ಹೊಸದಿಲ್ಲಿ: ಬಿಜೆಪಿ ಸಂಸದ ರಮೇಶ್ ಬಿಧುರಿ ಅವರು ಸಂಸತ್ತಿನಲ್ಲಿ ಅಸಂಸದೀಯ ಪದಗಳನ್ನು ಬಳಸಿ ಕೋಮು ಪ್ರಚೋದಕ ಹೇಳಿಕೆಗಳನ್ನು ನೀಡುವ ಮೂಲಕ ಭಾರೀ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು “ಕಠಿಣ ಕ್ರಮ”ದ ಎಚ್ಚರಿಕೆಯನ್ನು ನೀಡಿದ್ದಾರೆ.ಮಾತ್ರವಲ್ಲದೆ ಹೇಳಿಕೆ ಗಳನ್ನು ದಾಖಲೆಗಳಿಂದ ತೆಗೆದು ಹಾಕಲಾಗಿದೆ.
ಲೋಕಸಭೆಯಲ್ಲಿ “ಚಂದ್ರಯಾನದ ಯಶಸ್ಸು” ಕುರಿತು ಚರ್ಚೆಯ ಸಂದರ್ಭದಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಬಿಎಸ್ ಪಿ ಸಂಸದ ಡ್ಯಾನಿಶ್ ಅಲಿ ಅವರ ವಿರುದ್ಧ ರಮೇಶ್ ಬಿಧುರಿ ಬಳಸಿದ ಆಕ್ಷೇಪಾರ್ಹ ಪದಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಇಂತಹ ವರ್ತನೆಯನ್ನು ಪುನರಾವರ್ತಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಸ್ಪೀಕರ್ ಬಿಧುರಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಪಕ್ಷಗಳ ನಾಯಕರು ಬಿಜೆಪಿ ಸಂಸದರನ್ನು ತರಾಟೆಗೆ ತೆಗೆದುಕೊಂಡಿದ್ದು, ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಇದೆ ವೇಳೆ ರಕ್ಷಣ ಸಚಿವ ರಾಜನಾಥ್ ಸಿಂಗ್ ಸ್ವಲ್ಪ ಸಮಯದ ನಂತರ ಸದನದಲ್ಲಿ ವಿಷಾದವನ್ನೂ ವ್ಯಕ್ತಪಡಿಸಿದ್ದಾರೆ. “ಟೀಕೆಗಳಿಂದ ಪ್ರತಿಪಕ್ಷಗಳಿಗೆ ನೋವಾಗಿದ್ದರೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ” ಎಂದು ರಕ್ಷಣಾ ಸಚಿವರು ಹೇಳಿದ್ದಾರೆ. ಕ್ಷಮೆಯಾಚನೆ ಸಾಕಾಗುವುದಿಲ್ಲ, ಬಿಧುರಿ ಅವರನ್ನು ಅಮಾನತುಗೊಳಿಸಬೇಕು ಅಥವಾ ಬಂಧಿಸಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸಿವೆ.
“ಇದು ಸಂಪೂರ್ಣ ನಾಚಿಕೆಗೇಡಿನ ಸಂಗತಿ. ರಾಜನಾಥ್ ಸಿಂಗ್ ಅವರ ಕ್ಷಮೆಯಾಚನೆ ಸ್ವೀಕಾರಾರ್ಹವಲ್ಲ ಮತ್ತು ಅರೆಮನಸ್ಸಿನದು. ಇದು ಸಂಸತ್ತಿಗೆ ಮಾಡಿದ ಅವಮಾನ, ಬಿಧುರಿ ಹೇಳಿಕೆ ಪ್ರತಿಯೊಬ್ಬ ಭಾರತೀಯನಿಗೂ ಅವಮಾನವಾಗಿದೆ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಆಕ್ರೋಶ ಹೊರ ಹಾಕಿ ಬಿಜೆಪಿ ನಾಯಕನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಈ ಹಿಂದೆ ಸಂಸತ್ತಿನ ಹೊರಗೆ ದ್ವೇಷಪೂರಿತ ಭಾಷಣಗಳನ್ನು ಮಾಡಲಾಗಿತ್ತು, ಆದರೆ ನಿನ್ನೆ ಸಂಸತ್ತಿನ ಒಳಗೆ, ಲೋಕಸಭೆಯ ನೆಲದ ಮೇಲೆ ಬಿಜೆಪಿ ಸಂಸದರೊಬ್ಬರು ದ್ವೇಷದ ಭಾಷಣ ಮಾಡಿದ್ದಾರೆ ಎಂದು ಡ್ಯಾನಿಶ್ ಅಲಿ ಅವರು ಪ್ರತಿಕ್ರಿಯಿಸಿದ್ದಾರೆ.
ಡ್ಯಾನಿಶ್ ಅಲಿ ವಿರುದ್ಧ ಅಸಂಸದೀಯ ಪದಗಳನ್ನು ಬಳಸಿದ್ದಕ್ಕಾಗಿ ಬಿಧುರಿ ಅವರಿಗೆ ಬಿಜೆಪಿ ಶುಕ್ರವಾರ ಶೋಕಾಸ್ ನೋಟಿಸ್ ನೀಡಿದೆ. ಡ್ಯಾನಿಶ್ ಅಲಿ ವಿರುದ್ಧ ಬಿಧುರಿ ಅವರು ‘ಉಗ್ರವಾದಿ’ ಸೇರಿ ಕೆಲ ಅಸಂಸದೀಯ ಪದಗಳನ್ನು ಬಳಸಿದ್ದರು.