ಹಳೆ ಮೈಸೂರು ಪ್ರಾಂತದಲ್ಲಿ ನೆಲೆ ಕಂಡುಕೊಳ್ಳಲು ಶತಸಿದ್ಧ ಪ್ರಯತ್ನಕ್ಕೆ ಮುಂದಾ ಗಿರುವ ಬಿಜೆಪಿ ರಾಮ ಜಪ ಆರಂಭಿಸಿದೆ. ಅದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಶ್ರೀರಾಮಚಂದ್ರನ ವನವಾಸ ಕಾಲದಲ್ಲಿ ತಂಗಿದ್ದ ಹಾಗೂ ಸ್ವಯಂ ನಿರ್ದೇಶಿಸಿ ಸುಗ್ರೀವ ರಾಜನಿಂದ ಪ್ರತಿಷ್ಠಾಪಿಸಿಕೊಂಡ ಶ್ರೀರಾಮ ದೇಗುಲ ಸಪ್ತಋಷಿಗಳ ನೆಲೆವೀಡು ರಾಮದೇವರ ಬೆಟ್ಟದಲ್ಲಿರುವ ಚತುರ್ಮುಖ ಏಕಶಿಲಾ ಸೀತಾಮಾತಾ ಲಕ್ಷ್ಮಣ ಸಮೇತವಿರುವ ಪ್ರಥಮ ಮಹತ್ವಪೂರ್ಣ ಕ್ಷೇತ್ರದಲ್ಲಿ ಪೂಜೆ ಸಲ್ಲಿಸುವ ಮೂಲಕ ಸದ್ದಿಲ್ಲದೆ ಯುದ್ಧ ಕಹಳೆ ಮೊಳಗಿಸಿದ್ದಾರೆ.
ರಾಮದೇವರ ಬೆಟ್ಟದ ಮತ್ತು ಶ್ರೀರಾಮಚಂದ್ರನ ಮೂಲತಾಣ ಅಯೋಧ್ಯೆಗೆ ಅವಿನಾಭಾವ ಸಂಬಂಧವಿದೆ. ಸೀತಾಮಾತೆ ಮತ್ತು ಲಕ್ಷ್ಮಣ ಸಮೇತ 14 ವರ್ಷ ವನವಾಸಕ್ಕೆಂದು ಬಂದಾಗ ಶ್ರೀರಾಮಚಂದ್ರ ಸುಮಾರು 5ರಿಂದ 6 ವರ್ಷ ಇಲ್ಲೆ ನೆಲೆಸಿದ್ದರು. ಶ್ರೀರಾಮ ಬದುಕಿದ್ದಾಗಲೇ ಸ್ವರ್ಗದಲ್ಲಿ ವಿಶ್ವಕರ್ಮರ ಕೈಯಲ್ಲಿ ಸ್ವಯಂ ಶ್ರೀರಾಮಚಂದ್ರ ಹೇಳಿದಂತೆ ಮೂರ್ತಿ ಮಾಡಿ ಸುಗ್ರೀವ ರಾಜನಿಗೆ ಕೊಡಲಾಗಿತ್ತು. ಆದರೆ ಅದನ್ನು ನೇರವಾಗಿ ಕಿಷ್ಕಿಂದೆಗೆ ಕೊಂಡೊಯ್ಯುವಂತಿಲ್ಲ. ರಾಮದೇವರ ಬೆಟ್ಟದಲ್ಲಿ ಪೂಜೆ ಸಲ್ಲಿಸುವಂತೆ ಹೇಳಿದ್ದರು. ಅಲ್ಲಿಟ್ಟಿದ್ದ ಮೂರ್ತಿಯನ್ನು ಮತ್ತೆ ಮೇಲೆತ್ತಲಾಗದ ಸುಗ್ರೀವ ಇಲ್ಲಿಯೇ ಮೂರ್ತಿ ಪ್ರತಿಷ್ಠಾಪಿಸಿ ಮೂಲ ಅವತಾರದಲ್ಲಿ ಕಿಷ್ಕಿಂದೆಗೆ ತೆರಳಿದ ಎನ್ನುತ್ತಾರೆ. ಇಂದಿಗೂ ಮತ್ತೊಂದು ಅವತಾರದಲ್ಲಿ ಸುಗ್ರೀವ ಪ್ರತೀ ದಿನ ಮಧ್ಯರಾತ್ರಿ 12ರಿಂದ ಬೆಳಗ್ಗೆ 4 ಗಂಟೆಯ ಒಳಗೆ ಮೊದಲು ಪೂಜೆ ಸಲ್ಲಿಸಿ ದರ್ಶನ ಪಡೆಯುತ್ತಾರೆ ಎಂಬ ನಂಬಿಕೆಯಿದೆ ಅಂತಾರೆ ಚಂದ್ರಶೇಖರನಾಥ ಗುರೂಜಿ.
