ಕೊಲ್ಲಂ: ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಏಳು ವರ್ಷದ ಬಾಲಕಿಯ ಕುಟುಂಬವನ್ನು ಊರಿನಿಂದಲೇ ಓಡಿಸಿದ ಘಟನೆ ಕೊಲ್ಲಂನಲ್ಲಿ ನಡೆದಿದೆ. ಅತ್ಯಾಚಾರ ಎಸಗಿದ ಆರೋಪಿ ರಾಜೇಶ್ ಮತ್ತು ಬಾಲಕಿಯ ಚಿಕ್ಕಮ್ಮನಿಗೆ ಅನೈತಿಕ ಸಂಬಂಧವಿತ್ತು. ಅವರು ಮದುವೆಯಾಗದೆ ಜತೆಯಾಗಿ ವಾಸಿಸುತ್ತಿದ್ದರು. ಮನೆಯವರ ನಡತೆ ಸರಿ ಇಲ್ಲದಿರುವುದರಿಂದಲೇ ಅತ್ಯಾಚಾರ ಸಂಭವಿಸಿದೆ ಎಂದು ತೀರ್ಮಾನಿಸಿದ ಊರಿನವರು ಈ ಕುಟುಂಬಕ್ಕೆ ಬಹಿಷ್ಕಾರ ಹಾಕಿ ಓಡಿಸಿದ್ದಾರೆ.
ಇನ್ನೂ ಆಘಾತಕಾರಿ ವಿಷಯವೆಂದರೆ ತಾಯಿಗೆ ಬಾಲಕಿಯ ಅಂತಿಮ ದರ್ಶನ ಪಡೆಯುವ ಅವಕಾಶವೂ ಸಿಕ್ಕಿಲ್ಲ. ಊರಿಗೆ ವಾಪಸು ಬಂದರೆ ಕೊಂದು ಹಾಕುವುದಾಗಿ ಬೆದರಿಕೆಯೊಡ್ಡಿದ ಕಾರಣ ತಾಯಿಗೆ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ.
ತಾಯಿಯ ಸಹೋದರಿಯ ಜತೆಗೆ ಆರೋಪಿ ರಾಜೇಶ್ ಅನೈತಿಕ ಸಂಬಂಧ ಹೊಂದಿದ್ದ. ಬಾಲಕಿಯನ್ನು ಟ್ಯೂಶನ್ ಕ್ಲಾಸ್‌ಗೆ ಬಿಡುತ್ತೇನೆ ಎಂದು ಕರೆದುಕೊಂಡು ಹೋಗಿ ದಾರಿ ಮಧ್ಯೆ ನಿರ್ಜನ ಸ್ಥಳದಲ್ಲಿ ಅತ್ಯಾಚಾರ ಎಸಗಿ ಉಸಿರು ಕಟ್ಟಿಸಿ ಕೊಂದು ಎಸೆದಿದ್ದ. ಬಾಲಕಿಗೆ ಈ ಗತಿಯಾಗಲು ಆಕೆಯ ಮನೆಯವರೇ ಕಾರಣ. ತಾಯಿ ಮತ್ತು ಸಹೋದರಿಯ ನಡತೆ ಸರಿಯಿಲ್ಲದ ಕಾರಣ ಆರೋಪಿಗೆ ಅತ್ಯಾಚಾರ ಎಸಗಲು ಅವಕಾಶ ಸಿಕ್ಕಿದೆ ಎಂದು ಊರಿನ ಜನರು ಆರೋಪಿಸುತ್ತಿದ್ದಾರೆ.
ಬಾಲಕಿ ಶವ ಪತ್ತೆಯಾದ ದಿನ ಊರಿನ ಗಂಡಸರು ಮತ್ತು ಹೆಂಗಸರು ನಮ್ಮ ಮನೆಗೆ ಬಂದು ತಂದೆ, ತಾಯಿ ಹಾಗೂ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಊರಬಿಟ್ಟು ಹೋಗದಿದ್ದರೆ ಬದುಕಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ. ಪೊಲೀಸರು ಇಲ್ಲದಿರುತ್ತಿದ್ದರೆ ಅಂದೇ ನಾವು ಕೂಡ ಸಾಯುತ್ತಿದ್ದೆವು ಎಂದು ಬಾಲಕಿಯ ತಾಯಿ ಹೇಳಿದ್ದಾರೆ.
ರಾಜ್ಯ ಮಹಿಳಾ ಆಯೋಗ ಈ ಕುಟುಂಬದ ನೆರವಿಗೆ ಧಾವಿಸಿದೆ. ಘಟನೆಯ ತನಿಖೆಗೆ ಆದೇಶಿಸಿರುವ ಆಯೋಗ ಇದೇ ವೇಳೆ ಬಾಲಕಿಯ ತಾಯಿಗೆ ಸರಕಾರಿ ನೌಕರಿಯ ಕೊಡುಗೆ ನೀಡಿದೆ.