Advertisement

ಚಂದ್ರಶೇಖರ್  ನಡೆಗೆ ತಲ್ಲಣಿಸಿದ ಬಿಜೆಪಿ

12:04 PM Nov 02, 2018 | |

ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿ ಎಂದೇ ಬಿಂಬಿತವಾಗಿರುವ ಐದು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಲ್‌.ಚಂದ್ರಶೇಖರ್‌ ಕಣದಿಂದ ಹಿಂದೆ ಸರಿಯುವ ಮೂಲಕ ಬಿಜೆಪಿಗೆ ದೊಡ್ಡ ಶಾಕ್‌ ನೀಡಿದ್ದಾರೆ. ರಾಷ್ಟ್ರೀಯ ಪಕ್ಷದ ಅಭ್ಯರ್ಥಿಯೊಬ್ಬರು ಚುನಾವಣೆಯಿಂದ ಹಿಂದೆ ಸರಿದು ವಿರೋಧಿ ಪಾಳಯಕ್ಕೆ ಸೇರಿರುವುದು ಉಪ ಚುನಾವಣೆಯ ಲೆಕ್ಕಾಚಾರವನ್ನೇ ಬದಲಾಯಿಸಿದೆ. ಈ ಬೆಳವಣಿಗೆ ಬಿಜೆಪಿಗೆ ಆಘಾತ ಉಂಟು ಮಾಡಿದ್ದರೆ, ಕಾಂಗ್ರೆಸ್‌-ಜೆಡಿಎಸ್‌ ನಾಯಕರ ಸಂತಸಕ್ಕೆ ಕಾರಣವಾಗಿದೆ. ಈ ಬಗ್ಗೆ ಪರ-ವಿರೋಧ ಹೇಳಿಕೆಗಳು, ಟೀಕೆ-ಪ್ರತಿ ಟೀಕೆಗಳು ಕೇಳಿ ಬರುತ್ತಿವೆ.

Advertisement

ಯಾರದೋ ಮಾತು ಕೇಳಿ ಬಿಜೆಪಿ ಸೇರಿದ್ದರು: ಸಚಿವ ಡಿ.ಕೆ.ಶಿವಕುಮಾರ್‌
ಬಳ್ಳಾರಿ: “ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್‌ ಕಣದಿಂದ ಹಿಂದೆ ಸರಿದಿರುವ ಬಗ್ಗೆ ನನಗೆ ಮಾಹಿತಿಯಿಲ್ಲ. ಕಡತವೊಂದಕ್ಕೆ ಸಹಿ ಹಾಕುವ ಸಲುವಾಗಿ ನಾನು ಬೆಂಗಳೂರಿಗೆ ಹೋಗಿದ್ದೆ ಅಷ್ಟೇ. ನನಗೂ, ಇದಕ್ಕೂ ಯಾವುದೇ ಸಂಬಂಧವಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್‌ ಸ್ಪಷ್ಟಪಡಿಸಿದರು. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಂದ್ರಶೇಖರ್‌ ಹಿಂದೆರಿದಿರುವುದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಚಂದ್ರಶೇಖರ್‌ ನಮ್ಮ ಪಕ್ಷದ ಹುಡುಗ. ಹಿಂದೆ ಸಿದ್ದರಾಮಯ್ಯ ಶಿಫಾರಸು ಮಾಡಿದ್ದ ಹಿನ್ನೆಲೆಯಲ್ಲಿ ಚಂದ್ರಶೇಖರ್‌ಗೆ ಪಕ್ಷದಲ್ಲಿ ಮೆಂಬರ್‌ ಮಾಡಲಾಗಿತ್ತು. ಇದೀಗ ಯಾರದೋ ಮಾತು ಕೇಳಿ ಬಿಜೆಪಿ ಸೇರಿರಾಮನಗರ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಸ್ಪರ್ಧೆಯಿಂದ ಏಕೆ ಹಿಂದೆ ಸರಿದಿದ್ದಾನೋ ಗೊತ್ತಿಲ್ಲ ಎಂದರು.

