ಹುಬ್ಬಳ್ಳಿ: ರಸ್ತೆ ಗುಂಡಿಗಳನ್ನು ಮುಚ್ಚುವಲ್ಲಿ ಮಹಾನಗರ ಪಾಲಿಕೆ ನಿರ್ಲಕ್ಷ್ಯ ತೋರುತ್ತಿರುವುದನ್ನು ಖಂಡಿಸಿ ಕಾಂಗ್ರೆಸ್ ಮುಖಂಡ ಡಾ| ಮಹೇಶ ನಾಲವಾಡ ನೇತೃತ್ವದಲ್ಲಿ ರವಿವಾರ ರಸ್ತೆ ಗುಂಡಿಗಳಲ್ಲಿ ರಂಗೋಲಿ ಹಾಕುವ ಮೂಲಕ ವಿನೂತನವಾಗಿ ಪ್ರತಿಭಟಿಸಲಾಯಿತು.
ಇಲ್ಲಿನ ವಿದ್ಯಾನಗರ ಶಿರೂರ ಪಾರ್ಕ್‌ನ ಮುಖ್ಯ ರಸ್ತೆಯಿಂದ ತೋಳನಕೆರೆಯ ವರೆಗೂ ರಸ್ತೆ ಸಂಪೂರ್ಣ ಹಾಳಾಗಿದೆ. ಈ ಬಗ್ಗೆ ಶಾಸಕರು, ಸಂಸದರು, ಮಹಾಪೌರರು, ಪಾಲಿಕೆ ಸದಸ್ಯರು, ಪಾಲಿಕೆ ಆಯುಕ್ತರು ಸೇರಿದಂತೆ ಎಲ್ಲರಿಗೂ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ರಸ್ತೆಯ ವಿವಿಧ ಗುಂಡಿಗಳಲ್ಲಿ ಮಹಿಳೆಯರು ರಂಗೋಲಿ ಬಿಡಿಸಿದರು. ಗುಂಡಿಯೊಂದಕ್ಕೆ ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ ಅವರ ಚಿತ್ರ ಬಿಡಿಸಿ ಅದಕ್ಕೆ ಹೂ ಮಾಲೆ ಹಾಕಿ ಪ್ರತಿಭಟಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಡಾ| ಮಹೇಶ ನಾಲವಾಡ, ನಗರದ ಬಹುತೇಕ ರಸ್ತೆಗಳು ಸಂಪೂರ್ಣ ಹಾಳಾಗಿವೆ.
ಇದಕ್ಕೆ ಸ್ಪಂದನೆ ನೀಡಬೇಕಾದ ಪಾಲಿಕೆ ಯಾವುದೇ ಕಾಮಗಾರಿ ಮಾಡದೆ ಉಡಾಫೆ ಉತ್ತರ ನೀಡುತ್ತಿದೆ. ಈ ಭಾಗದಲ್ಲಿ ಹೆಚ್ಚು ಕಾಲೇಜುಗಳಿದ್ದು ದಿನನಿತ್ಯ ಸಾವಿರಾರು ಜನರು ಸಂಚರಿಸುತ್ತಾರೆ. ಹಲವು ಅಪಘಾತಗಳಿಗೆ ಕಾರಣವಾಗುತ್ತಿದೆ. ಇಷ್ಟಾದರೂ ಪಾಲಿಕೆ ಈ ಬಗ್ಗೆ ಕನಿಷ್ಠ ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿದರು.
ಇದೇ ಸಂದರ್ಭದಲ್ಲಿ ಉತ್ತಮ ರಂಗೋಲಿ ಬಿಡಿಸಿದ ಶ್ವೇತಾ ಪ್ರಥಮ, ಬಸವರಾಜ ದ್ವಿತೀಯ, ಭಾರತಿ ತೃತೀಯ ಬಹುಮಾನ ಪಡೆದರು. ಇನ್ನುಳಿದವರಿಗೆ ಸಮಾಧಾನಕರ ಬಹುಮಾನ ವಿತರಿಸಲಾಯಿತು. ಹೂವಪ್ಪ ದಾಯಗೋಡಿ, ಅನುರಾಧಾ ದಾಯಗೋಡಿ, ಪರಶುರಾಮ ಹಬೀಬ, ಮಂಜುನಾಥ ಕೊಪ್ಪದ,
-ವೀರಭದ್ರಪ್ಪ ತೊಪ್ಪಲ, ನಮಾಜಿ, ಪ್ರವೀಣ ಶಲವಡಿ, ಸೋಮಲಿಂಗ ಎಲಿಗಾರ, ಶಂಕರ ಸೇರಿದಂತೆ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಕಾಂಗ್ರೆಸ್‌ನವರು ಪ್ರತಿಭಟನೆ ಮಾಡಿದ ರಸ್ತೆಯಲ್ಲಿಯೇ ಒಂದು ಕಡೆ ರಸ್ತೆ ಗುಂಡಿ ಮುಚ್ಚುವ ಕಾರ್ಯ ಆರಂಭವಾಗಿದ್ದು, ಅದರ ಸ್ವಲ್ಪ ಮುಂದೆ ರಂಗೋಲಿ ಬಿಡಿಸಿ ಪ್ರತಿಭಟಿಸಲಾಯಿತು.