Advertisement
ಕರ್ನಾಟಕ ಮಾತ್ರವಲ್ಲದೇ ಸಮೀಪದ ಕೇರಳ, ತಮಿಳುನಾಡಿನಲ್ಲಿ ನಕ್ಸಲ್ ಚಟುವಟಿಕೆಯಲ್ಲಿ ಸಕ್ರಿಯನಾಗಿದ್ದ. ಮೂರು ಬಾರಿ ಕರ್ನಾಟಕದ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದ ಈತ ಸುಮಾರು 20 ಪ್ರಕರಣಗಳಲ್ಲಿ ದಿ ಮೋಸ್ಟ್ ವಾಂಟೆಡ್ ಆಗಿದ್ದ.
ವಿಕ್ರಂ ಗೌಡ ಕಳೆದ 21 ವರ್ಷಗಳಿಂದ ನಕ್ಸಲೈಟ್ ಆಗಿ ಗುರುತಿಸಿಕೊಂಡು ಪೊಲೀಸರಿಗೆ ತಲೆ ನೋವಾ ಗಿದ್ದ. ಸಾಕೇತ್ ರಾಜನ್ನಿಂದ ನಕ್ಸಲರ ಕಾರ್ಯ ಚಟುವಟಿಕೆ ಕುರಿತಂತೆ ತರಬೇತಿ ಪಡೆದಿದ್ದ. ರಾಜ್ಯದೊಳಗೆ, ಅನ್ಯ ರಾಜ್ಯಗಳಲ್ಲಿ ತಲೆಮರೆಸಿ ಕೊಂಡು ಅಡ್ಡಾಡುತ್ತಿದ್ದ. 2016ರಲ್ಲಿ ಕೇರಳದ ನೀಲಾಂಬುರ್ ಅರಣ್ಯದಲ್ಲಿ ಅಲ್ಲಿನ ಪೊಲೀಸ್ ಇಲಾಖೆಯ “ಥಂಡರ್ ಬೋಲ್ಟ್’ ಪಡೆಯ ಜತೆಗೆ ನಕ್ಸಲರು ಗುಂಡಿನ ಚಕಮಕಿ ನಡೆಸಿದ್ದು, ಇಬ್ಬರು ನಕ್ಸಲರು ಹತರಾಗಿದ್ದರು. ವಿಕ್ರಂ ಗೌಡ ಮಾತ್ರ ತಲೆಮರೆಸಿಕೊಂಡಿದ್ದ. ಕೇರಳದಲ್ಲಿ ಚಟುವಟಿಕೆಗಳನ್ನು ನಡೆಸಿದ್ದ ವಿಕ್ರಂಗೌಡ ಆ ಬಳಿಕ ಕರ್ನಾಟಕಕ್ಕೆ ಆಗಮಿಸಿ ತಳವೂರುವ ಪ್ರಯತ್ನ ನಡೆಸಿದ್ದ. ಪಶ್ಚಿಮ ಘಟ್ಟ ತಪ್ಪಲಿನ ಕೊಡಗು, ದ.ಕ., ಕೇರಳ ತ್ರಿಜಂಕ್ಷನ್ಗಳಲ್ಲಿ ಸಂಗಡಿಗರೊಂದಿಗೆ ನಿರಂತರ ಓಡಾಡುತ್ತಿದ್ದ. ನಾಲ್ಕು ತಿಂಗಳ ಹಿಂದೆ ದ.ಕ.-ಕೊಡಗು ಗಡಿಭಾಗದಲ್ಲಿ ಆಗಾಗ್ಗೆ ಕಾಣಿಸಿ ಕೊಂಡು ಚುರುಕಾಗಿದ್ದ. ಬಳಿಕದ ದಿನ ಗಳಲ್ಲಿ ಚಿಕ್ಕ ಮಗಳೂರು, ಉಡುಪಿಯ ಕಾಡಂಚಿನ ಭಾಗಗಳಲ್ಲಿ ಓಡಾಟ ನಡೆಸಿ ಸಂಚಲನ ಮೂಡಿಸಿದ್ದ.
Related Articles
ಸಾಕೇತ್ ರಾಜನ್ ಕಾಲದಲ್ಲಿ ನಕ್ಸಲ್ ಚಟುವಟಿಕೆಗಳು ಉತ್ತುಂಗದಲ್ಲಿದ್ದವು. 2005ರ ಫೆ. 5ರಂದು ಮೆಣಸಿನ ಹಾಡ್ಯದಲ್ಲಿ ಸಾಕೇತ್ನನ್ನು ಎಎನ್ಎಫ್ ಪಡೆಯವರು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಸಾಕೇತ್ ಜತೆಗಿದ್ದ ವಿಕ್ರಂ ಗೌಡ ತಪ್ಪಿಸಿಕೊಂಡಿದ್ದ. ಬಳಿಕ ವಿಕ್ರಂ ಸ್ವತಃ ತಂಡವನ್ನು ಮುನ್ನಡೆಸಿದ್ದ. ತನ್ನ ನಾಯಕನ ಸಾವಿಗೆ ಪ್ರತೀಕಾರ ತೀರಿಸುವ ಸಂಕಲ್ಪ ತೊಟ್ಟಿದ್ದ. ಕೇರಳ, ಕರ್ನಾಟಕದ ಕಾಡು-ಗುಡ್ಡಗಳಲ್ಲಿ ಅಲೆದಾಡುತ್ತ ಹೊಂಚುಹಾಕುತ್ತಿದ್ದ. ಆದರೆ ತನ್ನ ನಾಯಕನ ಹಾದಿಯಲ್ಲೇ ಸಾಗಿ ಆತನಂತೆಯೇ ಪೊಲೀಸರ ಬಂದೂಕಿಗೆ ಪ್ರಾಣ ತೆತ್ತಿದ್ದಾನೆ.
Advertisement
ಯಾವತ್ತಾದರೂ ಸಾಯಲೇಬೇಕು ಎಂದಿದ್ದಮಾರ್ಚ್ನಲ್ಲಿ ದ.ಕ., ಕೊಡಗು ಭಾಗಕ್ಕೆ ನಕ್ಸಲರು ಭೇಟಿ ನೀಡಿದ್ದ ವೇಳೆ ಸುಬ್ರಹ್ಮಣ್ಯ ಸಮೀಪದ ಐನಕಿದುವಿನ ಪ್ರಗತಿಪರ ಕೃಷಿಕರ ಮನೆಗೆ ನಾಲ್ವರು ನಕ್ಸಲರು ಭೇಟಿ ನೀಡಿದ್ದರು. ಆಗ ಮನೆಯ ಯಜಮಾನನ ಜತೆ ಮೃದುವಾಗಿ ಮಾತನಾಡಿದ್ದ ವಿಕ್ರಂ ಗೌಡ ತನ್ನ ಹೋರಾಟದ ಉದ್ದೇಶಗಳನ್ನು ಹೇಳಿ ಮನವೊಲಿಸಲು ಪ್ರಯತ್ನಿಸಿದ್ದ. ಅನ್ಯಾಯದ ವಿರುದ್ಧದ ಹೋರಾಟ ನಮ್ಮದು. ಬಡವರಿಗೆ ನ್ಯಾಯ ಕೊಡಿಸಲು ಚಳವಳಿ ನಡೆಸುತ್ತಿದ್ದೇವೆ. ನಮ್ಮನ್ನು ಬೆಂಬಲಿಸಿ, ಯಾವತ್ತಾದರೂ ಸಾಯಲೇ ಬೇಕಲ್ಲವೇ ಎಂದಿದ್ದ. ಈ ಭಾಗಕ್ಕೆ ಭೇಟಿ ನೀಡಿದಾಗೆಲ್ಲ ಆತ ನಿರ್ಭೀತಿಯಿಂದ ಇರುತ್ತಿದ್ದ ಎನ್ನುತ್ತಾರೆ ಆತನನ್ನು ಕಂಡವರು. ಎತ್ತ ಕಡೆ ತೆರಳಿರಬಹುದು?
ಎನ್ಕೌಂಟರ್ ಬಳಿಕ ಮೂವರು ನಕ್ಸಲರು ಕಾಡು ದಾರಿಯಲ್ಲಿ ಸುರಕ್ಷಿತ ಪ್ರದೇಶಗಳಿಗೆ ಪರಾರಿಯಾಗಿರುವ ಸಾಧ್ಯತೆಯಿದೆ. ಎನ್ಕೌಂಟರ್ ನಡೆದ ಸ್ಥಳದಿಂದ ಶೃಂಗೇರಿ, ಕುದುರೆಮುಖ ಮಾರ್ಗವಾಗಿ ಚಿಕ್ಕಮಗಳೂರು ಭಾಗಕ್ಕೆ, ಇನ್ನೊಂದು ಮಾರ್ಗ ಬೆಳ್ತಂಗಡಿ, ಶಿರಾಡಿ, ಗುಂಡ್ಯ ಮೂಲಕ ಸುಬ್ರಹ್ಮಣ್ಯ ಕಡೆ ತೆರಳಿ ಅಲ್ಲಿಂದ ಕೊಡಗು, ಕೇರಳ ಭಾಗಕ್ಕೆ ಪರಾರಿಯಾಗಲು ಅನುಕೂಲಕರವಾಗಿದೆ. ಈ ಮಾರ್ಗದಲ್ಲಿ ತೆರಳಿರುವ ಸಾಧ್ಯತೆಯಿದೆ. ತಂಡದಲ್ಲಿ ನಾಲ್ವರು ಇದ್ದರು
