ಬೆಂಗಳೂರು: ಡಾ| ಪರಮೇಶ್ವರ್ ರಾಜೀನಾಮೆಯಿಂದ ತೆರವಾಗಿದ್ದ ಗೃಹ ಖಾತೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಅರಣ್ಯ ಸಚಿವ ರಮಾನಾಥ ರೈ ಅವರಿಗೆ ನೀಡಲು ಸಿಎಂ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ.
ಮಂಗಳವಾರ ಈ ಸಂಬಂಧ ಸಚಿವ ರಮಾನಾಥ ರೈ ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡ ಮುಖ್ಯ
ಮಂತ್ರಿ ಗೃಹ ಖಾತೆಯ ಜವಾಬ್ದಾರಿ ನೀಡುವ ಕುರಿತಂತೆ ಅವರೊಂದಿಗೆ ಚರ್ಚಿಸಿದರು. ಅಷ್ಟೇ ಅಲ್ಲ ಹೈ ಕಮಾಂಡ್ ಸೂಚನೆಯನ್ನೂ ರೈ ಅವರಿಗೆ ಮನವರಿಕೆ ಮಾಡಿಕೊಟ್ಟರು. ಚರ್ಚೆಯ ಬಳಿಕ ರಮಾನಾಥ ರೈ ಗೃಹ ಖಾತೆಯ ಜವಾಬ್ದಾರಿ ಹೊರಲು ಸಹಮತಿ ವ್ಯಕ್ತಪಡಿಸಿದ್ದಾರೆ ಎಂದು ಸಿಎಂ ಆಪ್ತ ಮೂಲಗಳು ತಿಳಿಸಿವೆ.
ಕೆಪಿಸಿಸಿ ಅಧ್ಯಕ್ಷ ಡಾ| ಪರಮೇಶ್ವರ್ ರಾಜೀನಾಮೆಯಿಂದ ತೆರವಾಗಿದ್ದ ಗೃಹ ಖಾತೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಬಳಿಯೇ ಇಟ್ಟುಕೊಂಡಿದ್ದರು. ಈ ನಡುವೆ ಬಿ.ಸಿ. ರೋಡ್‌ನಲ್ಲಿ ಕೋಮು ಗಲಭೆ ಸೃಷ್ಟಿಯಾಗಿ ಸ್ವತಂತ್ರ ಗೃಹ ಸಚಿವರು ಇಲ್ಲದಿರುವುದೂ ಕೂಡ ಖಾತೆಯ ವೈಫಲ್ಯಕ್ಕೆ ಕಾರಣ ವಾಗಿತ್ತು ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ, ಸಿಎಂ ಸಿದ್ದರಾಮಯ್ಯ ಗೃಹ ಖಾತೆಯ ಜವಾಬ್ದಾರಿನೀಡಲು ಎಲ್ಲ ಹಿರಿಯ ಸಚಿವರಿಗೂ ಕೋರಿಕೊಂಡಿದ್ದರು. ಆದರೆ, ಬಹುತೇಕ ಸಚಿವರು ಗೃಹ ಇಲಾಖೆ ಜವಾಬ್ದಾರಿ ಹೊರಲು ಹಿಂದೇಟು ಹಾಕಿದ್ದರು.
ರಮಾನಾಥ ರೈ ಕೂಡ ಮಂಗಳೂರು ಗಲಭೆ ಅನಂತರವೂ ಜವಾಬ್ದಾರಿ ಹೊತ್ತು ಕೊಳ್ಳಲು ಹಿಂದೇಟು ಹಾಕಿದ್ದರೂ ಸಿಎಂ ಸಿದ್ದರಾಮಯ್ಯ ಮತ್ತೆ ಅವರನ್ನೇ ಜವಾಬ್ದಾರಿ ಹೊತ್ತುಕೊಳ್ಳು ವಂತೆ ಸೂಚಿಸಿರುವುದರಿಂದ ರೈ ವಿಧಿಯಿಲ್ಲದೇ ಗೃಹ ಇಲಾಖೆಯ ಜವಾಬ್ದಾರಿ ಹೊರಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ರಮಾನಾಥ ರೈ ಈಗಾಗಲೇ ಸಚಿವರಾಗಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇಲಾಖೆ ಜವಾಬ್ದಾರಿ ನೀಡಿರುವ ಕುರಿತು ರಾಜ್ಯಪಾಲರಿಗೆ ಪತ್ರದ ಮೂಲಕ ಶಿಫಾರಸು ಮಾಡಿದರೆ, ರಾಜ್ಯಪಾಲರು ಅಧಿಕೃತ ಆದೇಶ ಮಾಡುವ ಮೂಲಕ ನೇಮಕ ಮಾಡುತ್ತಾರೆ. ಬುಧವಾರ ಸಚಿವ ಸಂಪುಟ ಸಭೆಯ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ರಮಾನಾಥ ರೈಗೆ ಗೃಹ ಇಲಾಖೆಯ ಖಾತೆ ವಹಿಸಿ ರಾಜ್ಯಪಾಲರಿಗೆ ಶಿಫಾರಸು ಮಾಡುವ ಸಂಭವ ಇದೆ. ರಾಜ್ಯಪಾಲರು ಒಪ್ಪಿ ಆದೇಶ ಹೊರಡಿಸಿದ ಅನಂತರ ಗೃಹ ಸಚಿವರಾಗಿ ಅಧಿಕೃತ ಅಧಿಕಾರ ಸ್ವೀಕರಿಸಲಿದ್ದಾರೆ.