Advertisement

ರಣಜಿ ಕ್ರಿಕೆಟ್‌; ರಾಜ್ಯಕ್ಕೆ ಮಧ್ಯಪ್ರದೇಶ ತಿರುಗೇಟು

09:03 AM Feb 07, 2020 | keerthan |

ಶಿವಮೊಗ್ಗ: ಆದಿತ್ಯ ಶ್ರೀವಾಸ್ತವ (ಅಜೇಯ 109 ರನ್‌) ಹಾಗೂ ವೆಂಕಟೇಶ್‌ ಐಯ್ಯರ್‌ (ಅಜೇಯ 80 ರನ್‌) ಸಾಹಸಮಯ ಬ್ಯಾಟಿಂಗ್‌ ನೆರವಿನಿಂದಾಗಿ ರಣಜಿ ಎಲೈಟ್‌ ಎ ಮತ್ತು ಬಿ ಗುಂಪಿನ ಪಂದ್ಯದಲ್ಲಿ ಆತಿಥೇಯ ಕರ್ನಾಟಕ ತಂಡಕ್ಕೆ ಮಧ್ಯಪ್ರದೇಶ ದಿಟ್ಟ ಪ್ರತ್ಯುತ್ತರ ನೀಡಿದೆ.

Advertisement

ಶಿವಮೊಗ್ಗದ ಕೆಎಸ್‌ಸಿಎ ನವುಲೆ ಕ್ರೀಡಾಂಗಣದಲ್ಲಿನ ಗುರುವಾರದ 3ನೇ ದಿನದ ಆಟದಲ್ಲಿ ಸಂಪೂರ್ಣವಾಗಿ ಆದಿತ್ಯ-ವೆಂಕಟೇಶ್‌ ಗಟ್ಟಿಯಾಗಿ ಆವರಿಸಿಕೊಂಡರು. ಕ್ರೀಸ್‌ನಲ್ಲಿ ಭದ್ರವಾಗಿ ನೆಲನಿಂತಿ ಇಬ್ಬರು ರಾಜ್ಯ ಬೌಲರ್‌ಗಳಿಗೆ ಎಚ್ಚೆತ್ತುಕೊಳ್ಳಲು ಎಲ್ಲಿಯೂ ಅವಕಾಶವನ್ನೇ ನೀಡದೆ ಬ್ಯಾಟ್‌ ಬೀಸ ತೊಡಗಿದರು. ಸದ್ಯ ಮಧ್ಯಪ್ರದೇಶ ಮೊದಲ ಇನಿಂಗ್ಸ್‌ನಲ್ಲಿ ಕೇವಲ 4 ವಿಕೆಟ್‌ ನಷ್ಟಕ್ಕೆ 311 ರನ್‌ಗಳಿಸಿದೆ.

ಇನಿಂಗ್ಸ್‌ ಮುನ್ನಡೆ ಪಡೆಯಲು ಮಧ್ಯಪ್ರದೇಶಕ್ಕೆ ಇನ್ನೂ 115 ರನ್‌ ಬೇಕಿದೆ. ಶುಕ್ರವಾರ 1 ದಿನದ ಆಟ ಮಾತ್ರ ಬಾಕಿ ಉಳಿದಿದೆ. ಅಜೇಯರಾಗಿ ಬ್ಯಾಟಿಂಗ್‌ ಮಾಡುತ್ತಿರುವ ಆದಿತ್ಯ-ವೆಂಕಟೇಶ್‌ ಐಯ್ಯರ್‌ ಮಧ್ಯಪ್ರದೇಶ ಮೊದಲ ಇನಿಂಗ್ಸ್‌ ತಂದುಕೊಡುವ ಪ್ರಯತ್ನದಲ್ಲಿದ್ದಾರೆ. ದಿನವಿಡೀ ಇಬ್ಬರು ಬ್ಯಾಟಿಂಗ್‌ ನಿಂದ ಆಕ್ರಮಿಸಿಕೊಂಡಿದ್ದರಿಂದ ಪಂದ್ಯ ಯಾವುದೇ ತಿರುವು ಪಡೆದುಕೊಂಡಿಲ್ಲ, ಬಹುತೇಕ ಡ್ರಾದತ್ತ ಸಾಗುವ ಮುನ್ಸೂಚನೆ ದೊರಕಿದೆ.

