Advertisement

Kota: ಸಂಚಾರಿ ಕಮ್ಮಾರಸಾಲೆ; ಇಡೀ ಕುಟುಂಬವೇ ಭಾಗಿ!

02:40 PM Oct 30, 2024 | Team Udayavani |

ಕೋಟ: ಸಂಚಾರಿ ಕಮ್ಮಾರಸಾಲೆಯೊಳಗೆ ಕುಲುಮೆಯಲ್ಲಿ ಕಾಯುತ್ತಿದ್ದ ಕಬ್ಬಿಣವನ್ನು ಹದಮಾಡಿ ಕತ್ತಿ, ಗುದ್ದಲಿ ತಯಾರಿಸುತ್ತಿರುವ ಮನೆಯ ಯಜಮಾನ. ಸಹಾಯಕಿಯಾಗಿ ಸಹಕರಿಸುತ್ತಿರುವ ಪತ್ನಿ. ತಂದೆ ತಯಾರಿಸಿದ ಹಾರೆ, ಕತ್ತಿಗೆ ಮರದ ಹಿಡಿಕೆಯನ್ನು ಅಳವಡಿಸಿ ಮಾರಾಟಕ್ಕೆ ಸಿದ್ಧಗೊಳಿಸುತ್ತಿರುವ ಪುತ್ರ. ಸಿದ್ಧಗೊಂಡ ವಸ್ತುಗಳ ಮಾರಾಟದಲ್ಲಿ ತೊಡಗಿರುವ ಮಗಳು. ಹೀಗೆ ಒಂದು ಇಡೀ ಕುಟುಂಬವೇ ಕಮ್ಮಾರಿಕೆ ಕಾಯಕದಲ್ಲಿ ಮಗ್ನವಾಗಿತ್ತು. ಇದು ಬ್ರಹ್ಮಾವರದ ಕೃಷಿ ಮೇಳದಲ್ಲಿ ಎಲ್ಲರ ಗಮನ ಸೆಳೆದ ದೃಶ್ಯ. ಕಾರ್ಕಳ ಬೈಲೂರು ಸಮೀಪ ಎರ್ಲಪಾಡಿಯ ನಿವಾಸಿ ದಾಮೋದರ ಆಚಾರ್ಯರ ಅವರೇ ಈ ಸಂಚಾರಿ ಕಮ್ಮಾರಸಾಲೆಯ ಮಾಲಕರು.

Advertisement

ಏನಿದು ಸಂಚಾರಿ ಕಮ್ಮಾರಸಾಲೆ?
ದಾಮೋದರ ಆಚಾರ್ಯ ಅವರು ಸುಮಾರು 25 ವರ್ಷಗಳಿಂದ ಕಮ್ಮಾರ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ವೃತ್ತಿಗೆ ಸ್ವಲ್ಪ ಮಟ್ಟಿನ ಬೇಡಿಕೆ ಕುಸಿದಿದ್ದರಿಂದ ಕಳೆದ 15 ವರ್ಷಗಳಿಂದ ಸಂಚಾರಿ ಕಮ್ಮಾರಸಾಲೆಯ ಹೊಸ ಆಲೋಚನೆಯನ್ನು ಜಾರಿಗೆ ತಂದಿದ್ದಾರೆ. ಈ ಕುಟುಂಬ ಕಾಸರಗೋಡಿನಿಂದ-ಬೈಂದೂರಿನ ತನಕ ನಡೆಯುವ ಕೃಷಿ ಮೇಳ, ಆಳ್ವಾಸ್‌ ವಿರಾಸತ್‌ ಮೊದಲಾದ ದೊಡ್ಡ-ದೊಡ್ಡ ಕಾರ್ಯಕ್ರಮಗಳಿಗೆ ತೆರಳಿ ಸ್ಥಳದಲ್ಲೇ ಕುಲುಮೆ ರಚಿಸಿಕೊಂಡು, ಕಬ್ಬಿಣವನ್ನು ಹದಮಾಡಿ ವಿವಿಧ ಸಲಕರಣೆಗಳನ್ನು ಸಿದ್ಧಪಡಿಸುತ್ತದೆ. ಆಧುನಿಕ ಯುಗದಲ್ಲಿ, ಕಮ್ಮಾರಿಕೆಯನ್ನು ತಾತ್ಸಾರವಾಗಿ ಕಾಣುವ ಕಾಲಘಟ್ಟದಲ್ಲೂ ಇವರ ಇಡೀ ಕುಟುಂಬವೇ ಈ ವೃತ್ತಿಯಲ್ಲಿ ತೊಡಗಿರುವುದು ಹಾಗೂ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಸ್ಥಳದಲ್ಲಿ ವಸ್ತುಗಳನ್ನು ತಯಾರಿಸುವುದು ವಿಶೇಷವಾಗಿದೆ.

