Advertisement

ಗ್ರಾಮೀಣ ರಣಹೇಡಿ

12:30 AM Feb 22, 2019 | |

ಕನ್ನಡದಲ್ಲಿ ರೈತರ ಸಮಸ್ಯೆ ಕುರಿತಂತೆ ಹಲವು ಚಿತ್ರಗಳು ಬಂದಿವೆ. ಆ ಸಾಲಿಗೆ “ರಣಹೇಡಿ’ ಸದ್ದಿಲ್ಲದೆ ಚಿತ್ರೀಕರಣಗೊಂಡು ಇದೀಗ ಬಿಡುಗಡೆಗೆ ಸಜ್ಜಾಗಿದೆ. ಇತ್ತೀಚೆಗೆ ಚಿತ್ರದ ಟ್ರೇಲರ್‌ ಮತ್ತು ಹಾಡುಗಳನ್ನು ಬಿಡುಗಡೆ ಮಾಡಲಾಯಿತು. ಫಿಲ್ಮ್ಚೇಂಬರ್‌ನ ಗೌರವ ಕಾರ್ಯದರ್ಶಿ ಭಾ.ಮ.ಹರೀಶ್‌ ಆಡಿಯೋ ಬಿಡುಗಡೆ ಮಾಡಿ ಶುಭಹಾರೈಸಿದರು. ಮೊದಲ ಸಲ ಚಿತ್ರತಂಡದೊಂದಿಗೆ ಪತ್ರಕರ್ತರ ಮುಂದೆ ಬಂದಿದ್ದ ನಿರ್ದೇಶಕ ಮನು ಕೆ.ಶೆಟ್ಟಿಹಳ್ಳಿ, ಮಾತಿಗಿಳಿದರು. “ಇದು ರೈತರ ಬದುಕು ಬವಣೆ ಕುರಿತಾದ ಚಿತ್ರ. ಇಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ, ಸರ್ಕಾರಿ ಶಾಲೆ ಹಾಗು ಖಾಸಗಿ ಶಾಲೆ ನಡುವಿನ ವ್ಯತ್ಯಾಸ, ಹಳ್ಳಿಯೊಂದರ ಪ್ರೇಮಕಥೆ, ದ್ವೇಷ, ಅಸೂಯೆ, ಹಾಸ್ಯ ಎಲ್ಲವೂ ಇಲ್ಲಿ ಸಮ್ಮಿಳಿತಗೊಂಡಿದೆ. ನಿರ್ಮಾಪಕರು ಕೇಳಿದ್ದೆಲ್ಲವನ್ನೂ ಒದಗಿಸಿದ್ದಾರೆ. ನಮ್ಮಂತಹ ನಿರ್ದೇಶಕರಿಗೆ ಇಂತಹ ನಿರ್ಮಾಪಕರು ಸಿಗಬೇಕು’ ಎಂದರು ನಿರ್ದೇಶಕರು.

Advertisement

ಹಲವು ಚಿತ್ರಗಳಲ್ಲಿ ತರಹೇವಾರಿ ಪಾತ್ರ ಮಾಡಿದ್ದ ಕರ್ಣ ಕುಮಾರ್‌ ಅವರು ಚಿತ್ರದ ಹೀರೋ. ಆದರೆ, ಅವರಿಗೆ ಹೀರೋ ಅಂತ ಕರೆಸಿಕೊಳ್ಳುವುದು ಇಷ್ಟವಿಲ್ಲ. ಅವರೇ ಹೇಳುವಂತೆ, ” ನಾನಿಲ್ಲಿ ನಾಯಕ ನಟನಲ್ಲ. ಆ ಭ್ರಮೆಯಲ್ಲೂ ಇಲ್ಲ. ಚಿತ್ರದಲ್ಲಿ ಇಬ್ಬರು ಹೀರೋಗಳಿದ್ದಾರೆ. ಒಬ್ಬರು ನಿರ್ಮಾಪಕರು. ಇನ್ನೊಬ್ಬರು ನಿರ್ದೇಶಕರು. ನಮ್ಮಂತಹ ಹೊಸಬರಿಗೆ ಅವಕಾಶ ಕೊಟ್ಟಿದ್ದಾರೆ. ಇನ್ನು, ನಿರ್ದೇಶಕರು ನನ್ನ ಪಾತ್ರ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಬಹಳಷ್ಟು ಸಿನಿಮಾದಲ್ಲಿ ಸಣ್ಣ ಪಾತ್ರ ಮಾಡಿದ್ದೇನೆ. ಇಲ್ಲಿ ಒಳ್ಳೆಯ ಅವಕಾಶವಿದೆ. ಈ ಪಾತ್ರಕ್ಕೆ ನಾನೇ ಬೇಕಿತ್ತಾ ಗೊತ್ತಿಲ್ಲ. ಆದರೆ, ಸಿಕ್ಕ ಅವಕಾಶ ಮಿಸ್‌ ಮಾಡಿಕೊಂಡಿಲ್ಲ. ಇನ್ನುಳಿದಂತೆ ಇಲ್ಲಿ ಕೆಲಸ ಮಾಡಿರುವ ತಾಂತ್ರಿಕ ವರ್ಗದವರು ಸ್ಟಾರ್’ ಎಂದರು ಕರ್ಣಕುಮಾರ್‌.

