Advertisement

ಹದಗೆಟ್ಟಿರುವ ರಸ್ತೆಗಳ ಶೀಘ್ರ ದುರಸ್ತಿ ಅಗತ್ಯ

07:22 PM Nov 02, 2021 | Team Udayavani |

ಮಹಾನಗರ: ನಗರವು ಭೌಗೋಳಿಕವಾಗಿ ಘಟ್ಟದ ಮೇಲಿನ ಬಯಲು ಸೀಮಯಂತೆ ಸಮತಟ್ಟು ಪ್ರದೇಶವಾಗಿರದೆ ಬೆಟ್ಟ, ಗುಡ್ಡಗಳಿಂದ ಕೂಡಿದ ಏರು-ತಗ್ಗು ಪ್ರದೇಶವಾಗಿದೆ. ಹೀಗಾಗಿ, ಹಲವೆಡೆ ಒಳರಸ್ತೆಗಳು ಕೂಡ ಏರು-ತಗ್ಗು ಸ್ವರೂಪದಲ್ಲಿದ್ದು, ತಿರುವು ಮುರುವುಗಳಿಂದ ಕೂಡಿವೆ. ಪಾಲಿಕೆ ವ್ಯಾಪ್ತಿಯ ಬೆಂದೂರು, ಮರೋಳಿ, ಪದವು ಪೂರ್ವ ಮತ್ತು ಪದವು ಸೆಂಟ್ರಲ್‌ ವಾರ್ಡ್‌ಗಳ ವ್ಯಾಪ್ತಿಯ ಹೆಚ್ಚಿನ ಒಳರಸ್ತೆಗಳು ಇದೇ ಸ್ವರೂಪದ್ದು.

Advertisement

ಪದವು ಸೆಂಟ್ರಲ್‌ ವಾರ್ಡ್‌ನ ಕೊಂಗುರು ಮಠ ರಸ್ತೆಯಲ್ಲಿ ಡಾಮರು ಕಾಣುವುದೇ ಇಲ್ಲ. ಈ ರಸ್ತೆಯು ಕಲ್ಲು, ಮಣ್ಣುಗಳಿಂದ ಕೂಡಿದ್ದು, ಸಂಪೂರ್ಣ ಕೆಸರುಮಯವಾಗಿದೆ. ರಸ್ತೆಯ ಒಂದು ಬದಿ ಪ್ರಪಾತ ಇದ್ದು, ಕೆಳಭಾಗದಲ್ಲಿ ರೈಲು ಹಳಿ ಇದೆ. ಈ ವರ್ಷದ ಮಳೆಗಾಲದಲ್ಲಿ ಈ ರಸ್ತೆಯ ಪಾರ್ಶ್ವ ಕುಸಿದ ಸುಮಾರು 100 ಅಡಿ ಆಳದಲ್ಲಿರುವ ರೈಲು ಹಳಿಯ ಮೇಲೆ ಬಿದ್ದ ಕಾರಣ ಕೆಲವು ದಿನ ಈ ಮಾರ್ಗದಲ್ಲಿ ರೈಲು ಸಂಚಾರ ಅಸ್ತವ್ಯಸ್ತಗೊಂಡಿತ್ತು. ಇದೀಗ ರೈಲು ಮಾರ್ಗದ ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಇದಕ್ಕೆ ಸಂಬಂಧಿಸಿದ ಲಾರಿಗಳು ಈ ಮಾರ್ಗದಲ್ಲಿ ನಿರಂತರ ಓಡಾಡುತ್ತಿರುವುದರಿಂದ ಸಂಪೂರ್ಣ ರಸ್ತೆ ಹಾಳಾಗಿ, ಸಂಚಾರ ದುಸ್ತರವಾಗಿದೆ. ಇದೇ ವಾರ್ಡ್‌ನ ಇನ್ನೊಂದು ಕಡೆ ಶಕ್ತಿನಗರ ಕ್ಯಾಸ್ತೆಲಿನೊ ಕಾಲನಿಯಿಂದ ಕುಲಶೇಖರ ಅಡ್ಡ ರಸ್ತೆ ತನಕದ ಒಳ ರಸ್ತೆ ಕೂಡ ಕೆಟ್ಟು ಹೋಗಿವೆ.