ರಾಮನಗರದಿಂದ ಸೀತಾದೇವಿಗೆ ರೇಷ್ಮೆ ಸೀರೆ: ರೇಷ್ಮೆಗೆ ಹೆಸರುವಾಸಿಯಾದ ರಾಮನಗರದಿಂದ ಸೀತಾದೇವಿಗೆ ರೇಷ್ಮೆ ಸೀರೆ, ರಾಮ-ಲಕ್ಷ್ಮಣರಿಗೆ ಶಲ್ಯ ಹಾಗೂ ರಾಮನಗರದ ರಾಮಭಕ್ತರ ದೇಣಿಗೆಯಿಂದ ಖರೀದಿಸಿರುವ ಬೆಳ್ಳಿ ಇಟ್ಟಿಗೆ ಕೊಂಡೊಯ್ಯುವ ಸಲುವಾಗಿ ರಾಮದೇವರ ಬೆಟ್ಟ ಮತ್ತು ಶ್ರೀರಾಮ ಬಂಟ ಕೆಂಗಲ್ ಹನುಮಂತರಾಯನ ದೇಗುಲದಲ್ಲಿ ವಿಧಿ ಬದ್ಧವಾಗಿ ಸಿ.ಪಿ. ಯೋಗೇಶ್ವರ್ ಮತ್ತಿತರ ಜಿಲ್ಲಾ ನಾಯಕರು ಪೂಜೆ ಸಲ್ಲಿಸಿದ್ದಾರೆ.
ಅಯೋಧ್ಯೆ ರಾಮಮಂದಿರಕ್ಕೆ ಬೆಳ್ಳಿ ಇಟ್ಟಿಗೆ: ಈಗ ಬಿಜೆಪಿ ರಾಮಜಪದೊಂದಿಗೆ ಹೋರಾಟ ಆರಂಭಿಸಿದೆ. ಪ್ರಾಥಮಿಕವಾಗಿ ಅಯೋಧ್ಯೆ ರಾಮಮಂದಿರಕ್ಕೆ ಬೆಳ್ಳಿ ಇಟ್ಟಿಗೆ, ರಾಮನಗರದ ರೇಷ್ಮೆ ಸೀರೆ, ಶಲ್ಯ ಕೊಡುಗೆ ನೀಡುವ ಮೂಲಕ ಹಿಂದೂ ಮಂತ್ರ ಪಠಣದೊಂದಿಗೆ ವಿಪಕ್ಷಗಳಿಗೆ ಟಾಂಗ್ ನೀಡುತ್ತಿದೆ. ಇದರ ಜತೆ ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥನಾರಾಯಣ ಅವರು, ಅಯೋಧ್ಯೆ ಮಾದರಿಯಲ್ಲಿ ರಾಮದೇವರ ಬೆಟ್ಟ ಜೀರ್ಣೋದ್ಧಾರ ಮಾಡಲು ಸಿಎಂಗೆ ಪತ್ರ ಬರೆದಿದ್ದಾರೆ.
-ಎಂ.ಎಚ್.ಪ್ರಕಾಶ್ ರಾಮನಗರ