Advertisement

ರಾಮನಗರ: ಪರಾರಿಯಾಗಲು ಯತ್ನ, ಆರೋಪಿಯ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ ಪೊಲೀಸರು

10:00 AM Mar 14, 2020 | Mithun PG |

ರಾಮನಗರ: ಪೊಲೀಸ್ ಸಿಬ್ಬಂದಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಗೆ ಗುಂಡು ಹಾರಿಸಿದ ಘಟನೆ ಚನ್ನಪಟ್ಟಣ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಚನ್ನಪಟ್ಟಣ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕೆಎಚ್ ಬಿ ಕಾಲೋನಿಯಲ್ಲಿ ಇತ್ತೀಚೆಗೆ ಮನೆಗೆ ನುಗ್ಗಿ  ಸುಲಿಗೆ ಮಾಡಿದ ಘಟನೆ ನಡೆದಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ವಿಶೇಷ ತಂಡಗಳನ್ನು ರಚಿಸಿ, ಡಿಎಸ್ ಪಿ ಓಂ ಪ್ರಕಾಶ್  ನೇತೃತ್ವದಲ್ಲಿ ತನಿಖಾಧಿಕಾರಿ ವಸಂತ ಕುಮಾರ್ ರವರು ಮುಖ್ಯ ಆರೋಪಿ ರಮೇಶ್ ಅಲಿಯಾಸ್ ಜಾಕಿ ಯನ್ನು ವಶಕ್ಕೆ ಪಡೆದು ವಿಚಾರಣೆಗೆ ನಡೆಸಿದ್ದರು.

ದಿನಾಂಕ 12.3.20 ರಂದು ರಾತ್ರಿ ಸುಮಾರು 12.45 ರ ಸಮಯದಲ್ಲಿ ಆರೋಪಿ ರಮೇಶ್ ನನ್ನು ಕರೆದುಕೊಂಡು ತನಿಖಾಧಿಕಾರಿ ಸಿಬಿಐ ವಸಂತ್, ಪಿಎಸ್ ಐ ಪ್ರಕಾಶ್  ಹಾಗೂ ಸಿಬ್ಬಂದಿಗಳು ತನಿಖೆಗೆ ಸಂಬಂಧಪಟ್ಟಂತೆ ಚನ್ನಪಟ್ಟಣ ತಾಲೂಕು ಚಿಕ್ಕಮಳೂರು ಗ್ರಾಮಕ್ಕೆ ಹೋಗುತ್ತಿರುವಾಗ, ಆರೋಪಿಯು ಪೊಲೀಸ್ ವಶದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಹಿಡಿಯಲು ಹೋದ ಹೆಡ್ ಕಾನ್ಸಟೆಬಲ್ ನಾಗರಾಜ್ ಅವರ ಮೇಲೆ ಆರೋಪಿ ರಮೇಶ್ ಮಾರಣಾಂತಿಕ ಹಲ್ಲೆ ಮಾಡಲು ಯತ್ನಿಸಿದ್ದರಿಂದ, ಪ್ರಾಣ ರಕ್ಷಣೆಗಾಗಿ ಸಿಪಿಐ ವಸಂತ್ ಕುಮಾರ್ ರವರು ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ. ಹಲ್ಲೆಗೆ ಒಳಗಾದ ಹೆಡ್ ಕಾನ್ಸಟೆಬಲ್ ನಾಗರಾಜ್ ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸದ್ಯ ಕಾಲಿಗೆ ಗಾಯಗೊಂಡ ಆರೋಪಿಯು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಈ ಘಟನೆಗೆ ಸಂಬಂಧಿಸಿದಂತೆ ಚನ್ನಪಟ್ಟಣ ನಗರ ಠಾಣೆಯಲ್ಲಿ ಪ್ರಕರಣ ಸಂಖ್ಯೆ 39/20 ರಲ್ಲಿ ಸೆಕ್ಷನ್ 307, 353, 332 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.ಆರೋಪಿ ರಮೇಶ್ ಅಲಿಯಾಸ್ ಜಾಕಿ ವಿರುದ್ದ ಬೆಂಗಳೂರು ನಗರ, ಶಿವಮೊಗ್ಗ, ಬಂಟ್ವಾಳ ಸೇರಿದಂತೆ ಕೊಲೆ, ಸುಲಿಗೆ ಮತ್ತಿತರ 15 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ  ಎಂದು ಪೊಲೀಸರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next