Advertisement

ಶಿಯಾ ಮಂಡಳಿ ಪ್ರಸ್ತಾವನೆ: ಮುಸ್ಲಿಂ ಸಂಘಟನೆಗಳ ತಿರಸ್ಕಾರ

11:26 AM Nov 25, 2017 | |

ಮುಂಬಯಿ: ಅಯೋಧ್ಯಾ ವಿವಾದಕ್ಕೆ  ಸಂಬಂಧಿಸಿದಂತೆ ಉತ್ತರ ಪ್ರದೇಶದ ಶಿಯಾ ವಕ್ಫ್ ಮಂಡಳಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ  ಕರಡು ಪ್ರಸ್ತಾವನೆಯನ್ನು ಮುಂಬಯಿ ಮೂಲದ  ಮುಸ್ಲಿಂ  ಸಂಘಟನೆಗಳು  ತಿರಸ್ಕರಿಸಿವೆ. 

Advertisement

ಶಿಯಾ ವಕ್ಫ್ ಮಂಡಳಿಯ ಈ ಪ್ರಸ್ತಾವನೆ  ಶಿಯಾ ಮತ್ತು ಸುನ್ನಿ ಸಮುದಾಯಗಳ ನಡುವೆ ಒಡಕು ಮೂಡಿಸುವ ಪ್ರಯತ್ನವಾಗಿದೆ ಎಂದು ಈ ಸಂಘಟನೆಗಳು ಆರೋಪಿಸಿವೆ. 

ಉತ್ತರಪ್ರದೇಶದ ಶಿಯಾ ವಕ್ಫ್ ಮಂಡಳಿ ಸೋಮವಾರದಂದು ಸುಪ್ರೀಂಕೋರ್ಟ್‌ಗೆ  ಸಲ್ಲಿಸಿದ  ಅಫಿದವಿತ್‌ನಲ್ಲಿ  ಅಯೋಧ್ಯೆಯ ವಿವಾದಾತ್ಮಕ  ಜಾಗದ ಮೇಲಣ ತನ್ನ ಹಕ್ಕನ್ನು ತ್ಯಜಿಸಿ ಅಲ್ಲಿ ರಾಮ ಮಂದಿರ ನಿರ್ಮಾಣಕ್ಕೆ  ಅವಕಾಶ ಮಾಡಿಕೊಡುವ ಮತ್ತು ಲಕ್ನೋದಲ್ಲಿ “ಮಸ್ಜಿದ್‌-ಇ-ಅಮಾನ್‌’ ನಿರ್ಮಿಸುವ  ಕರಡು ಪ್ರಸ್ತಾವನೆಯನ್ನು ಮುಂದಿರಿಸಿತ್ತು. 

ವಿವಿಧ  ಪಕ್ಷಗಳೊಂದಿಗೆ  ಚರ್ಚಿಸಿದ  ಬಳಿಕ ಅಯೋಧ್ಯೆಯಲ್ಲಿ  ರಾಮಮಂದಿರ ನಿರ್ಮಿಸುವ  ಮತ್ತು ಲಕ್ನೋದಲ್ಲಿ  ಮಸೀದಿ ನಿರ್ಮಿಸುವ ಪ್ರಸ್ತಾವನೆಯನ್ನು ಸಿದ್ಧಪಡಿಸಿ ಅದನ್ನು ಸುಪ್ರೀಂ ಕೋರ್ಟ್‌ಗೆ  ಸಲ್ಲಿಸಿರುವುದಾಗಿ  ಶಿಯಾ ವಕ್ಫ್ ಮಂಡಳಿಯ ಅಧ್ಯಕ್ಷರಾದ ಸಯ್ಯದ್‌ ವಾಸೀಮ್‌ ರಿಜ್ವಿ ತಿಳಿಸಿದ್ದರಲ್ಲದೆ  ದೇಶದಲ್ಲಿ ಶಾಂತಿ ಮತ್ತು  ಸಹೋದರತೆಯನ್ನು ಕಾಯ್ದುಕೊಳ್ಳುವ  ಗುರಿಯೊಂದಿಗೆ  ಈ ಪ್ರಸ್ತಾವನೆಯನ್ನು  ಸಿದ್ಧಪಡಿಸಿರುವುದಾಗಿ  ಅವರು  ಹೇಳಿದ್ದರು. 