ಶುಕ್ರವಾರದ ಆಟದಲ್ಲಿ ಇವರಿಬ್ಬರ ಜತೆಯಾಟ ಮುರಿದು, ಇನ್ನೆರಡು ವಿಕೆಟ್‌ ಕಬಳಿಸಿದರೆ ಮೊದಲ ಇನಿಂಗ್ಸ್‌ ಹಿನ್ನಡೆಯನ್ನು ರಾಜ್ಯ ತಂಡಕ್ಕೆ ತಪ್ಪಿಸಿಕೊಳ್ಳಬಹುದಾಗಿದೆ. ಕ್ವಾರ್ಟರ್‌ಫೈನಲ್‌ ಪ್ರವೇಶಿಸುವ ನಿಟ್ಟಿನಲ್ಲಿ ರಾಜ್ಯ ತಂಡಕ್ಕೆ ಇದು ಮಹತ್ವದ ಪಂದ್ಯವಾಗಿದ್ದು ಕನಿಷ್ಠ ಗೆಲ್ಲಲಾಗದಿದ್ದರೂ ಮೊದಲ ಇನಿಂಗ್ಸ್‌ ಮುನ್ನಡೆಗಾಗಿ ಶ್ರಮವಹಿಸಬೇಕಿದೆ.

ಆದಿತ್ಯ-ವೆಂಕಟೇಶ್‌ ಸೊಗಸಾದ ಜತೆಯಾಟ: ಮಧ್ಯಪ್ರದೇಶ 1ನೇ ದಿನದ ಆಟದ ಅಂತ್ಯಕ್ಕೆ ಮೊದಲ ಇನಿಂಗ್ಸ್‌ನಲ್ಲಿ 60ಕ್ಕೆ2 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆರಂಭಿಕರಾದ ರಮೀಜ್‌ ಖಾನ್‌ (22 ರನ್‌) ಹಾಗೂ ರಜತ್‌ ಪಾಟಿದಾರ್‌ (0) ವಿಕೆಟ್‌ ಕಳೆದುಕೊಂಡಿದ್ದರು. ಮೂರನೇ ದಿನ ಯಶ್‌
ದುಬೆ (6 ರನ್‌) ಹಾಗೂ ಶುಭಂ ಶರ್ಮ (15 ರನ್‌) ಬ್ಯಾಟಿಂಗ್‌ ಮುಂದುವರಿಸಿದರು. ಮೂರನೇ ದಿನದ ಆಟದಲ್ಲಿ ಎಚ್ಚರಿಕೆಯಿಂದ ಬ್ಯಾಟ್‌ ಬೀಸಿದ ಇವರಿಬ್ಬರು ತಂಡದ ಒಟ್ಟು ಮೊತ್ತವನ್ನು 113 ರನ್‌ ವರೆಗೆ ಕೊಂಡೊಯ್ದರು. ಈ ವೇಳೆ ದಾಳಿಗಿಳಿದ ಸ್ಪಿನ್ನರ್‌ ಶ್ರೇಯಸ್‌ ಗೋಪಾಲ್‌ ಎಲ್‌ಬಿಡಬ್ಲ್ಯು ಮಾಡುವ ಮೂಲಕ 45 ರನ್‌ಗಳಿಸಿದ್ದ ಯಶ್‌ ದುಬೆಯನ್ನು ಪೆವಿಲಿಯನ್‌ಗೆ ಅಟ್ಟಿದರು. 159 ಎಸೆತ ಎದುರಿಸಿದ್ದ ಯಶ್‌ ದುಬೆ 6 ಬೌಂಡರಿಯಿಂದ ಅರ್ಧಶತಕ ಸಮೀಪ ಬಂದಿದ್ದಾಗ ಔಟಾಗಿ ನಿರಾಸೆಗೆ ಒಳಗಾದರು.