ಇದು ಹೇಡಿತನದ ಕೆಲಸ:ಲಿಂಗಪ್ಪ
ಬಳ್ಳಾರಿ: ಬಿಜೆಪಿ ಸೇರಬೇಡ ಎಂದು ನಾನು ಆಗಲೇ ಹೇಳಿದ್ದೆ. ಚುನಾವಣೆ ಬಳಿಕ ಮುಂದಿನ ನಿರ್ಣಯ ಕೈಗೊಳ್ಳಬಹುದಾಗಿತ್ತು. ಮತದಾನಕ್ಕೆ ಇನ್ನೆರಡು ದಿನಗಳಿರುವಾಗಈ ರೀತಿ ಚುನಾವಣೆಯಿಂದ ಹಿಂದೆ ಸರಿಯುವುದು ಹೇಡಿತನದ ಕೆಲಸ ಎನ್ನುವಮೂಲಕ ರಾಮನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್‌ ಅವರ ತಂದೆ ಹಾಗೂ ವಿಧಾನ ಪರಿಷತ್‌ ಸದಸ್ಯ ಸಿ. ಎಂ.ಲಿಂಗಪ್ಪ ಮಗನ ವರ್ತನೆ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, “ನಾನು ಮತ್ತು ನನ್ನ ಪತ್ನಿ ಇಬ್ಬರೂ ಬಿಜೆಪಿ ಸೇರಬೇಡ ಎಂದು ಹೇಳಿದ್ದೆವು. ಸೇರಲ್ಲಎಂದು ಒಪ್ಪಿಕೊಂಡಿದ್ದ ಚಂದ್ರಶೇಖರ್‌, ಬಳಿಕ ಬಿಜೆಪಿ ಸೇರಿದ್ದಾನೆ. ಅದೇ ನನ್ನ ಕೊನೆ ಮಾತು. ಮತ್ತೆ ಏನನ್ನೂ ಹೇಳಿರಲಿಲ್ಲ. 20 ವರ್ಷದ ಮಕ್ಕಳೇ ನಮ್ಮಮಾತು ಕೇಳದಿರುವಾಗ ಇವನು ಕೇಳುತ್ತಾನಾ’ ಎಂದರು. ಕಳೆದ 50 ವರ್ಷಗಳಿಂದ ಕಾಂಗ್ರೆಸ್‌ನಲ್ಲಿ ನಿಷ್ಠೆಯಿಂದ ದುಡಿಯುತ್ತಿದ್ದೇನೆ. ಬಳ್ಳಾರಿಯಲ್ಲಿ ವಿ.ಎಸ್‌.ಉಗ್ರಪ್ಪ ಪರ ಪ್ರಚಾರ ಮಾಡುತ್ತಿದ್ದೇನೆ. ನನ್ನ ಮಗ ಚುನಾವಣೆಯಿಂದ ಹಿಂದೆ ಸರಿದಿರುವುದರಹಿಂದೆ ಸಚಿವ ಡಿ.ಕೆ.ಶಿವಕುಮಾರ್‌ ಅವರ ಪಾತ್ರ ಏನು ಎಂಬುದು ನನಗೆ ಗೊತ್ತಿಲ್ಲಎಂದು ಸ್ಪಷ್ಟಪಡಿಸಿದರು.

ಅದಕ್ಕೂ ನಮಗೂ ಸಂಬಂಧವಿಲ್ಲ: ದೇವೇಗೌಡ
ನಾಗಮಂಗಲ: ಬಿಜೆಪಿ ಅಭ್ಯರ್ಥಿ ಕಣದಿಂದ ನಿವೃತ್ತಿ ಪಡೆದಿರುವುದಕ್ಕೂ, ನಮಗೂ ಯಾವುದೇ ಸಂಬಂಧವಿಲ್ಲ. ಅಷ್ಟೊಂದು ಕೀಳುಮಟ್ಟಕ್ಕಿಳಿದು ರಾಜಕಾರಣ ಮಾಡುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹೇಳಿದರು. ನಗರದಲ್ಲಿ ಮಾತನಾಡಿ, ನಾವುಯಾವೊಬ್ಬ ಬಿಜೆಪಿ ಮುಖಂಡರನ್ನೂ ಇಲ್ಲಿಯವರೆಗೆ ಸಂಪರ್ಕಿಸಿಲ್ಲ.
ರಾಮನಗರದಲ್ಲಿ ಮೈತ್ರಿಕೂಟದ ಅಭ್ಯರ್ಥಿ ದುರ್ಬಲರಾಗಿಲ್ಲ. ಗೆಲ್ಲುವ ಅಭ್ಯರ್ಥಿಯನ್ನೇ ಕಣಕ್ಕಿಳಿಸಿದ್ದೇವೆ. ಬಿಜೆಪಿ ಅಭ್ಯರ್ಥಿಯನ್ನು ಕಣದಿಂದ ಹಿಂದೆ ಸರಿಸುವಷ್ಟು ಕೆಳಮಟ್ಟದ ರಾಜಕಾರಣ ಮಾಡೋಲ್ಲ. ಅದರ ಹಿಂದೆ
ಏನಿದೆ ಎನ್ನುವುದೂ ನನಗೆ ಗೊತ್ತಿಲ್ಲ ಎಂದರು.

