ಕಾಸರಗೋಡು: ಪ್ರವಾಸಿಗರ ಸ್ವರ್ಗ, ಕೇರಳದ ಊಟಿ ಎಂದೇ ಕರೆಸಿಕೊಂಡಿರುವ ರಾಣಿಪುರಂಗೆ ಕೇರಳ ರಾಜ್ಯ ಸಾರಿಗೆ ಬಸ್ ಸಂಚಾರವನ್ನು ನಿಲುಗಡೆಗೊಳಿಸಿದೆ.
ಕಾಂಞಂಗಾಡ್‌ನಿಂದ ಮಧ್ಯಾಹ್ನ ಸರ್ವೀಸ್ ನಡೆಸುತ್ತಿದ್ದ ಸಾರಿಗೆ ಬಸ್‌ನ್ನು ಕಳೆದ ನಾಲ್ಕು ದಿನಗಳಿಂದ ನಿಲುಗಡೆ ಗೊಳಿಸಲಾಗಿದೆ. ಬಸ್ ಸಂಚಾರ ಮೊಟಕುಗೊಳಿಸಿರುವುದರಿಂದ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಲು ಬರುವ ಪ್ರವಾಸಿಗರು ಮತ್ತು ವಿದ್ಯಾರ್ಥಿಗಳ ಸಹಿತ ಪ್ರಯಾಣಿಕರು ಸಂಕಷ್ಟಕ್ಕೆ ತುತ್ತಾಗಿದ್ದಾರೆ.
ಕಾಂಞಂಗಾಡ್‌ನಿಂದ ಮಧ್ಯಾಹ್ನ 2.55ಕ್ಕೆ ಹೊರಡುವ ಕೇರಳ ರಾಜ್ಯ ಸಾರಿಗೆ ಬಸ್ ಸಂಜೆ 4.15ಕ್ಕೆ ಪನತ್ತಡಿಗೆ ತಲುಪುತಿತ್ತು. ಅಲ್ಲಿಂದ ಹೊರಟ ಬಸ್ ಸಂಜೆ 4.50ಕ್ಕೆ ರಾಣಿಪುರಂಗೆ ತಲುಪು ತಿತ್ತು. ಸಂಜೆ 5 ಗಂಟೆಗೆ ರಾಣಿಪುರಂನಿಂದ ಮತ್ತೆ ಕಾಂಞಂಗಾಡ್‌ಗೆ ಪ್ರಯಾಣ ಬೆಳೆಸುವ ರೀತಿಯಲ್ಲಿ ಪ್ರಯಾಣ ಶೆಡ್ನೂಲ್ ನಿಗದಿಪಡಿಸಲಾಗಿತ್ತು.
ಪ್ರಯಾಣಿಕರಿಗೆ ಬಹಳಷ್ಟು ಪ್ರಯೋಜನವಾಗಿದ್ದ ಸಾರಿಗೆ ಬಸ್ ಸರ್ವೀಸ್ ಮೊಟಕುಗೊಳಿಸಿದ ಹಿನ್ನೆಲೆಯಿಂದ ರಾಣಿಪುರಂನಿಂದ ಕಾಂಞಂಗಾಡ್ ಪೇಟೆಗೆ ಬರುವ ಪ್ರಯಾಣಿಕರು, ವಿದ್ಯಾರ್ಥಿಗಳು ಅಧಿಕ ಹಣ ತೆತ್ತು ಟ್ಯಾಕ್ಸಿ, ಜೀಪು, ಆಟೋ ರಿಕ್ಷಾ ಮೊದಲಾದವುಗಳನ್ನು ಆಶ್ರಯಿಸಬೇಕಾದ ದುಃಸ್ಥಿತಿ ಎದುರಾಗಿದೆ. ಪ್ರಸ್ತುತ ಬೆಳಗ್ಗೆ ಸರ್ವಿಸ್ ನಡೆಸುವ ಬಸ್‌ನಲ್ಲಿ ರಾಣಿಪುರಂಗೆ ಪ್ರಯಾಣಿಸುವ ಪ್ರವಾಸಿಗರು ಸಂಜೆ ವಾಪಸಾಗುತ್ತಿರುವ ಇನ್ನೊಂದು ರಾಜ್ಯ ಸಾರಿಗೆ ಬಸ್‌ನಲ್ಲಿ ಕಾಂಞಂಗಾಡ್‌ಗೆ ಬರುತ್ತಿದ್ದರು. ಬೆಳಗ್ಗಿನಿಂದ ಸಂಜೆಯ ವರೆಗೆ ಪ್ರವಾಸಿಗರು ರಾಣಿಪುರಂ ನಲ್ಲಿ ಉಳಿದುಕೊಂಡು ಪ್ರಕೃತಿ ರಮಣೀಯ ದೃಶ್ಯವನ್ನು ಸವಿದು ಸಂಜೆ ವಾಪಸಾಗು