Advertisement
ಎಲ್ಲಿದೆ?ಬಾಲಿ ದ್ವೀಪದ ಬಾಡುಂಗ್ ರೀಜೆನ್ಸಿಯ ಕುಟ ಜಿಲ್ಲೆಯ ಪೆಕಾಟು ಗ್ರಾಮದಲ್ಲಿದೆ. ಕುಟದಿಂದ ದಕ್ಷಿಣಕ್ಕೆ ಸುಮಾರು ಇಪ್ಪತೈದು ಕಿಮೀ ದೂರದಲ್ಲಿದ್ದು ದಾರಿ ಕಿರಿದಾಗಿದ್ದು ದಟ್ಟಣೆಯಿಂದ ಕೂಡಿರುತ್ತದೆ. ಹೀಗಾಗಿ, ಒಂದು ತಾಸಿನ ಪಯಣ. ಪ್ರಮುಖ ಸ್ಥಳವಾದರೂ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಿಲ್ಲ.ಹೀಗಾಗಿ ಬಾಡಿಗೆ ವಾಹನ ಮಾಡಿಕೊಳ್ಳುವುದು ಅನಿವಾರ್ಯ. ಬೆಳಿಗ್ಗೆ ಒಂಬತ್ತರಿಂದ ಸಂಜೆ ಆರರವರೆಗೆ ಪ್ರವಾಸಿಗರು ಸಂದರ್ಶಿಸಬಹುದು.ಬಾಲಿಯ ಯಾವುದೇ ದೇಗುಲ ಪ್ರವೇಶಿಸಬೇಕಾದರೂ ಕಾಲು ಮುಚ್ಚುವ ಸರೊಂಗ್ ಮತ್ತು ಪಟ್ಟಿ ಕಡ್ಡಾಯ. ಪ್ರವೇಶ ಧನ ಸುಮಾರು 700 ರೂ.
ಪುರ (ದೇಗುಲ), ಲುಹುರ್ ( ದೈವಿಕ), ಉಲು (ಭೂಮಿಯ ತುದಿ), ವಾಟು (ಬಂಡೆ) ಹೀಗೆ ಹೆಸರೇ ಸೂಚಿಸುವ ಹಾಗೆ ಬಾಲಿಯ ದಕ್ಷಿಣ ಭೂಭಾಗದ ತುದಿಯಲ್ಲಿ ಸಮುದ್ರ ಮಟ್ಟದಿಂದ 70 ಮೀ. ಎತ್ತರದ ಕಡಿದಾದ ಬಂಡೆಯ ಮೇಲಿರುವ ದೈವಿಕ ಶಕ್ತಿಯುಳ್ಳ ಈ ದೇಗುಲ ಪವಿತ್ರವಷ್ಟೇ ಅಲ್ಲ, ರುದ್ರ ರಮಣೀಯವೂ ಹೌದು.ಒಂಬತ್ತನೆಯ ಶತಮಾನದಲ್ಲಿ ರಾಜ ಮರಕತನ ಆಳ್ವಿಕೆಯಲ್ಲಿ ಜಾವಾದ ಮುನಿ ಎಂಪು ಕುಟುರಾನ್ ಕಟ್ಟಿಸಿದ ಎಂದು ಅನೇಕರ ಅಭಿಪ್ರಾಯ. ಸ್ಥಳೀಯರ ಪ್ರಕಾರ ಜಾವಾದ ಮಜಾಪಾಹಿತ್ ಪ್ರಾಂತ್ಯದ ಯೋಗಿ ದಾಂಗ್ ಹ್ಯಾಂಗ್ ನಿರರ್ಥ ಈ ದೇವಾಲಯ ನಿರ್ಮಾಣಕ್ಕೆ ಕಾರಣಕರ್ತ. ವಾನರ ಸೇನೆ
