ಕೆಲವು ತಿಂಗಳುಗಳ ಹಿಂದೆ ಪಾರುಲ್ ಯಾದವ್ ಅಭಿನಯದ “ಬಟರ್‌ಫ್ಲೈ’ ಚಿತ್ರ ಶುರು ಮಾಡಿದ್ದರು ನಟ-ನಿರ್ದೇಶಕ ರಮೇಶ್ ಅರವಿಂದ್. ಆ ಸಂದರ್ಭದಲ್ಲಿ, ಆ ಚಿತ್ರವನ್ನು ತಮಿಳಿನಲ್ಲೂ ಮಾಡುವುದಾಗಿ ಹೇಳಿದ್ದರು. ಈಗ ಅದಕ್ಕೆ ಕೊನೆಗೂ ಕಾಲ ಕೂಡಿ ಬಂದಿದೆ. “ಬಟರ್‌ಫ್ಲೈ’ನ ತಮಿಳು ಅವತರಣಿಕೆಯಾದ “ಪ್ಯಾರಿಸ್ ಪ್ಯಾರಿಸ್’ ನಿನ್ನೆ ಚೆನ್ನೈನಲ್ಲಿ ಪ್ರಾರಂಭವಾಗಿದೆ.
ಕನ್ನಡದ ಚಿತ್ರದಲ್ಲಿ ಪಾರುಲ್ ಯಾದವ್ ನಾಯಕಿಯಾದರೆ, ತಮಿಳಿನಲ್ಲಿ ಕಾಜಲ್ ಅಗರವಾಲ್ ಮಾಡುತ್ತಿದ್ದಾರೆ ಮತ್ತು ಈ ಎರಡೂ ಚಿತ್ರಗಳನ್ನು ರಮೇಶ್ ಅರವಿಂದ್ ನಟಿಸುತ್ತಿದ್ದಾರೆ. ಅಂದ ಹಾಗೆ, “ಬಟರ್‌ಫ್ಲೈ’ ಮತ್ತು “ಪ್ಯಾರಿಸ್ ಪ್ಯಾರಿಸ್’ ಎರಡೂ ಹಿಂದಿಯ “ಕ್ವೀನ್’ ಚಿತ್ರದ ರೀಮೇಕ್. ಕಂಗನಾ ರಣೌತ್ ಅಭಿನಯದ ಈ ಚಿತ್ರವನ್ನು ಎರಡೂ ಭಾಷೆಗಳ ನೇಟಿವಿಟಿಗೆ ತಕ್ಕ ಹಾಗೆ ಮಾಡಲಾಗುತ್ತಿದೆ ಎನ್ನುತ್ತಾರೆ ರಮೇಶ್ ಅರವಿಂದ್.
“ನಾವು ರೀಮೇಕ್ ಮಾಡುತ್ತಿಲ್ಲ. ಆ ಸಿನಿಮಾದ ಮೂಲ ಆತ್ಮವನ್ನು ಇಟ್ಟುಕೊಂಡು, ಎರಡೂ ಭಾಷೆಗಳ ನೇಟಿವಿಟಿಗೆ ತಕ್ಕ ಹಾಗೆ ಮಾಡುತ್ತಿದ್ದೇವೆ. ಇದೊಂದು ಮಹಿಳಾ ಪ್ರಧಾನ ಚಿತ್ರವಾದ್ದರಿಂದ, ಮಹಿಳೆಯರೇ ಮತ್ತು ಅದರಲ್ಲೂ ಬರಹಗಾರ್ತಿಯರೇ ಚಿತ್ರಕಥೆ ಹಾಗೂ ಸಂಭಾಷಣೆ ಬರೆದರೆ ಚೆನ್ನ ಎಂಬುದು ನನ್ನ ಉದ್ದೇಶವಾಗಿತ್ತು. ಅದರಂತೆ ಕನ್ನಡದಲ್ಲಿ ಮಮತಾ ಸಾಗರ್ ಹಾಗೂ ತಮಿಳಿನಲ್ಲಿ ತಮಿಳಚ್ಚಿ ತಂಗಪಾಂಡಿಯನ್ ಚಿತ್ರಕಥೆ ಮತ್ತು ಸಂಭಾಷಣೆಗಳನ್ನು ಬರೆದಿದ್ದಾರೆ’ ಎನ್ನುತ್ತಾರೆ ರಮೇಶ್ ಅರವಿಂದ್.
ಈ ಎರಡೂ ಚಿತ್ರಗಳ ಚಿತ್ರೀಕರಣ ಜೊತೆಜೊತೆಯಾಗಿ ನಡೆಯಲಿದ್ದು, ಅಕ್ಟೋಬರ್ ನಾಲ್ಕರಿಂದ ಕನ್ನಡ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ. ಈಗಾಗಲೇ ಒಂದು ಹಂತದ ಚಿತ್ರೀಕರಣ ಆಗಿದ್ದು, ಅಕ್ಟೋಬರ್ 4ರಿಂದ ಗೋಕರ್ಣದಲ್ಲಿ ಪ್ರಾರಂಭವಾಗಿ, ಅಲ್ಲಿಂದ ಪ್ಯಾರಿಸ್, ಆ್ಯಮ್‌ಸ್ಟರ್‌ಡ್ಯಾಮ್, ಲಂಡನ್, ಬಾರ್ಸಿಲೋನ ಮುಂತಾದ ಕಡೆ ನಡೆಯಲಿದೆ.
ಈ ಎರಡೂ ಚಿತ್ರಗಳಲ್ಲಿ ಕನ್ನಡದ ಹುಡುಗ ಶಶಿ ವರುಣ್ ನಾಯಕನಾಗಿ ನಟಿಸುತ್ತಿದ್ದಾರೆ. ಮಿಕ್ಕಂತೆ ಕನ್ನಡ ಅವತರಣಿಕೆಯಲ್ಲಿ ಸುಧಾ ಬೆಳವಾಡಿ, ಭಾರ್ಗವಿ ನಾರಾಯಣ್ ಮುಂತಾದವರು ನಟಿಸುತ್ತಿದ್ದಾರೆ. “ಕ್ವೀನ್’ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದ ಅಮಿತ್ ತ್ರಿವೇದಿ, ಈ ಎರಡೂ ಭಾಷೆಯ ಚಿತ್ರಗಳಿಗೆ ಹೊಸ ಹಾಡುಗಳನ್ನು ಕಂಪೋಸ್ ಮಾಡಲಿದ್ದಾರೆ.