ತ್ತಿದ್ದರು. ಆದರೆ ಇದೀಗ ಬಸ್ ಸರ್ವೀಸ್ ಮೊಟಕುಗೊಳಿಸಿರುವ ಹಿನ್ನೆಲೆಯಲ್ಲಿ ಸಂಜೆಯ ವರೆಗೆ ಪ್ರವಾಸಿಗರು ರಾಣಿಪುರಂ ನಲ್ಲಿ ಉಳಿದುಕೊಳ್ಳಲು ಸಾಧ್ಯವಾಗದೆ ಗಡಿಬಿಡಿಯಲ್ಲಿ ಕಾಂಞಂಗಾಡ್‌ಗೆ ವಾಪಸಾಗಬೇಕಾದ ಸ್ಥಿತಿ ಉಂಟಾಗಿದೆ. ಗುಡ್ಡ ಬೆಟ್ಟಗಳ ನಡುವೆ ಹತ್ತಿ ಇಳಿದು ಸಾಗಬೇಕಾದ ಮಲೆನಾಡು ರಸ್ತೆಯಲ್ಲಿ ಸಂಚರಿಸಲು ಯೋಗ್ಯ ಬಸ್‌ಗಳ ಕೊರತೆಯಿಂದಾಗಿ ಸರ್ವೀಸ್ ನಿಲುಗಡೆಗೊಳಿಸಲಾಗಿದೆ ಎಂದು ಸಂಬಂಧಪಟ್ಟವರು ಸಬೂಬು ನೀಡುತ್ತಾರೆ. ಆದರೆ ಕಾಂಞಂಗಾಡ್‌ನಿಂದ ಪಾಣತ್ತೂರು ದಾರಿಯಾಗಿ ಸುಳ್ಯಕ್ಕೆ ಪ್ರಯಾಣಿಸುತ್ತಿದ್ದ ಬಸ್‌ಗಳಿಗೆ ಟಯರ್ ಸಮಸ್ಯೆ ಎದುರಾದುದರಿಂದ ರಾಣಿಪುರಂಗೆ ಸಂಚರಿಸುತ್ತಿದ್ದ ಅಂತರ್ ರಾಜ್ಯ ಪರ್ಮಿಟ್ ಇರುವ ಸಾರಿಗೆ ಬಸ್‌ನ್ನು ಈ ರೂಟ್‌ನಲ್ಲಿ ಬದಲಾಯಿಸಿದ್ದರಿಂದ ಸರ್ವೀಸ್ ಮೊಟಕುಗೊಳ್ಳಲು ಕಾರಣವೆಂದು ಸ್ಥಳೀಯರು ಹೇಳುತ್ತಿದ್ದಾರೆ. ಇದರೊಂದಿಗೆ ಮಲೆನಾಡು ಪ್ರದೇಶದಲ್ಲಿ ಓಡುತ್ತಿದ್ದ ಬಸ್‌ಗಳಲ್ಲಿ ಹಲವು ದುರಸ್ತಿಗೊಳಿಸದೆ ಇರುವುದರಿಂದ ಮೂಲೆ ಗುಂಪಾಗಿರುವುದು ಹಾಗು ಆದಾಯ ಕಡಿಮೆಯಾಗಿರುವುದರಿಂದ ಕಳೆದ ಐದು ತಿಂಗಳ ಹಿಂದೆ ಆರಂಭಿಸಿದ ಸರ್ವೀಸ್‌ನ್ನು ತಾತ್ಕಾಲಿಕವಾಗಿ ನಿಲುಗಡೆಗೊಳಿಸಲಾಗಿದೆ ಎನ್ನಲಾಗಿದೆ.
ಪ್ರವಾಸಿಗರಿಗೆ ಪ್ರಯೋಜನ
“ಕೇರಳದ ಊಟಿ’ ಎಂದು ಗುರುತಿಸಿ ಕೊಂಡಿರುವ ರಾಣಿಪುರಂ ಪ್ರವಾಸಿಗರಿಗೆ, ಚಾರಣ ಪ್ರಿಯರಿಗೆ ಸ್ವರ್ಗ. ರಾಣಿಪುರಂಗೆ ದೂರದ ಪ್ರದೇಶಗಳಿಂದ ಆಗಮಿಸುವವರ ಸೌಕರ್ಯಕ್ಕಾಗಿ ಕೆಎಸ್‌ಆರ್‌ಟಿಸಿ ಬಸ್ ಮಂಜೂರು ಮಾಡಬೇಕು ಎಂದು ಈ ಪ್ರದೇಶದ ಜನರ ಹಲವು ವರ್ಷಗಳ ಬೇಡಿಕೆಯಂತೆ ಬಸ್ ಆರಂಭಿಸಲಾಗಿತ್ತು. ಆದರೆ ಈ ಬಸ್ ಸಂಚಾರ ಮೊಟಕುಗೊಳಿಸಿರುವುದರಿಂದ ಪ್ರವಾಸಿಗರಿಗೆ ತೊಂದರೆಯನ್ನು ಅನುಭವಿಸುವಂತಾಗಿದೆ.