ಆದರೆ  ಗುರುವಾರ ನಗರದಲ್ಲಿ  ಜಂಟಿ  ಪತ್ರಿಕಾಗೋಷ್ಠಿ ನಡೆಸಿದ  ಶಿಯಾ ಸುನ್ನಿ ಇತ್ತೆಹಾದ್‌ ಫೋರಂ ಮತ್ತು  ಅವಾಮಿ ವಿಕಾಸ ಪಾರ್ಟಿ ಶಿಯಾ ವಕ್ಫ್ ಮಂಡಳಿಯ  ಪ್ರಸ್ತಾವನೆಯನ್ನು ತಿರಸ್ಕರಿಸಿದವಲ್ಲದೆ  ತೀವ್ರ  ಆಕ್ಷೇಪವನ್ನು  ವ್ಯಕ್ತಪಡಿಸಿದವು. 

Advertisement

ಶಿಯಾ ವಕ್ಫ್ ಮಂಡಳಿಯ ಈ ಪ್ರಸ್ತಾವನೆ ಶಿಯಾ ಮತ್ತು ಸುನ್ನಿ ಸಮುದಾಯಗಳ ನಡುವೆ ಅನಗತ್ಯ  ಬಿಕ್ಕಟ್ಟನ್ನು  ಸೃಷ್ಟಿಸುವ  ಯತ್ನವಾಗಿದೆ ಎಂದು  ಅವಾಮಿ ವಿಕಾಸ ಪಾರ್ಟಿಯ ರಾಷ್ಟ್ರೀಯ  ಅಧ್ಯಕ್ಷ  ಶಂಶೇರ್‌ಖಾನ್‌  ಪಠಾಣ್‌  ಆರೋಪಿಸಿದರು. 

ಶಿಯಾ ಮತ್ತು ಸುನ್ನಿ ಸಮುದಾಯಗಳ ನಾಯಕರು ಮತ್ತು ಧಾರ್ಮಿಕ ಮುಖ್ಯ ಸ್ಥರು  ಈಗಾಗಲೇ  ಶಿಯಾ ವಕ್ಫ್ ಮಂಡಳಿಯ  ಈ ಪ್ರಸ್ತಾವನೆಯನ್ನು  ತಿರಸ್ಕರಿಸಿದ್ದಾರೆ. ಶಿಯಾ ಸಮುದಾಯದ  ಧಾರ್ಮಿಕ ಮುಖಂಡರು  ಅಯೋಧ್ಯೆ ಯಲ್ಲಿ  ಬಾಬರಿ ಮಸೀದಿ ನಿರ್ಮಾಣ ವಾಗಬೇಕು ಇಲ್ಲವೇ ಈ ವಿಚಾರದಲ್ಲಿ  ಸುಪ್ರೀಂ ಕೋರ್ಟ್‌  ತನ್ನ  ತೀರ್ಪು  ನೀಡಬೇಕು  ಎಂದು  ಪ್ರತಿಪಾದಿಸುತ್ತಲೇ ಬಂದಿದ್ದಾರೆ ಎಂದರು. 

ಇಂತಹ ಅಫಿದವಿತ್‌ ಸಲ್ಲಿಸಲು ಉತ್ತರಪ್ರದೇಶದ ಶಿಯಾ ವಕ್ಫ್ ಮಂಡಳಿಗೆ ಯಾವುದೇ  ಹಕ್ಕು ಇಲ್ಲವಾಗಿದೆ. ಬಿಜೆಪಿಯನ್ನು  ಓಲೈಸುವ  ಏಕೈಕ ಉದ್ದೇಶದಿಂದ ಶಿಯಾ ವಕ್ಫ್ ಮಂಡಳಿ ಇಂತಹ ಆಧಾರರಹಿತ  ಪ್ರಸ್ತಾವನೆಗಳನ್ನು  ಸುಪ್ರೀಂಕೋರ್ಟ್‌ ನ ಮುಂದಿರಿಸಿದೆ. ಒಂದೋ ಬಾಬರಿ ಮಸೀದಿ ಅಯೋಧ್ಯೆಯಲ್ಲಿಯೇ  ನಿರ್ಮಾಣಗೊಳ್ಳಬೇಕು  ಅಥವ ಈ ವಿವಾದದ ಕುರಿತಂತೆ ಸುಪ್ರೀಂ ಕೋರ್ಟ್‌ ನೀಡಲಿರುವ  ತೀರ್ಪಿಗಾಗಿ  ಕಾಯಬೇಕು ಎಂಬುದು  ನಮ್ಮ  ನಿಲುವಾಗಿದೆ ಎಂದು ಮಹಾರಾಷ್ಟ್ರ ವಕ್ಫ್ ಮಂಡಳಿಯ ಸದಸ್ಯರಾದ ಮೌಲಾನಾ ಜಹೀರ್‌ ಅಬ್ಟಾಸ್‌ ರಿಜ್ವಿ  ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next