ಹಾಗೆಯೇ, ಪದವು ಪೂರ್ವ ವಾರ್ಡ್‌ ಕುಡುಪು, ಬೈತುರ್ಲಿ, ಪಾಲ್ದನೆ, ಭಾಗಶಃ ಕುಲಶೇಖರ, ಕೆಲರಾಯ್‌ ಪ್ರದೇಶಗಳನ್ನು ಒಳಗೊಂಡಿದ್ದು, ಈ ವಾರ್ಡ್‌ ವ್ಯಾಪ್ತಿಯ ಕೆಲವು ಒಳ ರಸ್ತೆಗಳು ಕೆಟ್ಟು ಹೋಗಿದ್ದು, ಉಳಿದಂತೆ ಬಹುತೇಕ ಒಳರಸ್ತೆಗಳು ಸಾಧಾರಣವಾಗಿ ಸುಸ್ಥಿತಿಯಲ್ಲಿವೆ. ಆದರೆ ಎಲ್ಲ ಮನೆಗಳಿಗೆ ಒಳರಸ್ತೆಯ ಸಂಪರ್ಕವಿಲ್ಲದಿರುವುದು ಈ ವಾರ್ಡ್‌ನ ವಿಶೇಷತೆ. ಕೆಲರಾಯ್‌ ಟೌನ್‌ಪ್‌- ಮುರ ರಸ್ತೆ ನಿರ್ಮಾಣ ಅರ್ಧದಲ್ಲಿಯೇ ಬಾಕಿ ಉಳಿದಿದ್ದು, ಜಾಗ ಬಿಟ್ಟು ಕೊಡುವ ವಿಚಾರದಲ್ಲಿ ಕೆಲವರು ನ್ಯಾಯಾಲಯದ ಮೆಟ್ಟಲೇರಿದ್ದರಿಂದ ರಸ್ತೆ ನಿರ್ಮಾಣ ಸಂಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಕುಡುಪು- ಪಿಲಿಕುಮೇರು- ಕೆಲರಾಯ್‌ ರಸ್ತೆ ನಿರ್ಮಾಣ ಕೂಡ ಅರ್ಧದಲ್ಲಿ ಇದೆ. ರಸ್ತೆ ಸಂಪರ್ಕದಂತಹ ಮೂಲಸೌಲಭ್ಯ ಕಲ್ಪಿಸುವ ವಿಚಾರದಲ್ಲಿ ಜನರು ಪಾಲಿಕೆಯ ಜತೆ ಸಹಕರಿಸುವ ಆವಶ್ಯಕತೆ ಇದೆ.

ಇದನ್ನೂ ಓದಿ:ಕೋವಿಡ್‌ನಿಂದ ನಷ್ಟದಲ್ಲಿವೆ ಸಾರಿಗೆ ಸಂಸ್ಥೆಗಳು

ಬೆಂದೂರು ವಾರ್ಡ್‌ನ ಎಲ್ಲ ಒಳರಸ್ತೆಗಳು ಸುಃಸ್ಥಿತಿಯಲ್ಲಿ ಇಲ್ಲ. ಬೆಥನಿ ಕಾನ್ವೆಂಟ್‌ ರಸ್ತೆಯ ಸುಧಾರಣೆ ನನೆಗುದಿಗೆ ಬಿದ್ದಿದೆ. ಈ ರಸ್ತೆ ವಿಸ್ತರಣೆಗೊಂಡು ಡಾಮರು ಅಥವಾ ಕಾಂಕ್ರೀಟ್‌ ಕಾಣಬೇಕಾಗಿದೆ. ಇಲ್ಲಿ ಗ್ಯಾಸ್‌ ಪೈಪ್‌ಲೈನ್‌, ನೀರಿನ ಪೈಪ್‌ಲೈನ್‌ ಕಾಮಗಾರಿ ನಡೆಯುತ್ತಿದ್ದು, ಒಳ ಚರಂಡಿ ನಿರ್ಮಾಣವಾಗ ಬೇಕಿದೆ. ಈ ಕಾಮಗಾರಿಗಳೆಲ್ಲ ಮುಗಿದ ಬಳಿಕ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ ಎನ್ನಲಾಗುತ್ತಿದೆ.

Advertisement

ಹಲವೆಡೆ ಹೊಂಡ ಗುಂಡಿ
ಮರೋಳಿ ವಾರ್ಡ್‌ ವ್ಯಾಪ್ತಿಯ ತಾತಾವು ರಸ್ತೆ (ಮರೋಳಿ ರಂಗ ಮಂದಿರ- ಅಮೃತನಗರ ರೋಡ್‌) ಕೆಟ್ಟು ಹೋಗಿದೆ. ರಾಷ್ಟ್ರೀಯ ಹೆದ್ದಾರಿ 66ರ ಜಯನಗರ-ಬಜ್ಜೋಡಿ -ಮಾರಿಕಾಂಬಾ ದೇವಸ್ಥಾನ ರಸ್ತೆಯು ಕೆಲವು ಕಡೆ ಹಾಳಾಗಿದೆ. ಹೆದ್ದಾರಿಯಿಂದ ಜಯನಗರ ಅಡ್ಡ ರಸ್ತೆಗೆ ಪ್ರವೇಶಿಸುವಲ್ಲಿಯೇ ಡಾಮರು ಸವೆದು ಹೋಗಿ ಹೊಂಡ ಗುಂಡಿಗಳಾಗಿವೆ. ಇಲ್ಲಿಯೇ ಸ್ವಲ್ಪ ಮುಂದಕ್ಕೆ ಹೋದರೆ ಚರಂಡಿ ದುರಸ್ತಿಯ ಮಣ್ಣನ್ನು ರಸ್ತೆ ಬದಿ ಹಾಕಿದ್ದು, ಇದರಿಂದ ರಸ್ತೆ ಅಗಲ ಕಿರಿದಾಗಿ ಸುಗಮ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಹಾಗೆಯೇ ಬಜ್ಜೋಡಿ ಚರ್ಚ್‌ ಹಿಂಭಾಗದ ಒಳ ರಸ್ತೆಗಳು ಸುಧಾರಣೆ ಆಗಬೇಕಾಕಿದೆ. ಮರಿಯ ಪ್ರೇಮ್‌ ಗುಡ್ಡೆ- ಶಾಂತಿಗುರಿ (ಮರೋಳಿ) ಮಧ್ಯೆ ಈಗ ಓಣಿ ಮಾತ್ರ ಇದ್ದು, ಇಲ್ಲಿ ಹೊಸ ರಸ್ತೆ ನಿರ್ಮಾಣ ಆಗಬೇಕಾಗಿದೆ.