Advertisement

ತಂಡದ ಒಟ್ಟು ಮೊತ್ತಕ್ಕೆ ಮತ್ತೆ 10 ರನ್‌ ಸೇರಿಸುವಷ್ಟರಲ್ಲಿ ಶುಭಂ ಶರ್ಮ ಕೂಡ ಔಟಾದರು. 73 ಎಸೆತದಿಂದ 1 ಬೌಂಡರಿ ಒಳಗೊಂಡ ಒಟ್ಟು 25 ರನ್‌ಗಳಿಸಿ ಅವರು ಕೆ.ಗೌತಮ್‌ ಸ್ಪಿನ್‌ ಬೌಲಿಂಗ್‌ನಲ್ಲಿ ಕರುಣ್‌ ನಾಯರ್‌ಗೆ ಕ್ಯಾಚ್‌ ನೀಡಿ ಔಟಾದರು. ಈ ಎರಡು ವಿಕೆಟ್‌ ಬಿದ್ದ ನಂತರ ಆದಿತ್ಯ ಶ್ರೀವಾಸ್ತವ ಹಾಗೂ ವೆಂಕಟೇಶ್‌ ಐಯ್ಯರ್‌ ದಿಟ್ಟ ಜತೆಯಾಟ ನಿರ್ವಹಿಸಿದರು. ಅಳೆದು ತೂಗಿ ರಾಜ್ಯ ಬೌಲರ್‌ ಗಳನ್ನು ದಂಡಿಸ ತೊಡಗಿದರು. ನೋಡನೋಡುತ್ತಿದ್ದಂತೆ ಮಧ್ಯಪ್ರದೇಶ ರನ್‌ ವೇಗ ಹೆಚ್ಚಿತ್ತು. ಆತಿಥೇಯ ಬೌಲರ್‌ಗಳು ಇವರನ್ನು ಔಟ್‌ ಮಾಡಲು ನಡೆಸಿದ ಎಲ್ಲ ಪ್ರಯತ್ನಗಳು ವಿಫ‌ಲವಾದವು.

ದಿನದ ಆಟದ ಅಂತ್ಯದ ವೇಳೆ ಇವರಿಬ್ಬರು ಸೇರಿಕೊಂಡು 5ನೇ ವಿಕೆಟ್‌ಗೆ ಒಟ್ಟು 188 ರನ್‌ ಸೇರಿಸಿದ್ದಾರೆ. 223 ಎಸೆತ ಎದುರಿಸಿದ್ದ ಆದಿತ್ಯ ಶ್ರೀವಾಸ್ತವ 15 ಬೌಂಡರಿ ನೆರವಿನಿಂದ ಶತಕ ಬಾರಿಸಿ ಅಜೇಯರಾದರು. ಮತ್ತೋರ್ವ ಬ್ಯಾಟ್ಸ್‌ಮನ್‌ ವೆಂಕಟೇಶ್‌ ಐಯ್ಯರ್‌ 200 ಎಸೆತದಿಂದ 10 ಬೌಂಡರಿ, 1 ಸಿಕ್ಸರ್‌ ಒಳಗೊಂಡ ಅಜೇಯ 80 ರನ್‌ ಬಾರಿಸಿದ್ದಾರೆ. ಶತಕಗಳಿಸಲು ಅವರಿಗೆ 20 ರನ್‌ ಮಾತ್ರ ಬೇಕಿದೆ. ಅಂತಿಮ ದಿನದ ಆಟದಲ್ಲಿ ಇವರೂ ಕೂಡ ಶತಕ ಬಾರಿಸುವ ನಿರೀಕ್ಷೆ ಇದೆ

Advertisement

Udayavani is now on Telegram. Click here to join our channel and stay updated with the latest news.

Next