ್ಯಾದಿ ಸೇವಾಕಾರ್ಯಗಳು ವಿಶ್ವಮಾನ್ಯವಾಗಿವೆ ಎಂದು ಕುಂದಗೋಳ ಕಲ್ಯಾಣಪುರ ಮಠದ ಪೂಜ್ಯ ಬಸವಣ್ಣಜ್ಜನವರು ಹೇಳಿದರು.

Advertisement

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಒಂದು ವಾರ ನಡೆದ 26ನೇ ವರ್ಷದ ಭಜನ ತರಬೇತಿಯ ಸಮಾರೋಪ ಸಮಾರಂಭ ದಲ್ಲಿ ಅವರು ಆಶೀರ್ವಚನ ನೀಡಿದರು.

ಭಜನ ಸಂಸ್ಕೃತಿಯಿಂದ ನಮ್ಮ ಸನಾತನ ಧರ್ಮ ಮತ್ತು ಸಂಸ್ಕೃತಿಯ ರಕ್ಷಣೆ ಸಾಧ್ಯ ವಾಗುತ್ತದೆ. ನಶಿಸಿ ಹೋಗುತ್ತಿರುವ ಭಜನ ಸಂಸ್ಕೃತಿಗೆ ನವ ಚೈತನ್ಯದೊಂದಿಗೆ ಜೀವಕಳೆ ನೀಡಿ ರಾಗ, ತಾಳ, ಲಯಬದ್ಧವಾಗಿ ಶಿಸ್ತಿನಿಂದ ಹೇಗೆ ಭಜನೆ ಮಾಡಬೇಕೆಂದು ಕಳೆದ 25 ವರ್ಷಗಳಿಂದ ತರಬೇತಿ ನೀಡಿ ವಿಶಿಷ್ಟ ಭಜನಾಪಟುಗಳನ್ನು ರೂಪಿಸಿದ್ದಾರೆ. ಇವರು ಧರ್ಮ ಮತ್ತು ಸಂಸ್ಕೃತಿಯ ಸಂರಕ್ಷಣೆಯ ರೂವಾರಿಗ ಳಾಗಿ ಆರೋಗ್ಯಪೂರ್ಣ ಸಮಾಜ ರೂಪಿಸ ಬೇಕೆಂದು ಸ್ವಾಮೀಜಿ ಸಲಹೆ ನೀಡಿದರು.

ಮುಖ್ಯ ಅತಿಥಿ ಸಂಸದ ಬ್ರಿಜೇಶ್‌ ಚೌಟ ಶುಭಾಶಂಸನೆ ಮಾಡಿ, ಭಜನೆಯಿಂದ ನಮ್ಮ ಭವ್ಯ ಪರಂಪರೆ ಮತ್ತು ಸಂಸ್ಕೃತಿಯನ್ನು ರಕ್ಷಿಸಬಹುದು ಎಂದರು.

ಆದರ್ಶ, ಸಾರ್ಥಕ ಜೀವನ ನಡೆಸಿ:
ಅಧ್ಯಕ್ಷತೆ ವಹಿಸಿದ್ದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಅಂತರಂಗ, ಬಹಿರಂಗ ಶುದ್ಧಿಯೊಂದಿಗೆ ಭಜನೆ ಮಾಡಿದಾಗ ಆತ್ಮಶುದ್ಧಿ ಯಾಗುತ್ತದೆ. ಮಾನಸಿಕ ಸುಖ-ಶಾಂತಿ, ನೆಮ್ಮದಿ ಸಿಗುತ್ತದೆ. ಭಜನೆ ಮಾಡುವವರು ಎಂದೂ ದುಶ್ಚಟಗಳಿಗೆ ಬಲಿಯಾಗದೆ ಆದರ್ಶ ಹಾಗೂ ಸಾರ್ಥಕ ಜೀವನ ನಡೆಸಬೇಕೆಂದು ಹೇಳಿದರು.

Advertisement

ಶಾಸಕ ಹರೀಶ್‌ ಪೂಂಜ ಮಾತನಾಡಿ, ಮಕ್ಕಳಲ್ಲಿ ಮತ್ತು ಯುವಜನತೆಯಲ್ಲಿ ಭಜನಾ ಸಂಸ್ಕತಿ ಬೆಳೆಸಬೇಕು ಎಂದರು. ವಿಧಾನ ಪರಿಷತ್‌ ಸದಸ್ಯ ಕೆ. ಪ್ರತಾಪಸಿಂಹ ನಾಯಕ್‌ ಭಜನೆ ಹಾಡುವ ಮೂಲಕ ಗಮನ ಸೆಳೆದರು. ಶಿಬಿರಾರ್ಥಿಗಳ ಪರವಾಗಿ ಉಮೇಶ್‌ ಶೆಟ್ಟಿ ಅನಿಸಿಕೆ ವ್ಯಕ್ತಪಡಿಸಿದರು. ಕಮ್ಮಟದ ಕಾರ್ಯದರ್ಶಿ ಎ.ವಿ. ಶೆಟ್ಟಿ ವರದಿ ಸಾದರ ಪಡಿಸಿದರು.
ಶ್ರೀ ಧಾಮ ಮಾಣಿಲದ ಮೋಹನದಾಸ ಸ್ವಾಮೀಜಿ, ಭಜನ ಪರಿಷತ್‌ ಉಪಾಧ್ಯಕ್ಷೆ ಹೇಮಾವತಿ ವೀ.ಹೆಗ್ಗಡೆ, ಡಿ. ಸುರೇಂದ್ರ ಕುಮಾರ್‌ ಮತ್ತು ಡಿ. ಹರ್ಷೇಂದ್ರ ಕುಮಾರ್‌ ಉಪಸ್ಥಿತರಿದ್ದರು.

ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್‌ ಸ್ವಾಗತಿಸಿದರು. ಧನ್ಯಕುಮಾರ್‌ ವಂದಿಸಿದರು. ಶ್ರೀನಿವಾಸ ರಾವ್‌ ಧರ್ಮಸ್ಥಳ ನಿರ್ವಹಿಸಿದರು.

ಭಜಕರ ಮೇಲೆ ಭಜನೆಯಿಂದಾಗುವ
ವೈದ್ಯಕೀಯ ಪರಿಣಾಮದ ಸಂಶೋಧನೆ
ಧರ್ಮಸ್ಥಳದಲ್ಲಿ 7 ದಿನಗಳ ಕಾಲ ನಡೆದ ಭಜನ ಕಮ್ಮಟದಲ್ಲಿ ಭಾಗವಹಿಸಿದ ಭಜಕರಿಗೆ ಪ್ರಥಮ ಬಾರಿ ಭಜಕರ ಮೇಲೆ ಭಜನೆಯಿಂದಾಗುವ ವೈದ್ಯಕೀಯ ಪರಿಣಾಮ ಎಂಬ ಸಂಶೋಧನೆ ಎಸ್‌ಡಿಎಂ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದಿದೆ.

ಮನಸ್ಸಿನ ಮತ್ತು ದೇಹದ ಸ್ಥಿರತೆಯನ್ನು ಭಜನೆ ಉತ್ತೇಜನಗೊಳಿಸಿ ದೇಹದಲ್ಲಿ ಕೊಬ್ಬಿನ ಅಂಶ, ದೇಹಕ್ಕೆ ಬೇಡವಾದ ಕೊಬ್ಬಿನ ಅಂಶ ಕಡಿಮೆಯಾಗಿ ದೇಹಕ್ಕೆ ಬೇಕಾದ ಒಳ್ಳೆಯ ಕೊಬ್ಬಿನ ಅಂಶ ಅಧಿಕಗೊಳಿಸುತ್ತದೆ. ಈ ಮೂಲಕ ಹೃದಯ ಸಂಬಂಧಪಟ್ಟ ಖಾಯಿಲೆಗಳನ್ನು ತಡೆಗಟ್ಟಲು ಸಹಾಯವಾಗುತ್ತದೆ. ಹಾಗೆ ದೇಹಕ್ಕೆ ಅತ್ಯಗತ್ಯವಾಗಿರುವ ಪಿತ್ತಜನಕಾಂಗದ ಚಟುವಟಿಕೆ ಉತ್ತಮಗೊಳ್ಳುತ್ತದೆ. ನರಮಂಡಲವನ್ನು ಸಮತೋಲನಗೊಳಿಸಿ ಮಾನಸಿಕ ಒತ್ತಡ ಕಡಿಮೆಮಾಡಿ ಉದ್ವೇಗದಿಂದ ಬರುವ ಖಾಯಿಲೆಗಳನ್ನು ತಡೆಗಟ್ಟುವ ಶಕ್ತಿಯನ್ನು ಭಜಕರಲ್ಲಿ ಮೂಡಿಸುತ್ತದೆ ಎಂದು ತಿಳಿದುಬಂದಿದೆ.

ಆಸ್ಪತ್ರೆಯ ಪ್ರಾಚಾರ್ಯ ಡಾ| ಪ್ರಶಾಂತ್‌ ಶೆಟ್ಟಿ, ಶಾಂತಿವನದ ಮುಖ್ಯ ವೈಧ್ಯಾಧಿಕಾರಿ ಡಾ| ಶಿವಪ್ರಸಾದ್‌ ಶೆಟ್ಟಿ ಹಾಗೂ ವೈದ್ಯರ ತಂಡದವರಿಂದ ಸಂಶೋಧನೆ ನಡೆಸಲಾಗಿದೆ. ಕಮ್ಮಟದ ಪ್ರಥಮ ಹಾಗೂ ಕೊನೆಯ ದಿನ ಸುಮಾರು 600 ಭಜಕರಲ್ಲಿ 20 ಮಂದಿಯನ್ನು ಆಯ್ಕೆ ಮಾಡಿ ಅಧ್ಯಯನ ನಡೆಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next