Advertisement

ರಣಜಿ ಪಂದ್ಯದ ವೇಳೆ ಮೈದಾನಕ್ಕೆ ನುಗ್ಗಿದ ಕಾರು

12:01 PM Nov 04, 2017 | |

ಹೊಸದಿಲ್ಲಿ: ಇಲ್ಲಿನ ಪಾಲಂನಲ್ಲಿರುವ ಏರ್‌ಫೋರ್ಸ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದಿಲ್ಲಿ ಮತ್ತು ಉತ್ತರಪ್ರದೇಶ ನಡುವಣ ರಣಜಿ ಪಂದ್ಯದ ವೇಳೆ ಗಂಭೀರ ಭದ್ರತಾ ಲೋಪದಿಂದಾಗಿ ವ್ಯಕ್ತಿಯೊಬ್ಬರು ಕಾರನ್ನು ನೇರವಾಗಿ ಮೈದಾನದೊಳಗೆ ನುಗ್ಗಿಸಿದರಲ್ಲದೇ ಪಿಚ್‌ತನಕ ಬಂದು ನಿಲ್ಲಿಸಿದರು. ಈ ಘಟನೆಯಿಂದ ಆಟಗಾರರು ಮತ್ತು ಅಧಿಕಾರಿಗಳು ಒಂದು ಕ್ಷಣ ದಿಗಿಲುಗೊಂಡರು.

Advertisement

ಈ ಘಟನೆ ವೇಳೆ ಅಂತಾರಾಷ್ಟ್ರೀಯ ಆಟಗಾರರಾದ ಗೌತಮ್‌ ಗಂಭೀರ್‌, ಇಶಾಂತ್‌ ಶರ್ಮ ಮತ್ತು ರಿಷಬ್‌ ಪಂತ್‌ ಅವರು ಮೈದಾನದಲ್ಲಿ ಉಪಸ್ಥಿತರಿದ್ದರು. ಇದೊಂದು ಗಂಭೀರ ಭದ್ರತಾ ವೈಫ‌ಲ್ಯವೆಂದು ಭಾವಿಸಲಾಗಿದ್ದು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಘಟನೆ ಬಗ್ಗೆ ವರದಿ ಸಲ್ಲಿಸುವಂತೆ ಅಧೀನ ಸಂಸ್ಥೆ ಸರ್ವೀಸಸ್‌ ನ್ಪೋರ್ಟ್ಸ್ ನಿಯಂತ್ರಣ ಮಂಡಳಿ (ಎಸ್‌ಎಸ್‌ಸಿಬಿ)ಗೆ ಸೂಚಿಸಿದೆ. ಘಟನೆ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಗಂಭೀರ್‌, ಇಶಾಂತ್‌ ಮತ್ತು ಮನನ್‌ ಶರ್ಮ ಅವರು 22 ಯಾರ್ಡ್‌ ಪಿಚ್‌ ಮಧ್ಯೆ ನಿಲ್ಲಿಸಿದ ಕಾರಿನ ಜತೆಗಿದ್ದಾರೆ.

ಪಂದ್ಯ ಮುಗಿಯಲು 20 ನಿಮಿಷಗಳಿರುವಾಗ ಸಂಜೆ 4.40 ನಿಮಿಷಕ್ಕೆ ಸಿಲ್ವರ್‌ ಗ್ರೇ ಬಣ್ಣದ ವಾಗನ್‌ ಆರ್‌ ಕಾರು ಹಠಾತ್‌ ಆಗಿ ಪಿಚ್‌ ಕಡೆ ಆಗಮಿಸಿತು. ಆಗ ಉತ್ತರ ಪ್ರದೇಶ ಎರಡನೇ ಇನ್ನಿಂಗ್ಸ್‌ ಆಡು ತ್ತಿತ್ತು. ಕಾರಿನ ಚಾಲಕ ಗಿರೀಶ್‌ ಶರ್ಮ ಎಂದು ಗುರುತಿಸಲಾಗಿದೆ. ಅವರು ಕಾರನ್ನು ನಿಲ್ಲಿಸುವ ಮೊದಲು ಪಿಚ್‌ ಮೇಲೆ ಎರಡು ಬಾರಿ ಕಾರನ್ನು ತಿರುಗಿಸಿದ್ದರು. 

ಏರ್‌ಫೋರ್ಸ್‌ ಮೈದಾನದ ಮುಖ್ಯ ದ್ವಾರದಲ್ಲಿ ಭದ್ರತಾ ಸಿಬಂದಿ ಇಲ್ಲದ ಕಾರಣ ಅವರು ಕಾರನ್ನು ನೇರವಾಗಿ ಮೈದಾನಕ್ಕೆ ನುಗ್ಗಿಸಿದ್ದಾರೆ ಮತ್ತು ಮುಖ್ಯ ಪೆವಿಲಿಯನ್‌ನ ಹಿಂದೆ ಇರುವ ಪಾರ್ಕಿಂಗ್‌ ಜಾಗದಲ್ಲಿ ಅವರು ಕಾರನ್ನು ನಿಲ್ಲಿಸುವ ಬದಲು ನೇರವಾಗಿ ಪಿಚ್‌ ಕಡೆ ಬಂದಿರಬೇಕೆಂದು ನಂಬಲಾಗಿದೆ. ಹೆಚ್ಚಾಗಿ ಸರಿಯಾಗಿ ಪರಿಶೀಲಿಸಿದ ಬಳಿಕ ಕಾರನ್ನು ಒಳಗಡೆ ಪ್ರವೇಶಿಸಲು ಅವಕಾಶ ನೀಡಲಾಗುತ್ತಿತ್ತು. ಆದರೆ ಭದ್ರತಾ ಸಿಬಂದಿ ದ್ವಾರದ ಬಳಿ ಇಲ್ಲದ ಕಾರಣ ಈ ಎಡವಟ್ಟು ಸಂಭವಿಸಿದೆ.

ಈ ಘಟನೆಯ ಬಳಿಕ ಭದ್ರತಾ ಸಿಬಂದಿ ಮುಖ್ಯ ದ್ವಾರವನ್ನು ಮುಚ್ಚಿದರು ಮತ್ತು ಚಾಲಕನನ್ನು ಏರ್‌ಫೋರ್ಸ್‌ ಮೈದಾನದ ಸಿಬಂದಿ ಬಂಧಿಸಿ ದಿಲ್ಲಿ ಪೊಲೀಸರ ವಶಕ್ಕೆ ಒಪ್ಪಿಸಿದರು.

Advertisement

ಗಂಭೀರ ವಿಷಯ: ಸಿಕೆ ಖನ್ನಾ
ಈ ಘಟನೆಯ ಬಗ್ಗೆ ಬಿಸಿಸಿಐ ತನಿಖೆ ನಡೆಸಲಿದೆ. ಇದೊಂದು ಗಂಭೀರ ಕಳವಳದ ವಿಷಯವಾದ ಕಾರಣ ಸಂಬಂಧಪಟ್ಟ ಇಲಾಖೆ ಈ ಕುರಿತು ಮುಂದಿನ ಕ್ರಮ ತೆಗೆದುಕೊಳ್ಳಲಿದೆ  ಮತ್ತು ಸರ್ವೀಸಸ್‌ ಕ್ರೀಡಾ ನಿಯಂತ್ರಣ ಮಂಡಳಿಯಿಂದ ವರದಿ ಕೇಳಲಿದೆ ಎಂದು ಬಿಸಿಸಿಐ ಪ್ರಭಾರ ಅಧ್ಯಕ್ಷ ಸಿಕೆ ಖನ್ನಾ ಹೇಳಿದ್ದಾರೆ. ಇದೊಂದು ಏರ್‌ಫೋರ್ಸ್‌ ಮೈದಾನದ ಭದ್ರತಾ ವ್ಯವಸ್ಥೆಯಲ್ಲಿನ ಲೋಪವಾಗಿದೆ. ಒಂದು ವೇಳೆ ಆ ವ್ಯಕ್ತಿ ದುರುದ್ದೇಶ ಇಟ್ಟುಕೊಂಡು ಬಂದಿದ್ದರೆ ಅಂತಾರಾಷ್ಟ್ರೀಯ ಕ್ರಿಕೆಟಿಗರ ಜೀವ ಅಪಾಯದಲ್ಲಿರುತ್ತಿತ್ತು ಎಂದು ಖನ್ನಾ ಆಘಾತ ವ್ಯಕ್ತಪಡಿಸಿದರು.

ಥ್ಯಾಂಕ್‌ ಗಾಡ್‌
ಥ್ಯಾಂಕ್‌ ಗಾಡ್‌, ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ. ಒಂದು ವೇಳೆ ನಡೆದಿದ್ದರೆ ಇದೊಂದು ಅತ್ಯಂತ ಗಂಭೀರ ಘಟನೆಯಾಗುತ್ತಿತ್ತು ಎಂದು ದಿಲ್ಲಿ ತಂಡದ ವ್ಯವಸ್ಥಾಪಕ ಶಂಕರ್‌ ಸೈನಿ ಹೇಳಿದರು. ಅವರು ಘಟನೆ ವೇಳೆ ಮೈದಾನದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next