ದೇಗುಲಕ್ಕೆ ಹೋಗುವ ದಾರಿಯಲ್ಲಿ ಚಿಕ್ಕ ಅರಣ್ಯವಿದ್ದು ಅಲ್ಲಿ ನೂರಾರು ಮಂಗಗಳಿವೆ.ಕೆಟ್ಟ ಶಕ್ತಿಗಳನ್ನು ನಿಗ್ರಹಿಸುವಲ್ಲಿ ಇವುಗಳು ಪಾತ್ರ ವಹಿಸುತ್ತವೆ ಎಂದು ಜನ ನಂಬಿದ್ದಾರೆ. ಹೀಗಾಗಿ ಇವುಗಳಿಗೆ ವಿಶೇಷ ಸ್ಥಾನಮಾನ. ಎತ್ತರದಲ್ಲಿರುವ ಬಂಡೆಯ ಮೇಲಿನ ದೇಗುಲಕ್ಕೆ ಹೋಗಲು ದಾರಿ ಕಡಿದಾಗಿದ್ದು ಅಂಕುಡೊಂಕಾಗಿದೆ. ಆದರೆ, ಅಲ್ಲಲ್ಲಿ ಮೆಟ್ಟಿಲುಗಳನ್ನು ಮಾಡಿದ್ದು ಉದ್ದಕ್ಕೂ ಭದ್ರವಾದ ತಡೆಗೋಡೆ ನಿರ್ಮಿಸಲಾಗಿದೆ. ದಾರಿ ಮಧ್ಯೆ ವಿಶ್ರಮಿಸಲು ಅಲ್ಲಲ್ಲಿ ಅಟ್ಟಣಿಗೆ ಕಟ್ಟಲಾಗಿದ್ದು ಆಯಾಸ ಪರಿಹರಿಸಿಕೊಳ್ಳುತ್ತಲೇ ಸುತ್ತಲಿನ ಪ್ರಕೃತಿ ಸೌಂದರ್ಯ ಸವಿಯಬಹುದು. ದೇಗುಲ ಮುಟ್ಟಲು ಕಾಲ್ನಡಿಗೆಯಲ್ಲಿ ಸುಮಾರು ಒಂದು ತಾಸಿನ ದಾರಿ.
Related Articles
Advertisement
ಕೆಚಕ್ ನೃತ್ಯಉಲುವಾಟುವಿನಲ್ಲಿ ಕೇಚಕ್ ನೃತ್ಯ ನೋಡಲು ಸೂಕ್ತ ಸ್ಥಳ. “ತರಿ ಕೇಚಕ್’ ಎಂಬುದು ವಿಶಿಷ್ಟವಾದ ಸಾಂಪ್ರದಾಯಿಕ ಬಾಲಿಯ ನೃತ್ಯ. ಇದು ಪ್ರವಾಸಿಗರಲ್ಲಿ ಮಂಕಿ ಚಾಂಟ್ ಡಾನ್ಸ್ ಎಂದೇ ಜನಪ್ರಿಯವಾಗಿದೆ. ನೃತ್ಯ ಅಂದೊಡನೆ ದೃಶ್ಯ ಶ್ರವ್ಯ ಮಾಧ್ಯಮವಾಗಿರುವುದರಿಂದ ಸಂಗೀತ ಮತ್ತು ಇತರ ಸಾಧನಗಳ ಬಳಕೆ ಸಾಮಾನ್ಯ. ಆದರೆ ಈ ನೃತ್ಯದಲ್ಲಿ ಪುರುಷ ಪಾತ್ರಧಾರಿಗಳ “ಕೇ ಚಕ್’ ಎಂಬ ವಿವಿಧ ಗತಿ ಲಯಗಳ, ಏರಿಳಿತದ ದನಿಯ ಹಿನ್ನೆಲೆ ಮಾತ್ರ ಇರುತ್ತದೆ. ಹೀಗೆ ಬರೀ ಕೇಚಕ್ ಎಂಬ ಶಬ್ದದ ಹಿನ್ನೆಲೆಯಲ್ಲಿ ಒಂದು ಗಂಟೆಯ ನೃತ್ಯ ರೂಪಕ ನಡೆಯುತ್ತದೆ. ಸಾಮಾನ್ಯವಾಗಿ ನೂರಕ್ಕೂ ಹೆಚ್ಚು ಪುರುಷ ಪಾತ್ರಧಾರಿಗಳು ಮತ್ತು ಒಂದೆರಡು ಸ್ತ್ರೀಪಾತ್ರಗಳು ಇರುತ್ತವೆ. ರಾಮಾಯಣದ ಆಯ್ದ ವಿವಿಧ ಭಾಗಗಳನ್ನು ಅಭಿನಯಿಸಲಾಗುತ್ತದೆ. ರಾಮ, ಸೀತಾ, ರಾವಣ, ಲಕ್ಷ್ಮಣ, ಹನುಮಾನ್ ಮತ್ತು ಸುಗ್ರೀವ ಮುಖ್ಯ ಪಾತ್ರಗಳು. ರಾಮ ವನವಾಸಕ್ಕೆ ಹೊರಡುವದರೊಂದಿಗೆ ಆರಂಭವಾಗಿ ರಾವಣ ದಹನದಲ್ಲಿ ಕೊನೆಯಾಗುತ್ತದೆ. ನೃತ್ಯದ ಕೊನೆಯಲ್ಲಿ ಮಧ್ಯದಲ್ಲಿ ದೊಡ್ಡ ಬೆಂಕಿಯನ್ನು ಹಾಕಿ ನರ್ತಿಸುವುದರಿಂದ ಇದಕ್ಕೆ “ಬೆಂಕಿ ನೃತ್ಯ’ ಎಂದೂ ಕರೆಯುತ್ತಾರೆ. “ಕೇಚಕ್’ ಎಂದರೆ ಮಂಗಗಳ ಮಾಡುವ ಸದ್ದು , ಆ ಶಬ್ದವೇ ಪ್ರಧಾನವಾದ ಕಾರಣ ನೃತ್ಯಕ್ಕೂ ಆ ಹೆಸರು! ಮೂಲ
ಈ ನೃತ್ಯದ ಮೂಲ ಪ್ರಾಚೀನ ಬಾಲಿನೀಸ್ ವಿಧಿ ಸಂಘಾÂಂಗ್‌ನಲ್ಲಿದೆ. ಇದರಲ್ಲಿ ಭೂತೋಚ್ಚಾಟನೆಗೆ ಮಾಡಲಾಗುತ್ತಿದ್ದ ಈ ನೃತ್ಯದಲ್ಲಿ ಪಾತ್ರಧಾರಿಗಳು ಒಂದು ಬಗೆಯ ಸಮೂಹ ವಶೀಕರಣಕ್ಕೆ ಒಳಗಾದವರಂತೆ ವರ್ತಿಸುತ್ತಿದ್ದರು. ಕೆಲವು ಬಾರಿ ಇಡೀ ರಾತ್ರಿ,ವಾರಗಳ ಕಾಲ ಇದು ದೇಗುಲಗಳ ಒಳಗೆ ನಡೆಯುತ್ತಿತ್ತು. 1930 ರಲ್ಲಿ ವಾಲ್ಟರ್ ಸ್ಪೆçಸ್ ಎಂಬ ಜರ್ಮನ್ ಕಲಾವಿದ ಬಾಲಿಯ ವಯಾನ್ ಲಿಂಬಕ್ ಜತೆ ಸೇರಿ ಈ ವಿಧಿಗೆ ಪ್ರದರ್ಶನಕ್ಕಾಗಿ ಹೊಸ ರಂಗರೂಪ ನೀಡಿದ. ಸಂಜೆ ಆರುಗಂಟೆಗೆ ಉಲುವಾಟುವಿನ ಹೊರ ಅಂಗಳದಲ್ಲಿ ಇರುವ ಬಯಲು ರಂಗಮಂದಿರದಲ್ಲಿ ದಿನವೂ ನೃತ್ಯಪ್ರದರ್ಶನ ಇರುತ್ತದೆ. ಕೆ. ಎಸ್. ಚೈತ್ರಾ