ಕಲಬುರಗಿ: “ಗಣಿತ ಎಂದರೆ ಕಬ್ಬಿಣದ ಕಡಲೆ’ ಎನ್ನುವವರೇ ಹೆಚ್ಚು. ಇಂತಹ ವಿಷಯವನ್ನು ಎಲ್ಲ ಮಕ್ಕಳಿಗೆ ಸರಳವಾಗಿ, ಅರ್ಥವಾಗುವಂತೆ ತಿಳಿಸಿಕೊಡಲು ಸಾರ್ವಜನಿಕ ಶಿಕ್ಷಣ ಇಲಾಖೆ ಹೊಸದೊಂದು ಪ್ರಯತ್ನಕ್ಕೆ ಕೈ ಹಾಕಿದೆ.
ಕಲಬುರಗಿ ತಾಲೂಕು ತಾಜಸುಲ್ತಾನಪುರ ಕೆಎಸ್ ಆರ್‌ಪಿ ಸರಕಾರಿ ಪ್ರೌಢಶಾಲೆಯಲ್ಲಿ ಕಠಿಣ ಎನಿಸಿರುವ ಗಣಿತ ವಿಷಯವನ್ನು ಮಕ್ಕಳಿಗೆ ರಂಗೋಲಿ ಮೂಲಕ ತಿಳಿ ಹೇಳುವ ಪ್ರಯತ್ನವೊಂದು ಸದ್ದಿಲ್ಲದೇ ನಡೆದಿದೆ.
ಈ ಶಾಲೆಯಲ್ಲಿ ಮೆಟ್ರಿಕ್ ವಿದ್ಯಾರ್ಥಿಗಳಿಗೆ ಬೆಳಗ್ಗೆ ಒಂದು ಗಂಟೆಗಳ ಕಾಲ ವಿಶೇಷ ತರಗತಿ ತೆಗೆದುಕೊಳ್ಳಲಾಗುತ್ತಿದೆ. ಈ ವಿಶೇಷ ತರಗತಿಯಲ್ಲಿ ಮಕ್ಕಳು ಗುಣಾಕಾರ, ಭಾಗಾಕಾರ ಮಾಡುವ ಮತ್ತು ಇತರೆ ಸೂತ್ರಗಳನ್ನು ಬಣ್ಣ ಬಣ್ಣದ ರಂಗೋಲಿ ಬಿಡಿಸುವ ಮೂಲಕ ತಿಳಿಸಲಾಗುತ್ತದೆ. ಹೀಗೆ ರಂಗೋಲಿ ಬಿಡಿಸುವಾಗ ವಿದ್ಯಾರ್ಥಿಗಳ ಮೆದುಳಿನಲ್ಲಿ ಭಾರಿ ಪ್ರತಿಕ್ರಿಯೆ ನಡೆದಿರುತ್ತದೆ. ಇದು ಮಕ್ಕಳಲ್ಲಿ ಬಹಳ ದಿನಗಳ ಕಾಲ ನೆನಪಿನಲ್ಲಿ ಉಳಿಯುತ್ತದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಸ್ಮರಣಶಕ್ತಿ ಹೆಚ್ಚಾಗುತ್ತದೆ.
