ರಾಂಚಿ : ಭಾರತದ ಆಸೆಯಂತೆ ಮೂರನೇ ಟೆಸ್ಟ್ ಪಂದ್ಯದ ಇಂದಿನ ಕೊನೆಯ ದಿನದಂದು ಪ್ರವಾಸಿ ಆಸ್ಟ್ರೇಲಿಯ ತಂಡದ ವಿಕೆಟ್‌ಗಳು ಪಟಪಟನೆ ಉರುಳಲಿಲ್ಲ; ವಿಜಯಲಕ್ಷ್ಮಿ ಭಾರತಕ್ಕೆ ಒಲಿಯಲಿಲ್ಲ. ಹಾಗಾಗಿ ಇಲ್ಲಿನ ಜೆಎಸ್‌ಸಿಎ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ಸಾಗಿದ ಭಾರತ – ಆಸ್ಟ್ರೇಲಿಯ ನಡುವಿನ ತೃತೀಯ ಟೆಸ್ಟ್ ಪಂದ್ಯ ಅತ್ಯಂತ ಕುತೂಹಲಕಾರಿಯಾಗಿ ಸಾಗಿದರೂ ನಿರಾಶಾದಾಯಕ ಡ್ರಾನಲ್ಲಿ ಮುಕ್ತಾಯವಾಯಿತು.
ನಾಲ್ಕು ಟೆಸ್ಟ್ ಪಂದ್ಯಗಳ ಈ ಸರಣಿಯಲ್ಲಿ ಉಭಯ ತಂಡಗಳು ಈಗ 1-1ರ ಸಮಬಲದಲ್ಲಿ ಸ್ಥಿತವಾಗಿದ್ದು, ಈಗಿನ್ನು ಧರ್ಮಶಾಲಾದಲ್ಲಿ ಮಾರ್ಚ್ 25ರಂದು ನಡೆಯಲಿರುವ ಕೊನೆಯ ಟೆಸ್ಟ್ ಪಂದ್ಯ ಸರಣಿ ನಿರ್ಣಾಯಕ ಪಂದ್ಯವಾಗಿರುವುದರಿಂದ ಭಾರೀ ಕುತೂಹಲ ಮೂಡಿಸಿದೆ.
ಇಂದಿನ ಕೊನೆಯ ದಿನದ ಪಂದ್ಯದಲ್ಲಿ, 100 ಓವರ್‌ಗಳು ಮುಗಿದಾಗ, ಆಸ್ಟ್ರೇಲಿಯ ಎರಡನೇ ಇನ್ನಿಂಗ್ಸ್‌ನಲ್ಲಿ ಆರು ವಿಕೆಟ್ ಕಳೆದುಕೊಂಡು 204 ರನ್‌ಗಳನ್ನು ಗಳಿಸಿತ್ತು. ಆಸೀಸ್‌ನ ಪೀಟರ್ ಹ್ಯಾನ್ಸ್‌ಕಾಂಬ್ ಅಜೇಯ 72 ರನ್ ಹಾಗೂ ಶಾನ್ ಮಾರ್ಶ್ 53 ರನ್ ಬಾರಿಸಿ ತಂಡಕ್ಕೆ ಸೋಲಾಗುವುದನ್ನು ದೃಢ ಸಂಕಲ್ಪದ ಆಟದಿಂದ ತಪ್ಪಿಸಿದರು.
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಆಸ್ಟ್ರೇಲಿಯ 451 ರನ್‌ಗಳಿಗೆ ಆಲೌಟಾಗಿತ್ತು. ಭಾರತ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಪರಾಕ್ರಮವನ್ನು ಮೆರೆದು 9 ವಿಕೆಟ್ ನಷ್ಟಕ್ಕೆ 603 ರನ್‌ಗಳ ಮೊತ್ತದಲ್ಲಿ ಡಿಕ್ಲೇರ್ ಮಾಡಿತ್ತು.
ಆಸೀಸ್ ಎರಡನೇ ಇನ್ನಿಂಗ್ಸ್ ಆಟದಲ್ಲಿ ಭಾರತದ ಎಸೆಗಾರ ರವೀಂದ್ರ ಜಡೇಜ 54 ರನ್ ವೆಚ್ಚಕ್ಕೆ ನಾಲ್ಕು ವಿಕೆಟ್ ಕಿತ್ತರೆ, ರವಿಚಂದ್ರನ್ ಅಶ್ವಿನ್ ಮತ್ತು ಇಶಾಂತ್ ಶರ್ಮಾ ತಲಾ ಒಂದು ವಿಕೆಟ್ ಕಿತ್ತರು.