Advertisement

ರಣಜಿ: ಶಿವಮೊಗ್ಗದಲ್ಲಿ ಸಿಹಿ ಸಿಂಚನ

06:00 AM Dec 26, 2018 | |

ಶಿವಮೊಗ್ಗ: ರಣಜಿ ಕ್ರಿಕೆಟ್‌ ನಾಕೌಟ್‌ ಹಂತ ಜೀವಂತವಾಗಿರಿಸಲು ಗೆಲ್ಲಲೇಬೇಕಿದ್ದ ಎಲೈಟ್‌ “ಎ’ ಗುಂಪಿನ ಮಹತ್ವದ ರಣಜಿ ಪಂದ್ಯದಲ್ಲಿ ರೈಲ್ವೇಸ್‌ ವಿರುದ್ಧ ಆತಿಥೇಯ ಕರ್ನಾಟಕ 176 ರನ್‌ ಪ್ರಚಂಡ ಗೆಲುವು ಸಾಧಿಸಿದೆ. 362 ರನ್‌ ಗುರಿ ಪಡೆದಿದ್ದ ರೈಲ್ವೇಸ್‌ ಅಂತಿಮ ದಿನವಾದ ಮಂಗಳವಾರ 185ಕ್ಕೆ ಸರ್ವಪತನ ಕಂಡಿತು. ಸ್ಪಿನ್ನರ್‌ ಕೃಷ್ಣಪ್ಪ ಗೌತಮ್‌ 6 ವಿಕೆಟ್‌ ಉಡಾಯಿಸಿ ಘಾತಕವಾಗಿ ಪರಿಣಮಿಸಿದರು. ಇದು ಪ್ರಸಕ್ತ ಸಾಲಿನ ರಣಜಿ ಕೂಟದಲ್ಲಿ ಕರ್ನಾಟಕಕ್ಕೆ ಒಲಿದ 2ನೇ ಜಯ. ರಾಜ್ಯ ತಂಡ ಒಟ್ಟು 6 ಪಂದ್ಯಗಳನ್ನು ಆಡಿದೆ. 3 ಡ್ರಾ ದಲ್ಲಿ ಅಂತ್ಯಗೊಂಡಿದೆ. ಒಂದರಲ್ಲಿ ಸೋತಿದೆ. ಡಿ. 30ರಿಂದ ಬೆಂಗ ಳೂರಿನಲ್ಲಿ ನಡೆಯಲಿರುವ ಪಂದ್ಯದಲ್ಲಿ ಕರ್ನಾಟಕ ತಂಡ ಛತ್ತೀಸ್‌ಗಢ ವಿರುದ್ಧ ಆಡಲಿದೆ.

Advertisement

ಗೌತಮ್‌ ಘಾತಕ ದಾಳಿ
ಒಂದು ವಿಕೆಟಿಗೆ 44 ರನ್‌ ಗಳಿಸಿ ದಲ್ಲಿಂದ ಬ್ಯಾಟಿಂಗ್‌ ಮುಂದು ವರಿಸಿದ ರೈಲ್ವೇಸ್‌ಗೆ ಸ್ಪಿನ್ನರ್‌ ಕೆ. ಗೌತಮ್‌ ಸಿಂಹಸ್ವಪ್ನರಾದರು. ಅವರು 30 ರನ್ನಿತ್ತು 6 ವಿಕೆಟ್‌ ಉಡಾಯಿಸಿದರು. ಗೌತಮ್‌ ಮಿಂಚಿನ ದಾಳಿಯೆದುರು ಒಂದೊಂದು ರನ್‌ ತೆಗೆಯಲು ಕೂಡ ರೈಲ್ವೇಸ್‌ ಬ್ಯಾಟ್ಸ್‌ಮನ್‌ಗಳು ಪರದಾಡಿದರು. ನಿರಂತರವಾಗಿ ವಿಕೆಟ್‌ ಕಳೆದುಕೊಳ್ಳುತ್ತ ಸಾಗಿದರು.