ನಾಗರಿಕರ ಬೇಡಿಕೆಗಳೇನು?
-ಕೊಂಗುರು ಮಠ ರಸ್ತೆಗೆ ತುರ್ತಾಗಿ ಡಾಮರು ಹಾಕಿ ಕಾಯಕಲ್ಪ ನೀಡಬೇಕಿದೆ.
– ರಸ್ತೆ ಸಂಪರ್ಕದಂತಹ ಮೂಲಸೌಕರ್ಯ ಕಲ್ಪಿಸುವ ವಿಚಾರದಲ್ಲಿ ಜನರು ನ್ಯಾಯಾಲಯದ ಮೊರೆ ಹೋಗುವ ಬದಲು ಪಾಲಿಕೆಯ ಜತೆ ಸಹಕರಿಸಬೇಕು. ಪಾಲಿಕೆ ಕೂಡ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಸ್ತೆಗೆ ಭೂಸ್ವಾಧೀನ ಮಾಡುವ ಬಗ್ಗೆ ಗಮನ ಹರಿಸಬೇಕಿದೆ.
-ಒಳ ಚರಂಡಿ, ನೀರಿನ ಪೈಪ್‌ಲೈನ್‌, ಚರಂಡಿ ಮತಿತ್ತರ ಕಾಮಗಾರಿಗಳನ್ನು ಪೂರ್ತಿಗೊಳಿಸಿದ ಬಳಿಕವೇ ರಸ್ತೆ ಕಾಮಗಾರಿ ಕೈಗೆತ್ತಿಕೊಂಡರೆ ಪದೇ ಪದೇ ರಸ್ತೆ ಅಗೆಯುವ ಪ್ರಮೇಯ ಬರುವುದಿಲ್ಲ.

ಬೆಂದೂರು, ಮರೋಳಿ, ಪದವು ಪೂರ್ವ, ಪದವು ಸೆಂಟ್ರಲ್‌ ವಾರ್ಡ್‌ಗಳಲ್ಲಿ ಉದಯವಾಣಿ ಸುದಿನ ತಂಡ ಸಂಚರಿಸಿ, ಮಾಹಿತಿ ಸಂಗ್ರಹಿಸಿದ್ದು ಈ ವಾರ್ಡ್‌ ಗಳಲ್ಲಿನ ಹೆಚ್ಚಿನ ಒಳ ರಸ್ತೆಗಳು ಸುಃಸ್ಥಿತಿಯಲ್ಲಿದ್ದರೆ, ಇನ್ನು ಕೆಲವು ರಸ್ತೆಗಳ ಸುಧಾರಣೆಯಾಗಬೇಕಿದೆ; ಆದರೆ ಕೆಲವು ಕಡೆ ಮಾತ್ರ ರಸ್ತೆಗಳು ತೀರಾ ಕೆಟ್ಟು ಹದಗೆಟ್ಟಿದ್ದು, ತುರ್ತಾಗಿ ರಿಪೇರಿಗೊಳಿಸುವತ್ತ ಪಾಲಿಕೆ ಗಮನಹರಿಸಬೇಕಿದೆ ಎಂಬುದು ಗಮನಕ್ಕೆ ಬಂದಿದೆ. ಈ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಇಲ್ಲಿನ ಸಮಸ್ಯೆಗಳಿಗೆ ಸ್ಪಂದಿಸಿ ಶೀಘ್ರ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ. ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು 9900567000 ನಂಬರ್‌ಗೆ ಕಳುಹಿಸಬಹುದು.

-ಹಿಲರಿ ಕ್ರಾಸ್ತಾ

Advertisement

Udayavani is now on Telegram. Click here to join our channel and stay updated with the latest news.

Next