Advertisement

Ranji Trophy: ಕರ್ನಾಟಕಕ್ಕೆ ಮೊದಲ ಇನ್ನಿಂಗ್ಸ್‌  ಮುನ್ನಡೆ

11:45 PM Jan 21, 2024 | Team Udayavani |

ಮೈಸೂರು: ಆರಂಭಿಕ ಆಟಗಾರ ಮಾಯಾಂಕ್‌ ಅಗರ್ವಾಲ್‌, ದೇವದತ್ತ ಪಡಿಕ್ಕಲ್‌ ಮತ್ತು ನಿಕಿನ್‌ ಜೋಸ್‌ ಅವರ ಶತಕದ ಬಲದಿಂದ ಕರ್ನಾಟಕ ತಂಡವು ರಣಜಿ ಟ್ರೋಫಿ ಕ್ರಿಕೆಟ್‌ ಕೂಟದಲ್ಲಿ ಗೋವಾ ತಂಡದೆ ದುರು ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿದೆ.

Advertisement

ಗೋವಾದ 321 ರನ್ನಿಗೆ ಉತ್ತರವಾಗಿ ನಾಲ್ಕು ವಿಕೆಟಿಗೆ 251 ರನ್ನುಗಳಿಂದ ಮೂರನೇ ದಿನದಾಟದ ಆಟ ಮುಂದು ವರಿಸಿದ ಕರ್ನಾಟಕ ತಂಡವು ಜೋಸ್‌ ಅವರ ಶತಕದಿಂದಾಗಿ 9 ವಿಕೆಟಿಗೆ 498 ರನ್‌ ಪೇರಿಸಿ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತು. ಕರ್ನಾಟಕ ಮೊದಲ ಇನ್ನಿಂಗ್ಸ್‌ನಲ್ಲಿ 177 ರನ್‌ ಮುನ್ನಡೆ ಪಡೆಯಿತು.

ದ್ವಿತೀಯ ದಿನ ಅಗರ್ವಾಲ್‌ ಮತ್ತು ಪಡಿಕ್ಕಲ್‌ ಶತಕ ಬಾರಿಸಿದ್ದರೆ ಮೂರನೇ ದಿನ ನಿಕಿನ್‌ ಜೋಸ್‌ ಶತಕ ಸಿಡಿಸಿ ಸಂಭ್ರಮಿಸಿದರು. ಗೋವಾದ ದರ್ಶನ್‌ ಮಿಸಲ್‌ 134 ರನ್ನಿಗೆ 6 ವಿಕೆಟ್‌ ಕಿತ್ತು ಮಿಂಚಿದರು.

ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿದ ಗೋವಾ ತಂಡವು ಮೂರನೇ ದಿನ ದಾಟದ ಅಂತ್ಯಕ್ಕೆ ಒಂದು ವಿಕೆಟಿಗೆ 93 ರನ್‌ ಗಳಿಸಿದೆ. ತಂಡ ಇನ್ನೂ 84 ರನ್‌ ಹಿನ್ನಡೆಯಲ್ಲಿದೆ. ಈ ಪಂದ್ಯ ಬಹುತೇಕ ಡ್ರಾಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ.
ಸಂಕ್ಷಿಪ್ತ ಸ್ಕೋರು: ಗೋವಾ 321 ಮತ್ತು ಒಂದು ವಿಕೆಟಿಗೆ 93 (ಕೃಷ್ಣಮೂರ್ತಿ ಸಿದ್ಧಾರ್ಥ್ 57 ಬ್ಯಾಟಿಂಗ್‌); ಕರ್ನಾಟಕ 9 ವಿಕೆಟಿಗೆ 498 ಡಿಕ್ಲೇರ್‌x (ಅಗರ್ವಾಲ್‌ 114, ಪಡಿಕ್ಕಲ್‌ 103, ನಿಕಿನ್‌ ಜೋಸ್‌ 107, ದರ್ಶನ್‌ ಮಿಸಲ್‌ 134ಕ್ಕೆ 6).

ಕೇರಳಕ್ಕೆ 303 ರನ್‌ ಸವಾಲು
ತಿರುವನಂತಪುರ: “ಬಿ’ ಬಣದ ಪಂದ್ಯದಲ್ಲಿ ಬಲಿಷ್ಠ ಮುಂಬಯಿ ತಂಡದೆದುರು ಗೆಲುವು ಸಾಧಿಸಲು ಕೇರಳ ತಂಡವು 303 ರನ್‌ ಗಳಿಸುವ ಸವಾಲು ಪಡೆದಿದೆ. ಮೂರನೇ ದಿನದಾಟದ ಅಂತ್ಯಕ್ಕೆ ಕೇರಳ ತಂಡವು ತನ್ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಯಾವುದೇ ವಿಕೆಟ್‌ ಕಳೆದುಕೊಳ್ಳದೇ 24 ರನ್‌ ಗಳಿಸಿದೆ. ಅಂತಿಮ ದಿನವಾದ ಸೋಮವಾರ ಕೇರಳ 279 ರನ್‌ ಗಳಿಸಿದರೆ ಗೆಲುವು ಸಾಧಿಸಲಿದೆ.