ಸಂಗೀತ ನಿರ್ದೇಶಕ ವಿ.ಮನೋಹರ್‌ ಅವರು ಬಹಳ ದಿನಗಳ ಬಳಿಕ ಹಳ್ಳಿ ಸೊಗಡಿನ ಚಿತ್ರಕ್ಕೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆಯಂತೆ. “ಕನ್ನಡದಲ್ಲಿ ಇತ್ತೀಚೆಗೆ ಹಳ್ಳಿ ಸೊಗಡಿನ ಕಥೆ ಬಂದಿಲ್ಲ. ಇವತ್ತಿಗೂ ಕನ್ನಡ ಸಿನಿಮಾವನ್ನು ಹಳ್ಳಿ ಜನರೇ ಹೆಚ್ಚು ನೋಡುತ್ತಿದ್ದಾರೆ. ಹಳ್ಳಿಗಳಲ್ಲೇ ಕನ್ನಡ ಚಿತ್ರ ಹೆಚ್ಚು ಪ್ರದರ್ಶನ ಕಾಣುತ್ತದೆ. ಇಲ್ಲಿ ರೈತರ ಸಮಸ್ಯೆ ಕುರಿತ ಅಂಶಗಳು ಹೈಲೈಟ್‌. ಒಂದೊಳ್ಳೆಯ ಚಿತ್ರದಲ್ಲಿ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ’ ಅಂದರು ಮನೋಹರ್‌. ನಿರ್ಮಾಪಕ ಸುರೇಶ್‌ ಅವರಿಗೆ ಇದು ಎರಡನೇ ಸಿನಿಮಾವಂತೆ. ಕಥೆ ಇಂಟ್ರೆಸ್ಟ್‌ ಆಗಿದ್ದರಿಂದಲೇ ನಾನು ಚಿತ್ರ ನಿರ್ಮಾಣಕ್ಕೆ ಮುಂದಾದೆ, ಒಳ್ಳೆಯ ತಂಡದ ಸಹಕಾರ, ಪ್ರೋತ್ಸಾಹದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಇಷ್ಟರಲ್ಲೇ ಚಿತ್ರ ಬಿಡುಗಡೆ ಮಾಡುವುದಾಗಿ ಹೇಳಿಕೊಂಡರು ಸುರೇಶ್‌.

ನಾಯಕಿ ಐಶ್ವರ್ಯ ರಾವ್‌ ಅವರಿಲ್ಲಿ ಬಳ್ಳಾರಿಯಿಂದ ಮಂಡ್ಯಕ್ಕೆ ಕಬ್ಬು ಕಡಿಯಲು ವಲಸೆ ಬಂದ ಕೂಲಿ ಹುಡುಗಿ ಪಾತ್ರ ನಿರ್ವಹಿಸಿದ್ದಾರಂತೆ. ರೈತನ ಹೆಂಡತಿ ಪಾತ್ರ ಮಾಡಿದ್ದು, ಅದೊಂದು ಹೊಸ ಅನುಭವ ಕಟ್ಟಿಕೊಟ್ಟಿದೆ ‘ ಎಂಬುದು ಅವರ ಮಾತು. ಚಿತ್ರದ ಬಗ್ಗೆ ಸಂಕಲನಕಾರ ನಾಗೇಂದ್ರ ಅರಸ್‌, ರಾಘವೇಂದ್ರ ಶೆಟ್ಟಿ, ರಘುಪಾಂಡೆ, ಆಶಾಲತಾ, ಛಾಯಾಗ್ರಾಹಕ ಕುಮಾರ್‌ಗೌಡ, ಖಳನಟ ಸತೀಶ್‌, ಗಾಯಕ ಮಳವಳ್ಳಿ ನಾಗೇಂದ್ರ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next