ರಾಮನಗರ: ಬಿಡದಿ ಪಟ್ಟಣ ವ್ಯಾಪ್ತಿಯಲ್ಲಿ ಸೋಂಕಿತರು ಎಷ್ಟು ಮಂದಿ ಇದ್ದಾರೆ. ಮೃತಪಟ್ಟವರೆಷ್ಟು ಎಂಬ ನಿಖರ ಮಾಹಿತಿ ಕಲೆ ಹಾಕಿ ವರದಿ ಕೊಡುವಂತೆ ಮಾಗಡಿ ಶಾಸಕ ಎ.ಮಂಜುನಾಥ್ ಬಿಡದಿ ಪುರಸಭೆ ಮುಖ್ಯಾಧಿಕಾರಿಗೆ ಸೂಚನೆ ನೀಡಿದರು.
ಬಿಡದಿ ಪಟ್ಟಣದ ಬಸವೇಶ್ವರ ಪ್ರೌಢಶಾಲಾ ಆವರಣದಲ್ಲಿ ಗುರುವಾರ ಕೋವಿಡ್ ಸೋಂಕು ನಿಯಂತ್ರ ಣದ ವಿಚಾರದಲ್ಲಿ ನಡೆದ ಬಿಡದಿ ಪುರಸಭೆ ಅಧಿಕಾರಿಗಳು, ಸದಸ್ಯರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆರೋಗ್ಯ ಇಲಾಖೆ ನೀಡುತ್ತಿರುವ ಸೋಂಕಿತರು, ಮೃತಪಟ್ಟವರ ಸಂಖ್ಯೆ ಮತ್ತು ವಾಸ್ತವ ಸಂಖ್ಯೆಗಳಲ್ಲಿ ಭಾರೀ ವ್ಯತ್ಯಾಸವಿದೆ ಎಂಬ ಆರೋಪಗಳಿವೆ. ಇನ್ನು ಪುರಸಭೆ ವ್ಯಾಪ್ತಿಯಲ್ಲಿ ನಿರ್ಗ ತಿಕರಿಗೆ ಊಟ ಕೊಡಲು ದಾನಿಗಳು ಸಿಗದಿದ್ದರೆ ಪುರಸಭೆಯಿಂದಲೇ ಊಟ ಕೊಡಿ ಎಂದರು.
ಸುಳ್ಳು ಹೇಳುತ್ತಿದೆ: ಪುರಸಭೆ ಸದಸ್ಯ ಬಿ.ಎಂ. ರಮೇಶ್ಕುಮಾರ್ ಮಾತನಾಡಿ, ಕೋವಿಡ್ ಸೋಂಕಿತರ ವಿಚಾರದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಸುಳ್ಳು ಅಂಕಿ ನೀಡಿ ಜನರ ದಾರಿ ತಪ್ಪಿಸುತ್ತಿದ್ದಾರೆ. ಬಿಡದಿ ಪುರಸಭೆ ವ್ಯಾಪ್ತಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 454 ಎಂದು ಹೇಳುತ್ತಿದ್ದಾರೆ.
ವಾಸ್ತವದಲ್ಲಿ ಸೋಂಕಿತರ ಸಂಖ್ಯೆ ಸಾವಿರಾರು ಸಂಖ್ಯೆಯಲ್ಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಿಡದಿ ಭಾಗದ ಸೋಂಕಿತರನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲಿಸುತ್ತಿದ್ದಾರೆ. ಆದರೆ ಅಲ್ಲಿ ಸೂಕ್ತ ಚಿಕಿತ್ಸೆ ದೊರೆ ಯುತ್ತಿಲ್ಲ ಎಂದ ಅವರು, ಸೋಂಕಿತರು ಮತ್ತು ಅವರ ಕುಟುಂಬ ವರ್ಗ ಆರೋಪಿಸುತ್ತಿದೆ ಎಂದು ಸಭೆಯ ಗಮನಕ್ಕೆ ತಂದರು.
100 ಹಾಸಿಗೆ ಕೋವಿಡ್ ಕೇರ್ ಸೆಂಟರ್: ರಾಮನಗರ ತಹಶೀಲ್ದಾರ್ ನರಸಿಂಹಮೂರ್ತಿ ಮಾತನಾಡಿ ಗೊಲ್ಲಹಳ್ಳಿಯಲ್ಲಿ 100 ಹಾಸಿಗೆ ಕೋವಿಡ್ ಕೇರ್ ಕೇಂದ್ರ ಸಿದ್ಧವಾಗಿದೆ. ಅಗತ್ಯ ಬಿದ್ದರೆ ಇನ್ನೂ ಹೆಚ್ಚಿನ ಬೆಡ್ವುಳ್ಳ ಕೇಂದ್ರ ತೆರೆಯಲಾಗುವುದು ಎಂದು ಸಭೆಗೆ ಮಾಹಿತಿ ಕೊಟ್ಟರು. ಸಭೆಯಲ್ಲಿ ಪುರಸಭೆ ಅಧ್ಯಕ್ಷೆ ಸರಸ್ವತಿ ರಮೇಶ್, ಉಪಾಧ್ಯಕ್ಷ ಸಿ.ಲೋಕೇಶ್, ಮುಖ್ಯಾಧಿಕಾರಿ ಆರ್. ರಮೇಶ್, ಬಿಡದಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಾಘವೇಂದ್ರ, ಗ್ರಾಮಾಂತರ ಸಿಪಿಐ ಪ್ರಕಾಶ್, ಪುರಸಭೆ ಸದಸ್ಯರು ಇದ್ದರು.