ಚೆನ್ನೈ: ಕರ್ನಾಟಕದ ಆರಂಭಕಾರ ದೇವದತ್ತ ಪಡಿಕ್ಕಲ್ ಚೊಚ್ಚಲ ಪ್ರಥಮ ದರ್ಜೆ ಶತಕದೊಂದಿಗೆ ಮಿಂಚಿದ್ದಾರೆ. ಪುದುಚೇರಿ ವಿರುದ್ಧ ಗುರುವಾರ ಮೊದಲ್ಗೊಂಡ “ಸಿ’ ವಿಭಾಗದ ರಣಜಿ ಪಂದ್ಯದಲ್ಲಿ ಅವರು 161 ರನ್ ಬಾರಿಸಿ ಅಜೇಯರಾಗಿ ಉಳಿದಿದ್ದಾರೆ. ಕರ್ನಾಟಕ 3 ವಿಕೆಟಿಗೆ 293 ರನ್ ಪೇರಿಸಿ ಮೊದಲ ದಿನದಾಟ ಮುಗಿಸಿದೆ.
ಬ್ಯಾಟಿಂಗಿಗೆ ಇಳಿಸಲ್ಪಟ್ಟ ಕರ್ನಾಟಕ ಆರ್. ಸಮರ್ಥ್ (11) ಮತ್ತು ಕರುಣ್ ನಾಯರ್ (6) ಅವರನ್ನು ಬೇಗನೆ ಕಳೆದುಕೊಂಡಿತು. ಎರಡೂ ವಿಕೆಟ್ ಆಶಿತ್ ರಾಜೀವ್ ಪಾಲಾಯಿತು.
ಈ ಹಂತದಲ್ಲಿ ಜತೆಗೂಡಿದ ದೇವದತ್ತ ಪಡಿಕ್ಕಲ್ ಮತ್ತು ಕೆ. ಸಿದ್ಧಾರ್ಥ್ ಪುದುಚೇರಿ ಮೇಲೆ ಸವಾರಿ ಮಾಡಲಾರಂಭಿಸಿದರು. 3ನೇ ವಿಕೆಟಿಗೆ 357 ಎಸೆತಗಳಿಂದ 223 ಪೇರಿಸಿ ದೊಡ್ಡ ಮೊತ್ತದ ಸೂಚನೆಯಿತ್ತರು.
ಇತ್ತೀಚೆಗೆ ತೀವ್ರ ರನ್ ಬರಗಾಲದಲ್ಲಿದ್ದ ಪಡಿಕ್ಕಲ್ 277 ಎಸೆತಗಳಿಗೆ ಜವಾಬಿತ್ತು 161 ರನ್ ರಾಶಿ ಹಾಕಿದ್ದಾರೆ. ಸಿಡಿಸಿದ್ದು 20 ಬೌಂಡರಿ ಮತ್ತು 2 ಸಿಕ್ಸರ್. ಸಿದ್ಧಾರ್ಥ್ ಕೂಡ ಶತಕದ ಹಾದಿಯಲ್ಲಿದ್ದರು. ಆದರೆ 85 ರನ್ ಮಾಡಿದ ವೇಳೆ ಸಾಗರ್ ಉದೇಶಿ ಎಸೆತದಲ್ಲಿ ವಿಕೆಟ್ ಕಳಕೊಂಡರು (168 ಎಸೆತ, 11 ಬೌಂಡರಿ). ಪಡಿಕ್ಕಲ್ ಜತೆ 21 ರನ್ ಮಾಡಿರುವ ನಾಯಕ ಮನೀಷ್ ಪಾಂಡೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಸಂಕ್ಷಿಪ್ತ ಸ್ಕೋರ್: ಕರ್ನಾಟಕ-3 ವಿಕೆಟಿಗೆ 293 (ಪಡಿಕ್ಕಲ್ ಬ್ಯಾಟಿಂಗ್ 161, ಸಿದ್ಧಾರ್ಥ್ 85, ಸಮರ್ಥ್ 11, ನಾಯರ್ 6, ಪಾಂಡೆ ಬ್ಯಾಟಿಂಗ್ 21, ಆಶಿತ್ ರಾಜೀವ್ 37ಕ್ಕೆ 2).