Advertisement

ಇನ್ನಿಂಗ್ಸ್‌ ಗೆಲುವಿನತ್ತ ಕರ್ನಾಟಕ

06:30 AM Oct 17, 2017 | Team Udayavani |

ಮೈಸೂರು: ಕರ್ನಾಟಕ 2017-18ನೇ ಸಾಲಿನ ರಣಜಿ ಋತುವನ್ನು ಇನ್ನಿಂಗ್ಸ್‌ ಗೆಲುವಿನೊಂದಿಗೆ ಆರಂಭಿಸುವ ಸ್ಪಷ್ಟ ಸೂಚನೆಯೊಂದನ್ನು ನೀಡಿದೆ. ಇದಕ್ಕೆ ಮಂಗಳವಾರ ಮುಹೂರ್ತ ಕೂಡಿಬರುವುದು ಖಚಿತಗೊಂಡಿದೆ.

Advertisement

ಮೈಸೂರಿನಲ್ಲಿ ನಡೆಯುತ್ತಿರುವ ಅಸ್ಸಾಂ ಎದುರಿನ ರಣಜಿ ಪಂದ್ಯದಲ್ಲಿ ಕರ್ನಾಟಕ 3ನೇ ದಿನವೂ ಮೇಲುಗೈ ಕಾಯ್ದುಕೊಂಡು ಬಂದಿತು. 324 ರನ್ನುಗಳ ಭಾರೀ ಮೊತ್ತದ ಮೊದಲ ಇನ್ನಿಂಗ್ಸ್‌ ಮುನ್ನಡೆ ಗಳಿಸಿದ ಬಳಿಕ ಅಸ್ಸಾಂ ಮೇಲೆರಗಿದೆ. ಸೋಮವಾರದ ಆಟದ ಆಂತ್ಯಕ್ಕೆ ದ್ವಿತೀಯ ಇನ್ನಿಂಗ್ಸ್‌ನಲ್ಲಿ 6 ವಿಕೆಟಿಗೆ 169 ರನ್‌ ಗಳಿಸಿರುವ ಅಸ್ಸಾಂ, ಇನ್ನಿಂಗ್ಸ್‌ ಸೋಲಿನಿಂದ ಪಾರಾಗಲು ಇನ್ನೂ 155 ರನ್‌ ಗಳಿಸಬೇಕಿದೆ. ಮಂಗಳವಾರ ಪಂದ್ಯದ ಅಂತಿಮ ದಿನ.

ಅಸ್ಸಾಂನ 145 ರನ್ನಿಗೆ ಜವಾಬಾಗಿ 2ನೇ ದಿನ 6ಕ್ಕೆ 427 ರನ್‌ ಮಾಡಿದ್ದ ಕರ್ನಾಟಕ, ಸೋಮವಾರ 7ಕ್ಕೆ 469 ರನ್‌ ಪೇರಿಸಿ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿತು. 147 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದ ಕೃಷ್ಣಪ್ಪ ಗೌತಮ್‌ ಈ ಮೊತ್ತಕ್ಕೆ ಕೇವಲ 2 ರನ್‌ ಸೇರಿಸಿ ಅರೂಪ್‌ ದಾಸ್‌ಗೆ ರಿಟರ್ನ್ ಕ್ಯಾಚ್‌ ನೀಡಿದರು. ಕರ್ನಾಟಕದ ಮೊತ್ತಕ್ಕೂ ಆಗ 2 ರನ್‌ ಸೇರಿತ್ತಷ್ಟೇ. ಒಟ್ಟು 170 ಎಸೆತ ಎದುರಿಸಿದ ಗೌತಮ್‌ 10 ಬೌಂಡರಿ, 6 ಸಿಕ್ಸರ್‌ಗಳೊಂದಿಗೆ ತಮ್ಮ ಮೊದಲ ಶತಕವನ್ನು ಸ್ಮರಣೀಯಗೊಳಿಸಿದರು.

