ಸುವರ್ಣವಿಧಾನಸೌಧ: ಗೋಮಾಳ ಸೇರಿ ಸರ್ಕಾರಿ ಜಮೀನು ಮಂಜೂರುದಾರರಿಗೆ ಏಕವ್ಯಕ್ತಿ ಕೋರಿಕೆ ಮೇಲೆ ಸಲ್ಲಿಸಿದ ಸಮೀಕ್ಷೆ ಅರ್ಜಿಗಳನ್ನು ಶೀಘ್ರವೇ ವಿಲೇವಾರಿ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ ಹೇಳಿದರು.
ಬುಧವಾರ ಪರಿಷತ್ತಿನಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿ, ಸರ್ಕಾರಿ ಜಮೀನು ಪೋಡಿ ವಿಚಾರದಲ್ಲಿ ಈವರೆಗೂ ಅನೇಕ ಗೊಂದಲಗಳಿದ್ದವು. ಮೊದಲು ನೀಡಿದವರಿಗೆ ಇದನ್ನು ಕೊಡಬೇಕಾ ಅಥವಾ ನಂತರ ಪಡೆದವರಿಗೆ ಕೊಡಬೇಕಾ ಎನ್ನುವ ಸಮಸ್ಯೆ ಎದುರಾಗಿದೆ. ಈ ವಿಚಾರದಲ್ಲಿ ಅನೇಕರು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದು, ಲಕ್ಷಾಂತರ ಪ್ರಕರಣಗಳು ಅಡಕತ್ತರಿಯಲ್ಲಿ ಸಿಲುಕಿಕೊಂಡಿವೆ.
ಇಲ್ಲಿ ಭೂಮಿ ಯಾರಿಗೆ ನೀಡಬೇಕು ಎಂಬುದನ್ನು ನಿರ್ಧಾರ ಮಾಡಬೇಕಾಗಿದೆ. 2019 ರಿಂದ 2021ರವರೆಗೆ 193687 ಅರ್ಜಿಗಳು ಹಾಗೂ ಆರ್‌ಟಿಸಿ ತಿದ್ದುಪಡಿಗೆ 373234 ಸೇರಿ ಒಟ್ಟು 566921 ಅರ್ಜಿಗಳು ಬಂದಿವೆ. ಈ ಎಲ್ಲ ಅರ್ಜಿಗಳನ್ನು ಕಂದಾಯ ಅದಾಲತ್‌ನಲ್ಲಿ ಇತ್ಯರ್ಥ ಪಡಿಸಲಾಗಿದೆ. ಈ ಪೈಕಿ 193687 ಅರ್ಜಿಗಳು ಇತ್ಯರ್ಥ ಪಡಿಸಲಾಗಿದೆ ಎಂದರು.
ಇದನ್ನೂ ಓದಿ:ಹಿರಿಯ ಸಾಹಿತಿ ಮಳಿಯಪ್ಪ ಪತ್ತಾರ ನಿಲೋಗಲ್ ಹೃದಯಾಘಾತದಿಂದ ನಿಧನ
ಇದೀಗ 2000 ಭೂ ಸಮೀಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಇನ್ನೂ ಎರಡು ಸಾವಿರ ಭೂ ಸಮೀಕ್ಷಕರನ್ನು ನೇಮಿಸಿಕೊಳ್ಳಲಾಗುವುದು. ಹೀಗಾಗಿ ಹೆಚ್ಚು ಸಮೀಕ್ಷಕರು ಬಂದ ನಂತರವಷ್ಟೇ ಇದಕ್ಕೆ ಪರಿಹಾರ ಸಿಕ್ಕುತ್ತದೆ. ಕೂಡಲೇ ಏಕವ್ಯಕ್ತಿ ಅರ್ಜಿಗಳ ಶೀಘ್ರ ವಿಲೇವಾರಿ ಮಾಡುತ್ತೇವೆ ಎಂದು ಭರವಸೆ ನೀಡಿದರು.