ಉಡುಪಿ: ಮಣಿಪಾಲದ ಡಾ| ರಂಜನ್ ಪೈ ಅವರು ಮಾಹೆ ಟ್ರಸ್ಟ್‌ನ ನೂತನ ಅಧ್ಯಕ್ಷರಾಗಿ ತನ್ನ ತಂದೆ ಡಾ| ರಾಮದಾಸ ಎಂ. ಪೈ ಅವರಿಂದ ಅಧಿಕಾರ ವಹಿಸಿಕೊಂಡರು. ಡಾ| ರಾಮದಾಸ ಪೈ ಅವರು ಸುದೀರ್ಘ 27 ವರ್ಷಗಳ ಕಾಲ ಮಾಹೆ ಟ್ರಸ್ಟ್ ಅಧ್ಯಕ್ಷರಾಗಿದ್ದರು.
ಡಾ| ರಂಜನ್ ಪೈ ಅವರು 2018ರಲ್ಲಿ ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜುಕೇಶನ್‌ನ ರಿಜಿಸ್ಟ್ರಾರ್ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಕರಾವಳಿಯ ಜನತೆಗೆ ಶಿಕ್ಷಣ, ಆರೋಗ್ಯ ಹಾಗೂ ಕೌಶಲ ಒದಗಿಸುವ ಉದ್ದೇಶದಿಂದ ಡಾ| ರಂಜನ್ ಪೈ ಅವರ ಅಜ್ಜ ಡಾ| ಟಿಎಂಎ ಪೈ ಅವರು 1942ರಲ್ಲಿ ಮಣಿಪಾಲ ಗ್ರೂಪ್‌ನ ಸಂಸ್ಥೆಗಳನ್ನು ಪ್ರಾರಂಭಿಸಿದ್ದರು.
ಮಣಿಪಾಲ ಗ್ರೂಪ್‌ನ ಎಲ್ಲ ಸಂಸ್ಥೆಗಳಿಗೆ ಮಾತೃಸಂಸ್ಥೆ ಎನಿಸಿರುವ ಅಕಾಡೆಮಿ ಆಫ್ ಜನರಲ್ ಎಜುಕೇಶನ್‌ಗೆ ಡಾ| ರಾಮದಾಸ ಪೈ ಅವರು 2009ರಿಂದ 2018ರ ವರೆಗೆ ರಿಜಿಸ್ಟ್ರಾರ್ ಆಗಿ ಕಾರ್ಯ ನಿರ್ವಹಿಸಿದ್ದರು. ಎರಡು ದಶಕಗಳಿಂದ ತನ್ನ ತಂದೆಯೊಂದಿಗೆ ಅವರ ಎಲ್ಲ ಸಾಹಸಗಳಲ್ಲೂ ನಿಕಟವಾಗಿ ಕೆಲಸ ಮಾಡಿದ್ದ ಡಾ| ರಂಜನ್ ಪೈ 2004ರಿಂದ ಮಾಹೆ ಟ್ರಸ್ಟ್ ಹಾಗೂ ಮಾಹೆ ಆಡಳಿತ ಮಂಡಳಿ ಸದಸ್ಯರಾಗಿ ಸಾಕಷ್ಟು ಅನುಭವ ಗಳಿಸಿದ್ದಾರೆ.
ಡಾ| ರಂಜನ್ ಪೈ ಅವರು 2005ರಲ್ಲಿ ಖಾಸಗಿ ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿನ ಮಹತ್ವಾಕಾಂಕ್ಷೆಯ ವಿಸ್ತರಣೆ ಯೋಜನೆಗಳೊಂದಿಗೆ ಖಾಸಗಿ ಸಂಸ್ಥೆಗಳಿಗೆ ಷೇರು ಹೂಡಿಕೆಗೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಕೇವಲ ಒಂದೂವರೆ ದಶಕದ ಅವಧಿಯಲ್ಲಿ ಅದರ ವ್ಯವಹಾರ ಮೌಲ್ಯ ಹೆಚ್ಚಾಗಿದ್ದು, ಖಾಸಗಿ ಷೇರು ಹೂಡಿಕೆದಾರರನ್ನು ಸೆಳೆಯಲು ಸಹಕಾರಿ ಯಾಗಿದೆ. ಆರೋಗ್ಯ ವಿಮೆ ವಿಸ್ತರಣೆ ಹಾಗೂ ಅಧೀನ ಆಸ್ಪತ್ರೆಗಳು ಆರೋಗ್ಯ ರಕ್ಷಣೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿವೆ.
ಡಾ| ರಂಜನ್ ಪೈ ಅವರು ಅನೇಕ ಯುವ ಉದ್ಯಮಿಗಳನ್ನು ಪ್ರೋತ್ಸಾಹಿಸಿ ಬೆಂಬಲಿಸಿದ್ದಾರೆ. ಅವರು ಪ್ರಸ್ತುತ ಎಂಇಎಂಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಶಿಕ್ಷಣಕ್ಕೆ ಹೆಚ್ಚಿನ ಗಮನ ನೀಡುತ್ತಿದ್ದು, ಅದನ್ನು ಮುಂದಿನ ದಿನದಲ್ಲಿ ಇನ್ನಷ್ಟು ಅಭಿವೃದ್ಧಿ ಪಡಿಸುವ ಯೋಚನೆ ಇದೆ. ಮಾಹೆ ಸಮೂಹ ವಿಶ್ವವಿದ್ಯಾನಿಲಯವು ವಿದ್ಯಾರ್ಥಿಗಳಿಗೆ ಕೈಗೆಟಕುವ ದರದಲ್ಲಿ ಗುಣಮಟ್ಟದ ಶಿಕ್ಷಣ ಹಾಗೂ ಶ್ರೇಷ್ಠತೆಯ ಕಡೆ ಗಮನ ಹರಿಸಬೇಕು ಎನ್ನುವುದು ಅವರ ಧ್ಯೇಯ. ಅವರು ಈಗಾಗಲೇ ಭಾರತದ ವಿಶ್ವವಿದ್ಯಾನಿಲಯಗಳಲ್ಲಿ ದತ್ತಿಗಳನ್ನು ರಚಿಸಿದ್ದಾರೆ. ಇದು ಉತ್ಕೃಷ್ಟತೆಯನ್ನು ಸಾಧಿಸಲು ಮತ್ತು ಗುಣಮಟ್ಟವನ್ನು ಕಾಪಾಡಿಕೊಳ್ಳಲು ಭದ್ರ ಅಡಿಪಾಯವಾಗಿದೆ.