38 ರನ್‌ ಮಾಡಿ ಆಡುತ್ತಿದ್ದ ಶ್ರೇಯಸ್‌ ಗೋಪಾಲ್‌ 50 ರನ್‌ ಮಾಡಿ ಅಜೇಯರಾಗಿ ಉಳಿದರು (93 ಎಸೆತ, 3 ಬೌಂಡರಿ). ಅವರ ಅರ್ಧ ಶತಕ ಪೂರ್ತಿಯಾದೊಡನೆ ನಾಯಕ ವಿನಯ್‌ ಕುಮಾರ್‌ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿದರು. ಆಗ ವಿನಯ್‌ 27 ರನ್‌ ಗಳಿಸಿದ್ದರು (29 ಎಸೆತ, 1 ಬೌಂಡರಿ, 1 ಸಿಕ್ಸರ್‌). ಅಸ್ಸಾಂ ಪರ ಅರೂಪ್‌ ದಾಸ್‌ 4, ಪುರ್ಕಾಯಸ್ಥ 3 ವಿಕೆಟ್‌ ಕಿತ್ತರು.

ಮತ್ತೆ ಗೌತಮ್‌ ದಾಳಿ
ಮೊದಲ ಇನ್ನಿಂಗ್ಸ್‌ನಲ್ಲಿ 4 ವಿಕೆಟ್‌ ಕಬಳಿಸಿ, ಬಳಿಕ ಶತಕ ಬಾರಿಸಿ ಮೆರೆದ ಕೆ. ಗೌತಮ್‌ ದ್ವಿತೀಯ ಸರದಿಯಲ್ಲೂ ಅಸ್ಸಾಂ ಮೇಲೆರಗಿ ಹೋಗಿದ್ದಾರೆ. ಉರುಳಿದ 6 ವಿಕೆಟ್‌ಗಳಲ್ಲಿ 3 ವಿಕೆಟ್‌ ಗೌತಮ್‌ ಪಾಲಾಗಿದೆ. ಅಭಿಮನ್ಯು ಮಿಥುನ್‌ 2, ವಿನಯ್‌ ಕುಮಾರ್‌ ಒಂದು ವಿಕೆಟ್‌ ಉರುಳಿಸಿದರು.

Advertisement

ಮೊದಲ ಸರದಿಯಂತೆ ಈ ಬಾರಿಯೂ ನಾಯಕ ಗೋಕುಲ್‌ ದಾಸ್‌ ತಂಡದ ರಕ್ಷಣೆಗೆ ನಿಂತಿದ್ದಾರೆ; 62 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ (111 ಎಸೆತ, 6 ಬೌಂಡರಿ). ಶಿವಶಂಕರ್‌ ರಾಯ್‌ 44 ರನ್‌ ಮಾಡಿದರು. ಇವರಿಬ್ಬರ 4ನೇ ವಿಕೆಟ್‌ ಜತೆಯಾಟದಲ್ಲಿ 56 ರನ್‌ ಒಟ್ಟುಗೂಡಿದ್ದರಿಂದ ಅಸ್ಸಾಂ ದೊಡ್ಡ ಕುಸಿತದಿಂದ ಪಾರಾಯಿತು.ರಿಷವ್‌ ದಾಸ್‌ 21, ಪಲ್ಲವಕುಮಾರ್‌ ದಾಸ್‌ 5, ಪ್ರೀತಂ ದೇವನಾಥ್‌ 2, ತೇಜಿಂದರ್‌ ಸಿಂಗ್‌ 6, ಸ್ವರೂಪಂ ಪುರ್ಕಾಯಸ್ಥ 14 ರನ್‌ ಮಾಡಿ ಔಟಾಗಿದ್ದಾರೆ.

ಸಂಕ್ಷಿಪ್ತ ಸ್ಕೋರ್‌: ಅಸ್ಸಾಂ-145 ಮತ್ತು 6 ವಿಕೆಟಿಗೆ 169 (ಗೋಕುಲ್‌ ಶರ್ಮ ಬ್ಯಾಟಿಂಗ್‌ 62, ಶಿವಶಂಕರ್‌ ರಾಯ್‌ 44, ರಿಷವ್‌ ದಾಸ್‌ 21, ಕೆ. ಗೌತಮ್‌ 39ಕ್ಕೆ 3, ಮಿಥುನ್‌ 29ಕ್ಕೆ 2, ವಿನಯ್‌ಕುಮಾರ್‌ 19ಕ್ಕೆ 1). ಕರ್ನಾಟಕ-7 ವಿಕೆಟಿಗೆ 469 ಡಿಕ್ಲೇರ್‌.

Advertisement

Udayavani is now on Telegram. Click here to join our channel and stay updated with the latest news.

Next