ಉಳ್ಳಾಲ: ಸುಮಾರು 10 ಲಕ್ಷದಲ್ಲಿ ಒಬ್ಬರನ್ನು ಬಾಧಿಸುವ ಅತ್ಯಂತ ಅಪರೂಪದ ಬಗೆಯ ಹಾರ್ಮೋನ್ ಸಮಸ್ಯೆಗೊಳಗಾಗಿದ್ದ ಅಣ್ಣ-ತಂಗಿಯನ್ನು ಕೀಹೋಲ್ ಶಸ್ತ್ರ ಚಿಕಿತ್ಸೆ ಮೂಲಕ ದೇರಳಕಟ್ಟೆಯ ಜಸ್ಟಿಸ್ ಕೆ.ಎಸ್. ಹೆಗ್ಡೆ ಆಸ್ಪತ್ರೆಯ (ಕ್ಷೇಮ ಆಸ್ಪತ್ರೆ) ತಜ್ಞ ವೈದ್ಯರು ಗುಣಪಡಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಮಹಿಳೆಯೊಬ್ಬರು ತನ್ನ 16 ವರ್ಷದ ಮಗಳಿಗೆ ಅಧಿಕ ತೂಕದ ಸಮಸ್ಯೆಯ ಕಾರಣಕ್ಕೆ ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ ಆಗಮಿಸಿದ್ದು, ಅಲ್ಲಿನ ಮುಖ್ಯ ಅಂತಃಸ್ರಾವ ಶಾಸ್ತ್ರಜ್ಞ ಡಾ| ಶ್ರೀಕೃಷ್ಣ ಆಚಾರ್ಯ ಪರೀಕ್ಷೆ ನಡೆಸಿ ಆಕೆಗೆ ಕುಶಿಂಗ್ಸ್ ಸಿಂಡ್ರೋಮ್ ಇರುವುದಾಗಿ ಪತ್ತೆಹಚ್ಚಿದರು.
ಇದಕ್ಕೆ ಚಿಕಿತ್ಸೆ ನೀಡುವ ಭರವಸೆ ಯೊಂದಿಗೆ ಮೂತ್ರ ಜನಕಾಂಗದ ಗ್ರಂಥಿ ಗಳನ್ನು ತೆಗೆಯುವ ನಿಟ್ಟಿನಲ್ಲಿ ಆಸ್ಪತ್ರೆಯ ಮುಖ್ಯ ಮೂತ್ರಶಾಸ್ತ್ರಜ್ಞರಾಗಿರುವ ಡಾ| ರಾಜೀವ್ ಟಿ.ಪಿ. ಅವರಿಗೆ ಶಿಫಾರಸು ಮಾಡಲಾಯಿತು. ಅತ್ಯಂತ ಸವಾಲಾಗಿದ್ದ ಈ ಶಸ್ತ್ರ ಚಿಕಿತ್ಸೆಯ ಏಕ-ಹಂತದ ಲ್ಯಾಪರೊಸ್ಕೋಪಿಕ್ ಟ್ರಾನ್ಸೆ$³ರಿಟೋನಿಯಲ್ ಬೈಲಾಟರಲ್ ಅಡ್ರಿನಾಲೆಕ್ಟಮಿ ಅನ್ನು ಡಾ| ಸೂರಜ್ ಮತ್ತು ಡಾ| ನರೇಂದ್ರ ಅವರ ನ್ನೊಳಗೊಂಡ ತಂಡವು ಡಾ| ರಾಜೀವ್ ನೇತೃತ್ವದಲ್ಲಿ ಅರಿವಳಿಕೆ ತಂಡದ ಮುಖ್ಯಸ್ಥ ಡಾ| ಶ್ರೀಪಾದ ಮೆಹಂದಳೆ, ಡಾ| ನಿಖೀಲ್ ಎಂ.ಪಿ. ಮತ್ತು ಡಾ| ಗಾಂಡೀವ ಅವರ ಸಹಭಾಗಿತ್ವದಲ್ಲಿ ಸುಮಾರು 6 ಗಂಟೆಗಳ ಕಾಲ ನಡೆಸಿ ಯಶಸ್ವಿಯಾಯಿತು.
ಶಸ್ತ್ರಚಿಕಿತ್ಸೆ ಬಳಿಕ ರೋಗಿ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು ತೂಕವನ್ನು ಕಳೆದುಕೊಂಡಿದ್ದಾಳೆ. ಬಳಿಕ ಆಕೆಯ ಸಹೋದರನಿಗೂ ಇದೇ ಸಮಸ್ಯೆಯಿದೆ ಎಂದು ವೈದ್ಯರಲ್ಲಿ ತಿಳಿಸಿದಾಗ ಆತನನ್ನು ಪರೀಕ್ಷೆ ನಡೆಸಿದಾಗ ರೋಗ ಲಕ್ಷಣಗಳು ಕಂಡು ಬಂದ ಕಾರಣ ವೈದ್ಯರು ಬೈಲಾಟರಲ್ ಲ್ಯಾಪರೊಸ್ಕೋಪಿಕ್ ಅಡ್ರಿನಾಲೆಕ್ಟಮಿಗೆ ಒಳಪಡಿಸಿದರು. ಈಗ ಇಬ್ಬರೂ ಸಂಪೂರ್ಣ ಗುಣಮುಖರಾಗಿರುತ್ತಾರೆ.
ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ಶಿವಕುಮಾರ್ ಹಿರೇಮಠ ಮತ್ತು ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯ ಡೀನ್ ಡಾ| ಪಿ.ಎಸ್. ಪ್ರಕಾಶ್ ಮಾರ್ಗದರ್ಶನ ನೀಡಿದ್ದರು.