ಹಣದ ಆಮಿಷಕ್ಕೆ ಬಲಿಯಾಗಿ ಕಣದಿಂದ ಹಿಂದಕ್ಕೆ: ಆರ್‌.ಅಶೋಕ್‌
ಮಂಡ್ಯ: ಚುನಾವಣೆಗೆ ಎರಡು ದಿನವಿರುವಾಗ ರಾಮನಗರದಲ್ಲಿ ಚಂದ್ರಶೇಖರ್‌ ಕಣದಿಂದ ಹಿಂದೆ ಸರಿಯುವ ಮೂಲಕ ಪಕ್ಷದ್ರೋಹವೆಸಗಿದ್ದಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್‌. ಅಶೋಕ್‌ ಆರೋಪಿಸಿ ದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ನಾಯಕರು ಯಾರೂ ಪ್ರಚಾರಕ್ಕೆ ಬರಲಿಲ್ಲವೆನ್ನುವುದು ಸುಳ್ಳು ಆಪಾದನೆ. ಕೇಂದ್ರ ಸಚಿವ ಸದಾನಂದಗೌಡರನ್ನು ರಾಮನಗರ ಜಿಲ್ಲಾ ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ. ಮಾಜಿ ಸಚಿವರಾದ ಸಿ.ಪಿ.ಯೋಗೇಶ್ವರ್‌, ಕೆ.ಸುರೇಶ್‌ ಕುಮಾರ್‌, ವಿಧಾನಪರಿಷತ್‌ ಮಾಜಿ ಸದಸ್ಯ ಅಶ್ವತ್ಥ ನಾರಾಯಣ ಸೇರಿದಂತೆ ಹಲವು ನಾಯಕರು ರಾಮನಗರದಲ್ಲೇ ಠಿಕಾಣಿ ಹೂಡಿ ಪ್ರಚಾರ ನಡೆಸುತ್ತಿದ್ದಾರೆ. ನಾನುಸತ್ತರೂ ಜೆಡಿಎಸ್‌ಗೆ ಮತ ನೀಡುವುದಿಲ್ಲ ಎಂದು ವಿಧಾನಪರಿಷತ್‌ ಸದಸ್ಯ ಸಿ.ಎಂ.ಲಿಂಗಪ್ಪ ಹೇಳಿದ್ದರು. ಇದೀಗ ಅವರ ಪುತ್ರ ಚುನಾವಣೆಯ ಅಂತಿಮ ಘಳಿಗೆಯಲ್ಲಿ ಹಣದ ಆಮಿಷಕ್ಕೆಒಳಗಾಗಿ ಕಾಂಗ್ರೆಸ್‌ ಸೇರಿಕೊಂಡಿದ್ದಾರೆ ಎಂದರು. 

Advertisement

ಪಕ್ಷೇತರ ಅಭ್ಯರ್ಥಿಯೊಬ್ಬರಿಗೆ ಬಿಜೆಪಿ ಬೆಂಬಲ: ಬಿಎಸ್‌ವೈ
ಸಾಗರ: ಪಕ್ಷದ ಅಭ್ಯರ್ಥಿ ಹಿಂದೆ ಸರಿದು ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿರುವುದು ನಮಗೆ ಅನಿರೀಕ್ಷಿತವಲ್ಲ.
ಈ ಬಗ್ಗೆ ನಮಗೆ ಹಲವು ದಿನಗಳಿಂದ ಮಾಹಿತಿಯಿತ್ತು. ಈ ಕ್ಷೇತ್ರದಲ್ಲಿ ಬಿಜೆಪಿ ಪಕ್ಷೇತರ ಅಭ್ಯರ್ಥಿಯೋರ್ವರನ್ನು ಬೆಂಬಲಿಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ತಿಳಿಸಿದರು. ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿಯಿಂದ ಬಿ-ಫಾರಂ ಕೊಟ್ಟ ನಂತರ ಅಭ್ಯರ್ಥಿಯ ಚಲನವಲನದ ಬಗ್ಗೆ ಮಾಹಿತಿ ಲಭ್ಯವಾಗತೊಡಗಿತು. ನಾವು ಆ ಅಭ್ಯರ್ಥಿ ಪರ ಕರಪತ್ರಗಳನ್ನು ಕೂಡಮುದ್ರಿಸಿದ್ದೆವು. ಆದರೆ, ಈ ಬಗ್ಗೆ ಮಾಹಿತಿ ಇರುವ ಕಾರಣದಿಂದ ಉಪ ಚುನಾವಣೆ ನಡೆಯುತ್ತಿರುವ ರಾಜ್ಯದ ಉಳಿದ 4 ಕ್ಷೇತ್ರಗಳಲ್ಲಿ ಎರಡೆರಡು ಬಾರಿ ಪ್ರಚಾರಕ್ಕೆ ತೆರಳಿದ್ದ ನಾನು ರಾಮನಗರಕ್ಕೆ ಹೋಗಿರಲಿಲ್ಲ. ಈ ರೀತಿಯ ರಾಜಕೀಯ ಕುತಂತ್ರ ಮಾಡುವುದರಲ್ಲಿ ಜೆಡಿಎಸ್‌ನವರು ನಿಪುಣರು. ಆ ಕ್ಷೇತ್ರದ ಬಿಜೆಪಿ ಉಸ್ತುವಾರಿಯಾಗಿದ್ದ ಸದಾನಂದ ಗೌಡರು, ಅಭ್ಯರ್ಥಿ ಹಣದ ಆಮಿಷಕ್ಕೆ ಸಿಲುಕಿ ಹೈಜಾಕ್‌ ಆಗುವ ಬಗ್ಗೆ ಮಾಹಿತಿ ನೀಡಿದ್ದರು. ಆ ಮಾಹಿತಿ ಈಗ ನಿಜವಾಗಿದೆ ಎಂದರು.