ಇಂತಹ ಒಂದು ಪ್ರಯೋಗದಿಂದ ವಿದ್ಯಾರ್ಥಿಗಳು ಪರೀಕ್ಷೆಗೆ ಬೇಕಾಗುವ 20 ಅಂಕಗಳನ್ನು ನಿರಾಯಾಸವಾಗಿ ಪಡೆಯಬಹುದು. ಇತರೆ ಲೆಕ್ಕಗಳಿಂದ 15 ಅಂಕಗಳನ್ನು ಪಡೆಯುವುದರಿಂದ ಒಟ್ಟು 35 ಅಂಕಗಳನ್ನು ಪಡೆದು ಪಾಸಾಗಬಹುದು. ಇದರಿಂದ ಗಣಿತದಲ್ಲಿನ ಫೇಲಾಗುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಲಿಕ್ಕೆ ಸಹಾಯವಾಗಲಿದೆ ಎಂದು ಗಣಿತ ಶಿಕ್ಷಕ ಶೈಲಶ್ರೀ ಹಾಗೂ ಸಹ ಶಿಕ್ಷಕರಾದ ಸುನೀಲಾ ಬಿರಾದಾ ಮಕ್ಕಳ ಕ್ರಿಯಾಶೀಲತೆ ಹಾಗೂ ಸ್ಮರಣಶಕ್ತಿ ಹೆಚ್ಚಿಸುವುದಕ್ಕೆ ರಂಗೋಲಿ ಬಿಡಿಸುವುದು ಖಂಡಿತವಾಗಿಯೂ ಸಹಾಯವಾಗುತ್ತದೆ. ರಂಗೋಲಿಯಲ್ಲಿನ ತಾಂತ್ರಿಕತೆಯು ಮಕ್ಕಳಲ್ಲಿನ ಸೃಜನಶೀಲತೆ ಹೆಚ್ಚಿಸುತ್ತದೆ. ಹೀಗಾಗಿ ರಂಗೋಲಿ ಬರೀ ಒಂದು ಕಲಾಪ್ರಕಾರ ಮಾತ್ರವಲ್ಲ. ಮಕ್ಕಳ ಬುದ್ಧಿಶಕ್ತಿ ಹೆಚ್ಚಿಸುವ ಒಂದು ಒಳ್ಳೆಯ ಪಾಠ ಕೂಡ ಹೌದು. ಡಾ| ಆನಂದ ಪಾಂಡುರಂಗಿ, ಹಿರಿಯ ಮನೋವೈದ್ಯ, ಧಾರವಾಡ
ರಂಗೋಲಿ ಮೂಲಕ ಮಕ್ಕಳು ಗಣಿತವನ್ನು ನೆಲದ ಮೇಲೆ ದೊಡ್ಡ ದೊಡ್ಡ ಆಕಾರದಲ್ಲಿ ಬಿಡಿಸುವುದರಿಂದ ಸ್ಮರಣದಲ್ಲಿ
ಉಳಿಯುತ್ತದೆ. ಬಣ್ಣ ಹಾಗೂ ಆಕೃತಿಗಳು ಅವರ ಮನಸ್ಸಿನಲ್ಲಿ ಉಳಿಯುವುದರಿಂದ ಅವು ಪರೀಕ್ಷೆಯಲ್ಲಿ ನೆರವಾಗಲಿದೆ ಎನ್ನುವ ಉದ್ದೇಶದಿಂದ ನೆಲದ ಮೇಲೆ ರಂಗೋಲಿ ಬಿಡಿಸುವ ಪ್ರಯೋಗ ಮಾಡಲಾಗುತ್ತಿದೆ.
ಡಾ|ರಾಜಕುಮಾರ ಪಾಟೀಲ, ಮುಖ್ಯ ಶಿಕ್ಷಕ ತಾಜಸುಲ್ತಾನಪುರ ಶಾಲೆ
ವಿದ್ಯಾರ್ಥಿಗಳಲ್ಲಿನ ಭಯ ಹೋಗಲಾಡಿಸುವ ನಿಟ್ಟಿನಲ್ಲಿ ಇದೊಂದು ಭಿನ್ನ ಪ್ರಯೋಗ. ಸರಕಾರಿ ಶಾಲೆಗಳಲ್ಲಿನ ಮಕ್ಕಳಿಗೆ ಗಣಿತ ಕಷ್ಟವಾಗುವುದನ್ನು ತಡೆಯುವುದು ಹಾಗೂ ಗಣಿತದಲ್ಲಿ ಫೇಲಾಗುವ ವಿದ್ಯಾರ್ಥಿಗಳ ಸಂಖ್ಯೆ ಇಳಿಕೆ ಮಾಡುವ ಅಥವಾ ಪೂರ್ತಿಯಾಗಿ ಅಳಿಸುವ ಪ್ರಯತ್ನ ಇದಾಗಿದೆ. ಶಾಲೆ ಮುಖ್ಯ ಗುರುಗಳು ಹಾಗೂ ಗಣಿತ ಶಿಕ್ಷಕಿಯ ಪ್ರಯತ್ನ ಶ್ಲಾಘನೀಯ.
ಡಾ|ಭೀಮಸಿಂಗ್ ರಾಠೊಡ, ಅಧ್ಯಕ್ಷರು, ಪ್ರೌಢಶಾಲಾ ಸಹ ಶಿಕ್ಷಕರ ಸಂಘ