ವಿಜಯಪುರ : ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರೊಂದಿಗೆ ಸೇರಿ ನಾನು ಹೊಸ ಪಕ್ಷ ಕಟ್ಟುವುದಾಗಿ ವದಂತಿ ಹಬ್ಬಿದ್ದು, ಹೊಸ ಪಕ್ಷ ಕಟ್ಟಲು ನನ್ನ ಬಳಿ ಲೂಟಿ ಹೊಡೆದ ಹಣವಿಲ್ಲ ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭಾನುವಾರ ಹೇಳಿದ್ದಾರೆ.
ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಾವು ಬಿಜೆಪಿ ಪಕ್ಷ ಕಟ್ಟಿದವರು. ಅದನ್ನೇ ಬಲಪಡಿಸುವುದು ನಮ್ಮ ಗುರಿ. ಇದಕ್ಕಾಗಿ ಪಕ್ಷದ ಮಾಜಿ ಸಚಿವ, ಶಾಸಕ ರಮೇಶ ಜಾರಕಿಹೊಳಿ ಜೊತೆ ಸೇರಿ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಕುರಿತು ಚರ್ಚಿಸಿದ್ದೇವೆ. ಆದರೆ ಹೊಸ ಪಕ್ಷ ಕಟ್ಟುವ ಚರ್ಚೆ ಆಗಿದೆ ಎಂಬುದು ಸುಳ್ಳು ಎಂದರು.
ಹೊಸ ಪಕ್ಷ ಕಟ್ಟಲು ಹಣ ಬೇಕು, ಅದರಲ್ಲೂ ಲೂಟಿ ಹೊಡೆದ ಹಣ ಇದ್ದಲ್ಲಿ ಹೊಸ ಪಕ್ಷ ಕಟ್ಟೋದು. ನಮ್ಮಲ್ಲಿ ಅಂಥ ಹಣವಿಲ್ಲ ಎಂದಾದ ಮೇಲೆ ಇನ್ನೆಲ್ಲಿ ಹೊಸ ಪಕ್ಷ ಕಟ್ಟುವುದು ಎಂದು ಯಡಿಯೂರಪ್ಪ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.
ಪ್ರಾದೇಶಿಕ ಪಕ್ಷ ಕಟ್ಟಿಕೊಂಡಿರುವ ದೇವೇಗೌಡರ ಜೆಡಿಎಸ್ ಪಕ್ಷವೇ ಮಲಗಿದೆ, ಇನ್ನು ನಾವೆಲ್ಲಿಂದ ಹೊಸ ಪಕ್ಷ ಕಟ್ಟೋದು ಎಂದರು.
ಶಾಸಕರು ಪ್ರತ್ಯೇಕವಾಗಿ ಭೇಟಿ ಮಾಡುವ ವಿಷಯದಲ್ಲಿ ಪಕ್ಷವನ್ನು, ವರಿಷ್ಠರನ್ನು ಬ್ಲಾಕ್‍ಮೇಲ್ ಮಾಡುವ ತಂತ್ರವಲ್ಲ. ಸಿಎಂ ಹಾಗೂ ವರಿಷ್ಠರು ನಮ್ಮ ಜೊತೆಗಿದ್ದು, ಸಚಿವ ಸ್ಥಾನ ವಂಚಿತ ವಿಜಯಪುರ ಜಿಲ್ಲೆಗೆ ಭವಿಷ್ಯದಲ್ಲಿ ಅವಕಾಶ ಸಿಕ್ಕೇ ಸಿಗುವುದು ಖಚಿತ ಎಂದರು.
ನಿರಾಣಿ ಅವರನ್ನು ನಾನೇ ಬಿಜೆಪಿ ಪಕ್ಷಕ್ಕೆ ಕರೆತಂದು, ಟಿಕೆಟ್ ಕೊಡಿಸಿದ್ದು, ನಿರಾಣಿ ಜೊತೆ ನನ್ನನ್ನು ಹೋಲಿಕೆ ಮಾಡಬೇಡಿ. ನಿರಾಣಿ ವರ್ಸಸ್ ಯತ್ನಾಳ್ ಎಂಬ ಚರ್ಚೆ ನಡೆದಿದೆ ಎಂಬುದಕ್ಕೆ ಪ್ರತಿಕ್ರಿಯಿಸಿದ ಅವರು,ನಿರಾಣಿ-ಪರಾಣಿ ಅಂಥರವರಿಗೆಲ್ಲಾ ಅಂಜಿ ರಾಜಕಾರಣ ಮಾಡುವ ವ್ಯಕ್ತಿ ನಾನಲ್ಲ ಎಂದರು.