ನ. 18ರ ರಾತ್ರಿ ಹೆಬ್ರಿಯ ಪೀತಬೈಲಿನಲ್ಲಿ ನಕ್ಸಲ್ ಕಮಾಂಡರ್ ವಿಕ್ರಂ ಗೌಡ ಹತ್ಯೆಯಾದ ವೇಳೆ ತಂಡದಲ್ಲಿ ನಾಲ್ವರು ನಕ್ಸಲರು ಇದ್ದ ಬಗ್ಗೆ ಪೊಲೀಸ್ ತನಿಖೆಯಲ್ಲಿ ಕಂಡುಬಂದಿದೆ. ಅವರಲ್ಲಿ ಸುಂದರಿ ಮತ್ತು ವನಜಾಕ್ಷಿ ಗಾಯ ಗೊಂಡಿದ್ದಾರೆ ಎನ್ನಲಾಗುತ್ತಿದ್ದು, ಇನ್ನೋರ್ವ ಕೇರಳ ಮೂಲದ ನಕ್ಸಲ್ ಜಯಣ್ಣ ಎಂದು ತಿಳಿದು ಬಂದಿದೆ. ವಿಕ್ರಂ ತಂಡದ ಮುಂಚೂಣಿ ನಾಯಕಿ ಲತಾ ಮುಂಡುಗಾರು ತಂಡದಲ್ಲಿದ್ದಳು ಎನ್ನಲಾಗಿತ್ತಾದರೂ ಅದಿನ್ನೂ ಖಚಿತವಾಗಿಲ್ಲ. ವಿಕ್ರಂನ ಅನಂತರದ ತಂಡದ ಪ್ರಭಾವಿ ನಕ್ಸಲ್ ನಾಯಕಿ ಲತಾ ಮುಂಡುಗಾರು ಕಾಯಿಲೆಯಿಂದಲೂ ಬಳಲುತ್ತಿದ್ದಾಳೆ. ತಡರಾತ್ರಿವರೆಗೂ ನಡೆಯದ ಮರಣೋತ್ತರ ಪರೀಕ್ಷೆ
ಮಣಿಪಾಲ: ಹೆಬ್ರಿಯ ಕಾಡಿನಲ್ಲಿ ಪೊಲೀಸರ ಎನ್ಕೌಂಟರ್ನಲ್ಲಿ ಮೃತಪಟ್ಟ ನಕ್ಸಲ್ ನಾಯಕ ವಿಕ್ರಂ ಗೌಡನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಗಳವಾರ ಮಣಿಪಾಲದ ಕೆಎಂಸಿ ಶವ ಪರೀಕ್ಷಾಗಾರಕ್ಕೆ ತರಲಾಗಿದೆ. ತಡರಾತ್ರಿಯವರೆಗೂ ಮರಣೋತ್ತರ ಪರೀಕ್ಷೆ ನಡೆಯಲಿಲ್ಲ. ಸಂಜೆ ಸುಮಾರು 5 ಗಂಟೆಯ ವೇಳೆ ಪೊಲೀಸ್ ಭದ್ರತೆಯಲ್ಲಿ ಆ್ಯಂಬುಲೆನ್ಸ್ನಲ್ಲಿ ಮೃತ ದೇಹ ವನ್ನು ತರಲಾಯಿತು. ಆದರೆ ಮೃತರ ಮನೆ ಮಂದಿ ಬಾರದ ಕಾರಣ ಪಂಚನಾಮೆ ನಡೆಸಲು ಸಾಧ್ಯವಾಗಿಲ್ಲ. ತಡರಾತ್ರಿಯವರೆಗೂ ಮೃತದೇಹ ವನ್ನು ಪೊಲೀಸರ ಭದ್ರತೆಯಲ್ಲಿ ಪರೀಕ್ಷಾ ಕೇಂದ್ರ ದೊಳಗೆ ಇರಿಸಲಾಗಿತ್ತು. ಬುಧವಾರ ಬೆಳಗ್ಗೆ ಮರಣೋ ತ್ತರ ಪರೀಕ್ಷೆ ನಡೆಯುವ ಸಾಧ್ಯತೆಗಳಿವೆ. ಇಂದು ಪ್ರಣವ್ ಮೊಹಂತಿ ಭೇಟಿ
ಎನ್ಕೌಂಟರ್ ನಡೆದ ಸ್ಥಳಕ್ಕೆ ಬುಧವಾರ ಆಂತರಿಕ ಭದ್ರತ ವಿಭಾಗದ ಡಿಜಿಪಿ ಪ್ರಣವ್ ಮೊಹಂತಿ ಭೇಟಿ ನೀಡಲಿದ್ದಾರೆ. ಘಟನೆ ನಡೆದ ಪರಿಸರ ಹಾಗೂ ಹೆಬ್ರಿ ಭಾಗದಲ್ಲಿ ಮಂಗಳವಾರ ಹೆಚ್ಚುವರಿ ಪೊಲೀಸರು ಹಾಗೂ ಎಎನ್ಎಫ್ ಸಿಬಂದಿಯನ್ನು ನಿಯೋಜಿಸಲಾಗಿತ್ತು.