ಆರಂಭಿಕ ಬ್ಯಾಟ್ಸ್‌ಮನ್‌ ಸೌರಭ್‌ ವಾಲ್ಕರ್‌ (20) ಹಾಗೂ ನಿತಿನ್‌ ಬಿಲ್ಲೆ (16) ಅಂತಿಮ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದರು. ಬೃಹತ್‌ ಮೊತ್ತ ಬೆನ್ನಟ್ಟುವ ಜವಾಬ್ದಾರಿ ಹೊತ್ತ ಇವರಿಬ್ಬರು ಭರವಸೆಯಿಂದಲೇ ಬ್ಯಾಟಿಂಗ್‌ ಮುಂದುವರಿಸಿದರು. ತಂಡದ ಮೊತ್ತವನ್ನು 85ರ ತನಕ ವಿಸ್ತರಿಸಿದರು. ಆಗ ಸೌರಭ್‌ ಇಲ್ಲದ ರನ್‌ ಕದಿಯಲು ಹೋಗಿ ಸುಚಿತ್‌ ನಡೆಸಿದ ಅದ್ಭುತ ರನೌಟ್‌ಗೆ ಬಲಿಯಾದರು. ಸೌರಭ್‌ ಗಳಿಕೆ  43 ರನ್‌ (96 ಎಸೆತ, 7 ಬೌಂಡರಿ).

 ತಂಡದ ಮೊತ್ತ 126 ರನ್‌ ಆಗಿದ್ದಾಗ 39 ರನ್‌ ಗಳಿಸಿದ್ದ ನಿತಿನ್‌ ಬಿಲ್ಲೆ (131 ಎಸೆತ, 4 ಬೌಂಡರಿ) ಗೌತಮ್‌ ಎಸೆತದಲ್ಲಿ ಎಲ್‌ಬಿ ಆಗಿ ಹೊರನಡೆದರು. ಇದರಿಂದ ರೈಲ್ವೇಸ್‌ ತೀವ್ರ ಒತ್ತಡಕ್ಕೆ ಸಿಲುಕಿತು. ಈ ಹಂತದಲ್ಲಿ ಪ್ರಥಮ್‌ ಸಿಂಗ್‌ (48 ರನ್‌, 151 ಎಸೆತ, 6 ಬೌಂಡರಿ) ಒಂದಿಷ್ಟು ಹೋರಾಟ ಸಂಘಟಿಸಿದರು. ತಂಡದ ಪರ ಗರಿಷ್ಠ ರನ್‌ ಬಾರಿಸಿದರು. ಇವರ ವಿಕೆಟ್‌ ಕೂಡ ಗೌತಮ್‌ ಪಾಲಾಯಿತು. 

ಈ ವಿಕೆಟ್‌ ಪತನದ ಬಳಿಕ ಗೌತಮ್‌ ದಾಳಿ ಮತ್ತಷ್ಟು ಚುರುಕಾ ಯಿತು. ರೈಲ್ವೇಸ್‌ ವಿಕೆಟ್‌ ಪಟಪಟನೆ ಉರುಳಿತು. ನಾಯಕ ಅರಿಂಧಮ್‌ ಘೋಷ್‌ 24 ರನ್‌ ಗಳಿಸಿ ಅಜೇಯ ರಾಗಿ ಉಳಿದರು. 

Advertisement

ಸಂಕ್ಷಿಪ್ತ ಸ್ಕೋರ್‌ ಕರ್ನಾಟಕ-214 ಮತ್ತು 2 ವಿಕೆಟಿಗೆ 290 ಡಿಕ್ಲೇರ್‌. ರೈಲ್ವೇಸ್‌-143 ಮತ್ತು 185 (ಪ್ರಥಮ್‌ ಸಿಂಗ್‌ 48, ವಕಾಸ್ಕರ್‌ 43, ಭಿಲ್ಲೆ 39, ಕೆ. ಗೌತಮ್‌ 30ಕ್ಕೆ 6, ಶ್ರೇಯಸ್‌ ಗೋಪಾಲ್‌ 39ಕ್ಕೆ 2).

ಮುಂದಿನ ಎದುರಾಳಿ:       ಛತ್ತೀಸ್‌ಗಢ
ಸ್ಥಳ: ಬೆಂಗಳೂರು 
ದಿನಾಂಕ: ಡಿ. 30-ಜ. 2

Advertisement

Udayavani is now on Telegram. Click here to join our channel and stay updated with the latest news.

Next