ತಿರುವನಂತಪುರ: ನಾಯಕ ಮಾಯಾಂಕ್ ಅಗರ್ವಾಲ್ ಅವರ ಅಮೋಘ 208 ರನ್ ಸಾಹಸದಿಂದ ಕೇರಳ ವಿರುದ್ಧದ ರಣಜಿ ಪಂದ್ಯದಲ್ಲಿ ಕರ್ನಾಟಕ ಇನ್ನಿಂಗ್ಸ್ ಮುನ್ನಡೆ ಗಳಿಸಲು ಯಶಸ್ವಿಯಾಗಿದೆ.
ಕೇರಳದ 342 ರನ್ನುಗಳ ಮೊದಲ ಇನ್ನಿಂಗ್ಸ್‌ಗೆ ಜವಾಬು ನೀಡುತ್ತಿರುವ ಕರ್ನಾಟಕ, 3ನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 410 ರನ್ ಪೇರಿಸಿದೆ.
2ಕ್ಕೆ 137 ರನ್ ಮಾಡಿದಲ್ಲಿಂದ ಕರ್ನಾಟಕ ಗುರುವಾರದ ಆಟ ಮುಂದುವರಿಸಿತ್ತು. ಆಗ ಮಾಯಾಂಕ್ ಅಗರ್ವಾಲ್ 87 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದರು. ಕೇರಳ ಬೌಲರ್‌ಗಳ ಮೇಲೆರಗುತ್ತ ಬ್ಯಾಟಿಂಗ್ ಬೆಳೆಸಿ ದ್ವಿಶತಕ ಸಂಭ್ರಮ ಆಚರಿಸಿದರು. 360 ಎಸೆತಗಳ ಈ ಕಪ್ತಾನನ ಆಟದಲ್ಲಿ 17 ಬೌಂಡರಿ, 5 ಸಿಕ್ಸರ್ ಒಳಗೊಂಡಿತ್ತು. ಅವರು 5ನೇ ವಿಕೆಟ್ ರೂಪದಲ್ಲಿ ಪೆವಿಲಿಯನ್ ಸೇರುವಾಗ ಕರ್ನಾಟಕ ಕೇರಳದ ಮೊತ್ತಕ್ಕಿಂತ ಕೇವಲ 6 ರನ್ ಹಿಂದಿತ್ತು.
ಮತ್ತೋರ್ವ ನಾಟೌಟ್ ಬ್ಯಾಟರ್ ನಿಕಿನ್ ಜೋಸ್ 54 ರನ್ ಹೊಡೆದರು. ಅಗರ್ವಾಲ್-ಜೋಸ್ 3ನೇ ವಿಕೆಟಿಗೆ 151 ರನ್ ಒಟ್ಟುಗೂಡಿಸಿ ಕರ್ನಾಟಕಕ್ಕೆ ಮೇಲುಗೈ ಒದಗಿಸಿದರು. ಶ್ರೇಯಸ್ ಗೋಪಾಲ್ ಅವರಿಂದ 48 ರನ್ ಸಂದಾಯವಾಯಿತು. ಈ ನಡುವೆ ಮನೀಷ್ ಪಾಂಡೆ ಗೋಲ್ಡನ್ ಡಕ್ ಅವಮಾನಕ್ಕೆ ಸಿಲುಕಿದರು. ಶರತ್ ಬಿ.ಆರ್. 47 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಮುಂಬಯಿಗೆ ಸೋಲಿನ ಭೀತಿ
ಹೊಸದಿಲ್ಲಿ: ಆತಿಥೇಯ ದಿಲ್ಲಿ ವಿರುದ್ಧದ “ಬಿ’ ವಿಭಾಗದ ಪಂದ್ಯದಲ್ಲಿ ಮುಂಬಯಿ ಸೋಲಿನ ಭೀತಿಗೆ ಸಿಲುಕಿದೆ. ದ್ವಿತೀಯ ಸರದಿಯಲ್ಲಿ 9 ವಿಕೆಟಿಗೆ 168 ರನ್ ಮಾಡಿರುವ ಅಜಿಂಕ್ಯ ರಹಾನೆ ಪಡೆ, ಕೇವಲ 92 ರನ್ ಮುನ್ನಡೆ ಹೊಂದಿದೆ.
ಮುಂಬಯಿ ಮೊದಲ ಇನ್ನಿಂಗ್ಸ್‌ನಲ್ಲಿ 293 ರನ್ ಮಾಡಿದರೆ, ದಿಲ್ಲಿ 369 ರನ್ ಗಳಿಸಿತು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಮುಂಬಯಿ ತಂಡ ಮಧ್ಯಮ ವೇಗಿ ದಿವಿಜ್ ಮೆಹ್ರಾ ದಾಳಿಗೆ ಕುಸಿಯಿತು. ಮೆಹ್ರಾ 29 ರನ್ನಿಗೆ 5 ವಿಕೆಟ್ ಕೆಡವಿದರು.