Advertisement

ಯಾವುದೇ ವಿಕೆಟ್‌ ಕಳೆದುಕೊಳ್ಳದೇ 105 ರನ್ನಿನಿಂದ ಮೂರನೇ ದಿನದ ಆಟ ಆರಂಭಿಸಿದ್ದ ಮುಂಬಯಿ ತಂಡವು 319 ರನ್‌ ಗಳಿಸಿ ಆಲೌಟಾಯಿತು. ಇದರಿಂದಾಗಿ ಕೇರಳ ಸ್ಪಷ್ಟ ಗೆಲುವು ದಾಖಲಿಸಲು 303 ರನ್‌ ಗಳಿಸುವ ಗುರಿ ಪಡೆಯಿತು.

ಸಂಕ್ಷಿಪ್ತ ಸ್ಕೋರು: ಮುಂಬಯಿ 251 ಮತ್ತು 319 (ಜಯ್‌ ಬಿಸ್ತ 73, ಭೂಪೆನ್‌ ಲಾಲ್ವಾನಿ 88, ಪ್ರಸಾದ್‌ ಪವಾರ್‌ 35, ಜಲಜ ಸಕ್ಸೇನಾ 80ಕ್ಕೆ 4, ನಿಧೀಶ್‌ 59ಕ್ಕೆ 2); ಕೇರಳ 244 ಮತ್ತು ವಿಕೆಟ್‌ ನಷ್ಟವಿಲ್ಲದೇ 24.

ಪೂಜಾರ ಸ್ಮರಣೀಯ ಸಾಧನೆ
ನಾಗ್ಪುರ: ಚಿರಾಗ್‌ ಜಾನಿ ಅವರ ಅಮೋಘ ಬೌಲಿಂಗ್‌ ನೆರವಿನಿಂದ ಹಾಲಿ ಚಾಂಪಿಯನ್‌ ಸೌರಾಷ್ಟ್ರ ತಂಡವು ರಣಜಿ ಟ್ರೋಫಿಯ ಪಂದ್ಯದಲ್ಲಿ ವಿದರ್ಭ ತಂಡವನ್ನು 238 ರನ್ನುಗಳಿಂದ ಸೋಲಿಸಿತು. ಇದು ಈ ಋತುವಿನಲ್ಲಿ ತಂಡ ದಾಖಲಿಸಿದ ಮೊದಲ ಗೆಲುವು ಆಗಿದೆ.

ಸೌರಾಷ್ಟ್ರ ತಂಡದ ಖ್ಯಾತ ಆಟಗಾರ ಚೇತೇಶ್ವರ ಪೂಜಾರ ವೈಯಕ್ತಿಕವಾಗಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 20 ಸಾವಿರ ರನ್‌ ಪೂರ್ತಿಗೊಳಿಸಿದ ಭಾರತದ ನಾಲ್ಕನೇ ಆಟಗಾರ ಎಂಬ ಗೌರವಕ್ಕೆ ಪಾತ್ರರಾದರು. ಈ ಪಂದ್ಯದಲ್ಲಿ 66 ರನ್‌ ಗಳಿಸಿದಾಗ ಅವರು ಈ ಗೌರವಕ್ಕೆ ಪಾತ್ರರಾದರು. ಈ ಮೊದಲು ಸುನೀಲ್‌ ಗಾವಸ್ಕರ್‌, ಸಚಿನ್‌ ತೆಂಡುಲ್ಕರ್‌ ಮತ್ತು ರಾಹುಲ್‌ ದ್ರಾವಿಡ್‌ ಈ ಸಾಧನೆ ಮಾಡಿದ್ದರು.

ಜೋಧ್‌ಪುರದಲ್ಲಿ ನಡೆದ ಇನ್ನೊಂದು ಪಂದ್ಯದಲ್ಲಿ ರಾಜಸ್ಥಾನ ತಂಡವು ಮಹಾರಾಷ್ಟ್ರವನ್ನು 10 ವಿಕೆಟ್‌ಗಳಿಂದ ಸೋಲಿಸಿದೆ. ಗೆಲ್ಲಲು 104 ರನ್‌ ಗಳಿಸುವ ಗುರಿ ಪಡೆದ ರಾಜಸ್ಥಾನ ತಂಡವು ತನ್ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ ವಿಕೆಟ್‌ ನಷ್ಟವಿಲ್ಲದೇ 106 ರನ್‌ ಗಳಿಸಿ ಜಯ ಸಾಧಿಸಿತು.

Advertisement

Udayavani is now on Telegram. Click here to join our channel and stay updated with the latest news.

Next