ಮನೆಯ ವಾತಾವರಣ
ಕಮ್ಮಾರಸಾಲೆಯೊಳಗಿನಿಂದ ನಮ್ಮ ಸಂಸಾರ ಆನಂದ ಸಾಗರ ಎನ್ನುವ ಹಾಡು ರೇಡಿಯೊದಿಂದ ತೇಲಿಬರುತ್ತಿತ್ತು. ಸ್ಥಳದಲ್ಲೇ ಅನ್ನವನ್ನು ಬೇಯುತ್ತಿತ್ತು. ಅಲ್ಲೇ ಮಲಗುವ ವ್ಯವಸ್ಥೆಯೂ ಇತ್ತು. ಸಾಲೆಯೊಳಗೆ ಮನೆಯ ನಾಯಿ ಬೆಚ್ಚಗೆ ಮಲಗಿತ್ತು. ಹೀಗಾಗಿ ಒಂದು ಮನೆಯ ರೀತಿಯ ವಾತಾವರಣ ಅಲ್ಲಿತ್ತು.

ಯಾಂತ್ರೀಕರಣದ ಪರಿಣಾಮವಾಗಿ ಕೃಷಿ, ತೋಟಗಾರಿಕೆ ಕ್ಷೇತ್ರಗಳಿಗೆ ಯಂತ್ರಗಳು ಆವರಿಸಿಕೊಂಡಿದ್ದರಿಂದ ಇಂತಹ ಸಾಂಪ್ರದಾಯಿಕ ಪರಿಕರಗಳಿಗೆ ಬೇಡಿಕೆ ಕುಸಿದರೂ ಕತ್ತಿ, ಹಾರೆ ಮೊದಲಾದ ಗೃಹಬಳಕೆಯ ಕೆಲವು ಸಲಕರಣೆಗಳು ಇನ್ನೂ ಬೇಡಿಕೆ ಉಳಿಸಿಕೊಂಡಿದೆ. ನನ್ನ ಈ ಕಾರ್ಯಕ್ಕೆ ಪತ್ನಿ ಪುಷ್ಪವತಿ, ಮಗ ಸತ್ಯಪ್ರಸಾದ, ಮಗಳು ಧನ್ಯಶ್ರೀ ಸಹಕಾರ ನೀಡುತ್ತಿದ್ದಾರೆ ಹಾಗೂ ಡಾ| ಹೆಗ್ಗಡೆ, ಮೋಹನ್‌ ಆಳ್ವ, ಕಲ್ಕೂರ ಪ್ರತಿಷ್ಠಾನ ಕೂಡ ಸಹಕಾರ ನೀಡಿದ್ದಾರೆ ಎನ್ನುತ್ತಾರೆ ದಾಮೋದರ ಆಚಾರ್ಯರು.

ಹೆಮ್ಮೆ ಇದೆ
ಕಮ್ಮಾರಿಕೆ ನಮ್ಮ ಕುಲಕುಸುಬು. ಆದರೆ ಇಂದಿನ ಆಧುನಿಕ ಕಾಲದಲ್ಲಿ ಇದರಿಂದಲೇ ಜೀವನ ಸಾಗಿಸುವುದು ತುಂಬಾ ಕಷ್ಟ. ಹೀಗಾಗಿ ಎಲ್ಲ ಕಡೆ ಸಂಚಾರ ಮಾಡುವ ಮೂಲಕ ಈ ಉದ್ಯೋಗಕ್ಕೆ ಹೊಸ ರೂಪ ನೀಡಿದ್ದೇವೆ. ಈಗ ಜನರಿಂದ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಕುಲಕಸಬು ಉಳಿಸಿಕೊಂಡ ಹೆಮ್ಮೆ ಕೂಡ ಇದೆ.
– ದಾಮೋದರ ಆಚಾರ್ಯ, ಸಂಚಾರಿ ಕುಲುಮೆಯ ಮಾಲಕರು

Advertisement
Advertisement

Udayavani is now on Telegram. Click here to join our channel and stay updated with the latest news.

Next