ಉದಯವಾಣಿ ಸಮಾಚಾರ
ರಾಣಿಬೆನ್ನೂರ: ಭವ್ಯ ಭಾರತವು ವಿಶ್ವಕ್ಕೆ ಯೋಗದಂತ ಬಹು ದೊಡ್ಡ ಪರಂಪರೆಯನ್ನು ಕೊಟ್ಟಿದೆ. ನಮ್ಮ ಪೂರ್ವಜ ಋಷಿ ಮುನಿಗಳು ನೀಡಿರುವ ಕಾಣಿಕೆ ಇದಾಗಿದ್ದು, ಅದರ ಕಲ್ಪನೆ ಮತ್ತು ಅರಿವು ನಮ್ಮೆಲ್ಲರಲ್ಲಿದ್ದರೆ ಭಾರತ ವಿಶ್ವಕ್ಕೆ ಮತ್ತಷ್ಟು ದೊಡ್ಡ ಗುರುವಾಗಲಿದೆ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಪ್ರಕಾಶಾನಂದ ಮಹಾರಾಜ ಹೇಳಿದರು.
ಶುಕ್ರವಾರ ಇಲ್ಲಿನ ರಾಜರಾಜೇಶ್ವರಿ ವಿದ್ಯಾಲಯದ ಆವರಣದಲ್ಲಿ ಜಿಲ್ಲಾ ಪತಂಜಲಿ ಯೋಗ ಸಮಿತಿ ಆಯೋಜಿಸಿದ್ದ ಮಹಿಳಾ ಸಬಲೀಕರಣಕ್ಕಾಗಿ ಯೋಗ 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ನಿತ್ಯವೂ ಆರೋಗ್ಯವಂತ ಬದುಕು ಸಾಗಿಸುವ ದಿವ್ಯ ಔಷಧಿ ಯೋಗ, ಧ್ಯಾನ, ಪ್ರಾಣಾಯಾಮ ಮತ್ತು ಆಯುರ್ವೇದ ನಮ್ಮ ದೇಶದಲ್ಲಿರುವ ಬಹುದೊಡ್ಡ ಅದ್ಭುತ ಕೊಡುಗೆಯಾಗಿದೆ. ದಿನನಿತ್ಯದ ಬದುಕಿನಲ್ಲಿ ಕೇವಲ 20 ನಿಮಿಷಗಳು ಅಳವಡಿಸಿಕೊಂಡರೆ ಸಾಕು ಯೋಗ ಪರಂಪರೆಯ ಭಾರತ ಎಲ್ಲ ರಾಷ್ಟ್ರಗಳಿಗೂ ಮತ್ತಷ್ಟು ಮಾದರಿಯಾಗಲಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಡಿವೈಎಸ್‌ಪಿ ಡಾ| ಗಿರೀಶ ಭೋಜಣ್ಣನವರ ಮಾತನಾಡಿ, ಹಿತಮಿತ ಆಹಾರ ಮತ್ತು ಆಯುರ್ವೇದ ಪರಂಪರೆ ಜೊತೆಗೆ ನಿತ್ಯ ಯೋಗ ಬದುಕಿನಲ್ಲಿ ಅಳವಡಿಸಿಕೊಂಡರೆ ಇಂದಿನ ವಿದ್ಯಾರ್ಥಿಗಳು ಜ್ಞಾನ ವಿಜ್ಞಾನ ತಂತ್ರಜ್ಞಾನ ಸಂಪತ್ತನ್ನು ಪರಿಪೂರ್ಣವಾಗಿ ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ, ಪಾಲಕರು ಮತ್ತು ಮಕ್ಕಳು ಸೂಕ್ಷ್ಮವಾಗಿ ಚಿಂತನೆ ನಡೆಸಬೇಕಾಗಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್. ಪಾಟೀಲ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಡಾ| ಬಸವರಾಜ ಕೇಲಗಾರ, ಪತಂಜಲಿ ಯೋಗ ಸಮಿತಿ ಜಿಲ್ಲಾಧ್ಯಕ್ಷ ರವೀಂದ್ರ ಬಿಜಾಪುರ, ಈಶ್ವರಿಯ ವಿಶ್ವವಿದ್ಯಾಲಯದ ಸಂಚಾಲಕಿ ಬಿ.ಕೆ.ಮಾಲತಿಜೀ ಅಕ್ಕ, ಕೆಎಲ್‌ಇ ಶಿಕ್ಷಣ ಸಂಸ್ಥೆಯ ಸ್ಥಾನಿಕ ಆಡಳಿತ ಮಂಡಳಿ ಉಪಾಧ್ಯಕ್ಷ ವಿ.ಪಿ. ಲಿಂಗನಗೌಡ್ರ, ಬಿಎಸ್‌ಟಿ ಜಿಲ್ಲಾಧ್ಯಕ್ಷ ರಾಮಸಿಂಗ್ ರಾಠೊಡ್, ದೈಹಿಕ ಶಿಕ್ಷಣ ನಿರ್ದೇಶಕ ಹನುಮಂತಪ್ಪ, ಜಿಲ್ಲಾ ಉಪಾಧ್ಯಕ್ಷ ಎಂ.ಬಿ. ಮೋಟಳ್ಳಿ, ಲಲಿತಾ ಮೇಲಗಿರಿ, ಯೋಗ ಸಾಧಕ ಆರ್.ಬಿ. ಪಾಟೀಲ, ಕೆ.ಸಿ. ಕೋಮಲಾಚಾರಿ ಇದ್ದರು.