ಕನಕಪುರ: ದ್ವಿಚಕ್ರ ವಾಹನ ಕಳವು ಮಾಡಲು ಹೊಂಚು ಹಾಕುತ್ತಿದ್ದ ಇಬ್ಬರು ಖದೀಮರನ್ನು ವಶಕ್ಕೆ ಪಡೆದಿರುವ ನಗರ ಠಾಣೆ ಪೊಲೀಸರು ಬಂಧಿತರಿಂದ 6 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನ ಸೋಮನಹಳ್ಳಿಯ ಸೀತಾರಾಮ ಲೇಔಟ್ ನ ಕೇಶವ (ಬಾಬ್ ಕೇಶಿ)ಬಿನ್ ಚೆಲುವರಾಜು (20)ಮತ್ತು ತಾಲೂಕಿನ ಕೋಡಿಹಳ್ಳಿ ಹೋಬಳಿಯ ದೊಡ್ಡ ಕಬ್ಬಳ್ಳಿ ಗ್ರಾಮದ ಪ್ರಶಾಂತ ಬಿನ್ ಆನಂದ್ ರಾಜ್ (19) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.
ದೇವಾಲಯದ ಬಳಿ ಹೊಂಚು: ಕಳೆದ ಜು.12 ರಂದು ನಗರದ ದೊಡ್ಡಿ ಬೀದಿಯ ರಾಮಕೃಷ್ಣ ಅವರಿಗೆ ಸೇರಿದ ದ್ವಿಚಕ್ರ ವಾಹನ ಕಳ್ಳತನವಾಗಿತ್ತು. ಈ ಸಂಬಂಧ ವಾಹನ ಮಾಲೀಕರು ನಗರ ಠಾಣೆಗೆ ದೂರು ನೀಡಿದ್ದರು. ಪ್ರಭಾರ ಸಿಪಿಐ ಅಶೋಕ್‌ಕುಮಾರ್ ಮತ್ತು ಪಿಎಸ್‌ಐ ಲಕ್ಷ್ಮಣ್‌ಗೌಡ ನೇತೃತ್ವದಲ್ಲಿ ತಂಡ ರಚಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಆ.25ರಂದು ನಗರದ ಅಯ್ಯಪ್ಪಸ್ವಾಮಿ ದೇವಾಲಯದ ಬಳಿ ರಾತ್ರಿ 11:30ರಲ್ಲಿ ನಂಬರ್ ಪ್ಲೇಟ್ ಇಲ್ಲದ ದ್ವಿಚಕ್ರ ವಾಹನ ದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರನ್ನು ಚೆಕ್ ಪೋಸ್ಟ್ ಕರ್ತವ್ಯದ ಸಿಬ್ಬಂದಿಗಳು ವಶಕ್ಕೆ ಪಡೆದು ಠಾಣೆಯಲ್ಲಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಪ್ರಕರಣ ಬಯಲಿಗೆ ಬಂದಿದೆ. ನಗರದ ದೊಡ್ಡಿ ಬೀದಿಯಲ್ಲಿ 1, ಖಾಸಗಿ ಬಸ್ ನಿಲ್ದಾಣ ದಲ್ಲಿ 1, ತಾಲೂಕಿನ ಉಯ್ಯಂಬಳ್ಳಿ 1, ದೊಡ್ಡಾಲಹಳ್ಳಿಯಲ್ಲಿ 1 ಹಾಗೂ ಬೆಂಗಳೂರಿನ ಕಗ್ಗಲೀಪು ಠಾಣೆ ವ್ಯಾಪ್ತಿಯಲ್ಲಿ 1,ಕೆಂಗೇರಿ ಉಪನಗರದ 1, ಸೇರಿದಂತೆ ಒಟ್ಟು 6 ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿರುವುದಾಗಿ ಹಾಗೂ ಕಳ್ಳತನ ಮಾಡಿದ ಬೈಕ್‌ಗಳನ್ನು ಮಾರಾಟ ಮಾಡುವ ಉದ್ದೇಶದಿಂದ ತಾಲೂಕಿನ ನಾಯಕನಹಳ್ಳಿ ಮತ್ತು ಬಿಳಿದಾಳೆ ಬಳಿಯ ಅರಣ್ಯ ಪ್ರದೇಶದಲ್ಲಿ ಬಚ್ಚಿಟ್ಟಿರುವುದಾಗಿ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದು, ಪೊಲೀಸರು ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಕಾರ್ಯಾಚರಣೆಯಲ್ಲಿ ನಗರ ಠಾಣೆ ಮತ್ತು ಅಪರಾದ ವಿಭಾಗದ ಸಿಬ್ಬಂದಿಗಳಾದ ದುರ್ಗೆಗೌಡ, ಮುನಿರಾಜು, ಶಿವಶಂಕರ್, ಮಂಜುನಾಥ್, ನವೀನ್‌ಕುಮಾರ್, ಮಹದೇವ ಶೆಟ್ಟಿ ಪಾಲ್ಗೊಂಡಿದ್ದರು.