ಬೆಂಗಳೂರು: ಆಲ್‌ರೌಂಡ್ ಆಟದ ಪ್ರದರ್ಶನ ನೀಡಿದ ಕರ್ನಾಟಕ ತಂಡವು ಪುದುಚೇರಿ ತಂಡದೆದುರಿನ ರಣಜಿ ಟ್ರೋಫಿ ಕ್ರಿಕೆಟ್ ಕೂಟದ ಪಂದ್ಯದಲ್ಲಿ ಇನ್ನಿಂಗ್ಸ್ ಮತ್ತು 7 ರನ್ನುಗಳಿಂದ ಜಯಭೇರಿ ಬಾರಿಸಿದೆ.
ಈ ಗೆಲುವಿನಿಂದ ಕರ್ನಾಟಕ “ಸಿ’ ಬಣದಲ್ಲಿ ಆಡಿದ ಎರಡು ಪಂದ್ಯಗಳಿಂದ ಹತ್ತಂಕ ಪಡೆದು ಅಗ್ರಸ್ಥಾನದಲ್ಲಿದೆ. ಕರ್ನಾಟಕ ಮೊದಲ ಪಂದ್ಯದಲ್ಲಿ ಡ್ರಾ ಸಾಧಿಸಿತ್ತು. ಆದರೆ ಪುದುಚೇರಿಗಿದು ಈ ಬಣದಲ್ಲಿ ಎರಡನೇ ಸೋಲು ಆಗಿದೆ.
ಕರ್ನಾಟಕದ ನಿಖರ ದಾಳಿಗೆ ಪುದುಚೇರಿ ತಂಡ ಎರಡೂ ಇನ್ನಿಂಗ್ಸ್‌ಗಳಲ್ಲಿ ಉತ್ತಮ ಆಟ ಪ್ರದರ್ಶಿಸಲು ವಿಫಲಲಾಯಿತು. ಮೊದಲ ಇನ್ನಿಂಗ್ಸ್‌ನಲ್ಲಿ 170 ರನ್ ಗಳಿಸಿದ್ದ ಪುದುಚೇರಿ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಇನ್ನಷ್ಟು ಬೇಗ ಕುಸಿತ ಕಂಡು 127 ರನ್ನಿಗೆ ಆಲೌಟಾಯಿತು. ಹೀಗಾಗಿ ಕರ್ನಾಟಕಕ್ಕೆ ಎರಡನೇ ಬಾರಿ ಆಡುವ ಅವಕಾಶವೇ ಸಿಕ್ಕಿಲ್ಲ.
ಮೊದಲ ಇನ್ನಿಂಗ್ಸ್‌ನಲ್ಲಿ ಪುದುಚೇರಿಯ ಕುಸಿತಕ್ಕೆ ಕಾರಣರಾದ ವಿದ್ವತ್ ಕಾವೇರಪ್ಪ, ರೋನಿತ್ ಮೋರೆ ಮತ್ತು ವಿಜಯಕುಮಾರ್ ವೈಶಾಖ್ ದ್ವಿತೀಯ ಇನ್ನಿಂಗ್ಸ್
ನಲ್ಲೂ ಮಿಂಚಿನ ದಾಳಿ ಸಂಘಟಿಸಿದ್ದರು. ಅದರಲ್ಲಿಯೂ ಮೋರೆ ಮತ್ತು ವೈಶಾಖ್ ಅವರ ದಾಳಿ ತೀವ್ರವಾಗಿತ್ತು. ಇವರಿಬ್ಬರ ದಾಳಿಯನ್ನು ಎದುರಿಸಲು ಪುದುಚೇರಿಯ ಯಾವುದೇ ಆಟಗಾರನಿಗೆ ಸಾಧ್ಯವಾಗಲಿಲ್ಲ. 26 ರನ್ ಗಳಿಸಿದ ಜಯ್ ಪಾಂಡೆ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಅವರನ್ನು ಬಿಟ್ಟರೆ ತಂಡದ ನಾಲ್ಕು ಮಂದಿ ಮಾತ್ರ ಎರಡಂಕೆಯ ಮೊತ್ತ ತಲುಪಿದ್ದರು.
ಮೋರೆ ತನ್ನ 14 ಓವರ್‌ಗಳ ದಾಳಿಯಲ್ಲಿ 36 ರನ್ನಿಗೆ 4 ವಿಕೆಟ್ ಉರುಳಿಸಿದ್ದರೆ ವೈಶಾಖ್ 23 ರನ್ನಿಗೆ ಮೂರು ವಿಕೆಟ್ ಪಡೆದು ಸಂಭ್ರಮಿಸಿದರು. ಕಾವೇರಪ್ಪ 2 ಮತ್ತು ಕೃಷ್ಣಪ್ಪ ಗೌತಮ್ 1 ವಿಕೆಟ್ ಕಿತ್ತರು.
ಸಂಕ್ಷಿಪ್ತ ಸ್ಕೋರು: ಪುದುಚೇರಿ 170 ಮತ್ತು 127 (ಶ್ಯಾಮ್ ಕಂಗಯನ್ 24, ಜಯ್ ಪಾಂಡೆ 26, ಅಂಕಿತ್ ಶರ್ಮ 25, ರೋನಿತ್ ಮೋರೆ 36ಕ್ಕೆ 4, ವೈಶಾಖ್ 23ಕ್ಕೆ 3, ಕಾವೇರಪ್ಪ 44ಕ್ಕೆ 2); ಕರ್ನಾಟಕ 304.
ಪಂದ್ಯಶ್ರೇಷ್ಠ: ರವಿಕುಮಾರ್ ಸಮರ್ಥ್