Advertisement

ಭರತನಾಟ್ಯದಲ್ಲಿ ರಾಮಾಯಣದ ಘಟನಾವಳಿ 

06:00 AM May 18, 2018 | Team Udayavani |

ಪುತ್ತೂರಿನ ಜನತೆಗೆ ಕಲೆಯ ರಸದೌತಣ ನೀಡುತ್ತಾ ಬಂದಿರುವ ಸಂಸ್ಥೆಗಳಲ್ಲಿ ಮೂಕಾಂಬಿಕಾ ಕಲ್ಚರಲ್‌ ಅಕಾಡೆಮಿ(ರಿ.)ಯೂ ಒಂದು. ಈ ಸಂಸ್ಥೆಯು “ನೃತ್ಯಾಂತರಂಗ’ ಎಂಬ ಸರಣಿ ಕಾರ್ಯಕ್ರಮದ ಮೂಲಕ ಹಲವಾರು ನೃತ್ಯಪಟುಗಳಿಗೆ ಅವಕಾಶವನ್ನು ನೀಡುತ್ತಾ ಬಂದಿದೆ. ಈ ಕಾರ್ಯಕ್ರಮದ 42 ನೇ ಸರಣಿಯಲ್ಲಿ ರಾಮಾಯಣದ ಸನ್ನಿವೇಶಗಳ ರಸದೌತಣವನ್ನು ವಿ| ಬಿ. ದೀಪಕ್‌ ಕುಮಾರ್‌ ಹಾಗೂ ಅವರ ಪತ್ನಿ ಪ್ರೀತಿಕಲಾ ಉಣಬಡಿಸಿದ್ದಾರೆ.

Advertisement

    ನೃತ್ಯವು ವಿಶ್ವಾಮಿತ್ರ ಮಹರ್ಷಿಗಳ ಹೋಮಕ್ಕೆ ಯಾವುದೇ ಲೋಪ ಉಂಟಾಗದಂತೆ ರಾಮ ಕಾವಲಾಗಿ ನಿಂತು, ಅಹಲೆಗೆ ಜೀವ ತುಂಬುವ ಸನ್ನಿವೇಶದೊಂದಿಗೆ ಪ್ರಾರಂಭವಾಯಿತು. ಇಲ್ಲಿ ರಾಮನ ಶಾಂತತೆ, ಅಹಲೆಯ ಭಕ್ತಿಯನ್ನು ತಮ್ಮ ಅಭಿನಯದ ಮೂಲಕ ತೋರಿಸಿದರು.

ಸೀತಾಕಲ್ಯಾಣದಲ್ಲಿ ರಾಮನು ಶಿವಧನುಸ್ಸನ್ನು ಮುರಿದು ಸೀತೆಯನ್ನು ವಿವಾಹವಾದ ಕಥೆಯನ್ನು ಅಭಿನಯಿಸಿದರು. ನಂತರ ಮಂಥರೆಯು ಕೈಕೇಯಿಗೆ ರಾಮನನ್ನು ವನವಾಸಕ್ಕೆ ಕಳುಹಿಸಿ, ಭರತನಿಗೆ ಪಟ್ಟಾಭಿಷೇಕ ಮಾಡುವ ಮೋಸದ ಸಲಹೆ ನೀಡಿ ಆಕೆ ಈ ವರವನ್ನು ದಶರಥನಲ್ಲಿ ಪಡೆದ ರೀತಿ ಮತ್ತು ದಶರಥನ ದುಃಖವನ್ನು ಕಣ್ತುಂಬಿ ಬರುವಂತೆ ಅಭಿನಯಿಸಿದರು.

ಚಿತ್ರಕೂಟದ ಕಥೆಯನ್ನು ಭರತ ರಾಮನಿಗೆ ದಶರಥನ ಮರಣದ ವಾರ್ತೆಯನ್ನು ತಿಳಿಸಿ ರಾಜ್ಯಕ್ಕೆ ಬಾ ಎಂದು ಕರೆಯುವುದು, ಅದರಲ್ಲಿ ಸಫ‌ಲನಾಗದೆ ರಾಮನ ಪಾದುಕೆಯನ್ನು ತೆಗೆದುಕೊಂಡು ಹೋಗುವ ಭಾತೃತ್ವದ ಸನ್ನಿವೇಶವನ್ನು ಸೊಗಸಾಗಿ ಮೂಡಿಬಂತು.  ಕೊನೆಯಲ್ಲಿ ಸೀತಾಪಹರಣ, ಲಂಕಾದಹನ, ರಾವಣನ ವಿನಾಶವನ್ನು ಮತ್ತು ಈ ವಿನಾಶ ಕಾರ್ಯದಲ್ಲಿ ಹನುಮಂತ ಹಾಗೂ ಅವನ ಸೈನ್ಯದ ಸಹಾಯ ಹಸ್ತವನ್ನು ಅಚ್ಚುಕಟ್ಟಾಗಿ ಅಭಿನಯಿಸಿ ಮನಗೆದ್ದರು. 

ಈ ಎಲ್ಲಾ ಸನ್ನಿವೇಶಗಳ ನಡುವೆ ಜತಿಗಳೂ ಒಳಗೊಂಡಿದ್ದು ಎಲ್ಲಿಯೂ ಸುಸ್ತು ಅಥವಾ ಅರೆಮಂಡಿ ಕಡಿಮೆಯಾದದ್ದು ಕಂಡುಬಂದಿಲ್ಲ. ಒಟ್ಟಾರೆಯಾಗಿ ಕಥೆ ಹಾಗೂ ಅಭಿನಯ ಜತಿಗಳನ್ನೊಳಗೊಂಡ ಈ ರಾಮಾಯಣ ಕಥಾವಸ್ತುವಿನ ಪ್ರಸ್ತುತಿ ಉತ್ತಮವಾಗಿತ್ತು.

Advertisement

 ನಿಶಿತಾ 

Advertisement

Udayavani is now on Telegram. Click here to join our channel and stay updated with the latest news.

Next