ರಾಮನಗರದಲ್ಲಿ ಭುಗಿಲೆದ್ದ ಕಾರ್ಯಕರ್ತರ ಆಕ್ರೋಶ
ರಾಮನಗರ: ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಲ್‌.ಚಂದ್ರಶೇಖರ್‌ ತಾವು ಕಣದಿಂದ ಹಿಂದೆ ಸರಿದಿದ್ದು, ಮಾತೃ ಪಕ್ಷ ಕಾಂಗ್ರೆಸ್‌ಗೆ ಮರು ಸೇರ್ಪಡೆ ಆಗಿರುವುದಾಗಿ ಬೆಂಗಳೂರಿನಲ್ಲಿ ಹೇಳಿಕೆ ನೀಡುತ್ತಿದ್ದಂತೆ ಇತ್ತ ರಾಮನಗರ ಬಿಜೆಪಿಯಲ್ಲಿ ಆಕ್ರೋಶದ ಕಿಚ್ಚು ಸ್ಫೋಟವಾಗಿದೆ. ಅವರ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು, ಜಿಲ್ಲಾ ಬಿಜೆಪಿ ಕಚೇರಿ ಎದುರು ಚಂದ್ರಶೇಖರ್‌ ಪ್ರತಿಕೃತಿಯ ಅಣಕು ಶವಯಾತ್ರೆ ನಡೆಸಿದರು. “ನೀನು ಮತ್ತೆ ಹುಟ್ಟಿ ಬರಬೇಡ’ ಎಂದು ಘೋಷಣೆ ಕೂಗಿದರು. ಚಂದ್ರಶೇಖರ್‌ ಅವರ ಭಾವಚಿತ್ರಕ್ಕೆ ಚಪ್ಪಲಿಯಲ್ಲಿ ಹೊಡೆದು ಆಕ್ರೋಶ ವ್ಯಕ್ತಪಡಿಸಿದರು.ಅಲ್ಲದೆ, ಪಕ್ಷದ ಪರ ಪ್ರಚಾರ ಮುಂದುವರಿಸಿ,ಮತದಾರರಬಳಿ ತಮ್ಮ ನೋವು ತೋಡಿಕೊಳ್ಳುವುದಾಗಿಕಾರ್ಯಕರ್ತರು ತಿಳಿಸಿದ್ದಾರೆ.

ರಾಜ್ಯದಲ್ಲಿ ಆಪರೇಷನ್‌ ಕಮಲ ಆರಂಭಿಸಿದ್ದೇ ಬಿಜೆಪಿ. ಚಂದ್ರಶೇಖರ ಮತ್ತು ಅವರ ತಂದೆ ಕಾಂಗ್ರೆಸ್‌ನವರು. ಆದರೆ, ಬಿಜೆಪಿ ಅವರನ್ನು ಕರೆದುಕೊಂಡು ಅಭ್ಯರ್ಥಿ ಮಾಡಿದ್ದರು. ಅವರು ಬಿಜೆಪಿಗೆ ಹೋಗಿದ್ದೇ ತಪ್ಪು. ಅಲ್ಲಿ ಬಿಜೆಪಿಗೆ ಅಸ್ತಿತ್ವವೇ ಇಲ್ಲ. ಹೀಗಾಗಿ ಚಂದ್ರಶೇಖರ ಚುನಾವಣೆ ಕಣದಿಂದ ಹಿಂದೆ ಸರಿದಿದ್ದಾರೆ. ಬಿಜೆಪಿಗೆ ಈಗ ಮಾಡಿದ್ದುಣ್ಣೋ ಮಾರಾಯ ಎಂಬ ಸ್ಥಿತಿ ಎದುರಾಗಿದೆ.
ಸಿದ್ದರಾಮಯ್ಯ, ಮಾಜಿ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next