ಕೋಲ್ಕತಾ : ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳನ್ನು ಪಶ್ಚಿಮ ಬಂಗಾಳದಲ್ಲಿ ಬಂಧಿಸಿದ ಬೆನ್ನಲ್ಲೇ ಬಿಜೆಪಿ ಮತ್ತು ರಾಜ್ಯದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ನಡುವೆ ಚುನಾವಣೆ ವೇಳೆ ತೀವ್ರ ರಾಜಕೀಯ ವಾಗ್ಸಮರಕ್ಕೆ ಕಾರಣವಾಗಿದೆ.
ಇಬ್ಬರ ಬಂಧನದ ಬೆನ್ನಲ್ಲೇ ಪಶ್ಚಿಮ ಬಂಗಾಳ ಭಯೋತ್ಪಾದಕರಿಗೆ ಸುರಕ್ಷಿತ ಸ್ವರ್ಗ ಎಂದು ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಗಂಭೀರ ಆರೋಪ ಮಾಡಿದ್ದರು.
ಕೂಚ್ ಬೆಹಾರ್‌ನ ದಿನ್ಹಟಾದಲ್ಲಿ ಚುನಾವಣ ಪ್ರಚಾರ ಸಭೆಯಲ್ಲಿ ತಿರುಗೇಟು ನೀಡಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ‘ಬಂಧಿತರು ಬಂಗಾಳದ ನಿವಾಸಿಗಳಲ್ಲ… ಅವರು ಇಲ್ಲಿ ಅಡಗಿಕೊಂಡಿದ್ದರು. ಅವರನ್ನು ಎರಡು ಗಂಟೆಗಳಲ್ಲೇ ಬಂಧಿಸಲಾಯಿತು. ಬಂಗಾಳದಲ್ಲಿ ಶಾಂತಿ ನೆಲೆಸಿದರೆ ಬಿಜೆಪಿಗೆ ಅದನ್ನು ಸಹಿಸಲು ಸಾಧ್ಯವಿಲ್ಲ. ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಬಿಹಾರದಂತಹ ಬಿಜೆಪಿ ಆಡಳಿತದ ರಾಜ್ಯಗಳು ಸುರಕ್ಷಿತವಾಗಿದೆಯೇ” ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದರು.
ತೃಣಮೂಲ ಕಾಂಗ್ರೆಸ್ ಹಿರಿಯ ನಾಯಕ ಕುನಾಲ್ ಘೋಷ್, ಬಿಜೆಪಿಗೆ ತಿರುಗೇಟು ನೀಡಿ, ಬಂಧಿಸುವ ಸಂಸ್ಥೆ ಎನ್ಐಎ “ರಾಜ್ಯ ಪೊಲೀಸರ ಸಕ್ರಿಯ ಸಹಕಾರವನ್ನು ಸ್ವೀಕರಿಸಿದೆ. ಎನ್ಐಎ ಪತ್ರಿಕಾ ಪ್ರಕಟಣೆಯು ಅವರು ಮಾಡಿದ ಬಂಧನಗಳಲ್ಲಿ ರಾಜ್ಯ ಪೊಲೀಸರ ಸಹಕಾರವನ್ನು ಉಲ್ಲೇಖಿಸಿದೆ. ಬಂಗಾಳದ ಪೊಲೀಸರು ದೇಶವಿರೋಧಿ ಶಕ್ತಿಗಳನ್ನು ನಿಗ್ರಹಿಸುವಲ್ಲಿ ದೃಢವಾಗಿ ಉಳಿದಿದ್ದಾರೆ ಮತ್ತು ಇತರ ಏಜೆನ್ಸಿಗಳೊಂದಿಗೆ ಸಹಕರಿಸಲು ಯಾವಾಗಲೂ ಸಿದ್ಧರಾಗಿದ್ದಾರೆ ” ಎಂದು ಹೇಳಿದ್ದಾರೆ.
ರಾಮೇಶ್ವರಂ ಕೆಫೆಯಲ್ಲಿ ಮಾರ್ಚ್ 1 ರಂದು 10 ಜನರು ಗಾಯಗೊಂಡಿದ್ದ ಸ್ಫೋಟಕ್ಕೆ ಸಂಬಂಧಿಸಿದಂತೆ ಎನ್‌ಐಎ ಬಿಜೆಪಿ ಕಾರ್ಯಕರ್ತನನ್ನು ಪ್ರಶ್ನಿಸಿದ ವರದಿಗಳನ್ನು ಅವರು ಉಲ್ಲೇಖಿಸಿದರು.
ಶುಕ್ರವಾರ ಬೆಳಗ್ಗೆ ಪ್ರಮುಖ ಸಂಚುಕೋರರಾದ ಮುಸ್ಸಾವಿರ್ ಹುಸೇನ್ ಶಾಝೇಬ್ ಮತ್ತು ಅಬ್ದುಲ್ ಮಥೀನ್ ತಾಹಾ ಎಂಬವರನ್ನು ಕೋಲ್ಕತಾದಿಂದ 180 ಕಿಮೀ ದೂರದಲ್ಲಿರುವ ಪುರ್ಬಾ ಮೇದಿನಿಪುರ್ ಜಿಲ್ಲೆಯ ಕಾಂತಿ ಅಥವಾ ಕೊಂಟೈ ಎಂಬ ಸಣ್ಣ ಪ್ರದೇಶದ ಅಡಗು ತಾಣದಲ್ಲಿ ಎನ್‌ಐಎ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ.