Advertisement

ಇಂದಿರಾ ಕ್ಯಾಂಟೀನ್‌ ಹೆಸರು ಬದಲಿಸಿದರೆ ಪರಿಣಾಮ ನೆಟ್ಟಗಿರಲ್ಲ : ರಾಮಲಿಂಗಾರೆಡ್ಡಿ ಎಚ್ಚರಿಕೆ

07:34 PM Aug 10, 2021 | Team Udayavani |

ಬೆಂಗಳೂರು: ಇಂದಿರಾ ಕ್ಯಾಂಟೀನ್‌ ಹೆಸರು ಬದಲಿಸಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಹಾಗೂ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್‌ ಎಚ್ಚರಿಕೆ ನೀಡಿದ್ದಾರೆ.

Advertisement

ವಿಧಾನಸೌಧದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಇಂದಿರಾ ಗಾಂಧಿ ಹೆಸರು ಬದಲಿಸಬೇಕು ಸಿ.ಟಿ ರವಿ ಟ್ವೀಟ್‌ ಮಾಡಿದ್ದು, ಅದಕ್ಕೆ ನಮ್ಮ ಪಕ್ಷದಿಂದ ಹೋದವರು ಬೆಂಬಲಿಸಿದ್ದಾರೆ. ಇದೊಂದು ಹೀನ ರಾಜಕೀಯ ಕೃತ್ಯವಾಗುತ್ತದೆ ಎಂದು ಹೇಳಿದರು.

ಬಿಜೆಪಿಯವರು ಯಾರದಾದರೂ ಹೆಸರು ಇಡಬೇಕು ಎಂದುಕೊಂಡಿದ್ದರೆ ಇನ್ನು ಉತ್ತಮವಾದ ದೊಡ್ಡ ಯೋಜನೆ ತಂದು ಅದಕ್ಕೆ ಅವರಿಗೆ ಬೇಕಾದ ಹೆಸರು ಇಡಲಿ. ಆದರೆ, ಇಂದಿರಾ ಗಾಂಧಿ ಅವರ ಹೆಸರು ತೆಗೆದು ಬೇರೆ ಹೆಸರಿಡುತ್ತೇವೆ ಎಂದು ಹೇಳಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ತಿಳಿಸಿದರು.

ಬಿಜೆಪಿಯವರು ಅಟಲ್‌ ಸಾರಿಗೆ, ದೀನದಯಾಳ್‌ ಉಪಾಧ್ಯಾಯ ಹೆಸರು ಯಶವಂತಪುರ ಫ್ಲೆ„ಓವರ್‌, ಸಾರ್ವಕರ್‌ ಅವರ ಹೆಸರು ಯಲಹಂಕ ಫ್ಲೈ ಓವರ್‌ ಗೆ ಇಡಲಾಗಿದೆ. ಇಂದಿರಾ ಗಾಂಧಿ ಅವರ ಹೆಸರನ್ನು ಬದಲಿಸುವುದಾದರೆ ಇದನ್ನೂ ಕೂಡ ಬದಲಿಸಿ. ನಾವು ಈ ಎಲ್ಲ ಯೋಜನೆ ಹೆಸರುಗಳಿಗೆ ಮಸಿ ಬಳಿಯಬೇಕಾಗುತ್ತದೆ ಎಂದು ಹೇಳಿದರು.

ನರೇಂದ್ರ ಮೋದಿ ಹೆಸರು ಶೌಚಾಲಯಕ್ಕೆ ಇಡಬೇಕು. ಅದೇ ಅವರಿಗೆ ಸೂಕ್ತ. ಬಿಜೆಪಿಯವರು ಕೆಲವು ಯೋಜನೆಗಳಿಗೆ ಶ್ಯಾಂ ಪ್ರಸಾದ್‌ ಮುಖರ್ಜಿ ಅವರ ಹೆಸರಿಟ್ಟಿದ್ದಾರೆ. ಆದರೆ, ಅವರು ಸ್ವಾತಂತ್ರ್ಯ ಹೋರಾಟಕ್ಕಾಗಿ ನಡೆಸಿದ ಕ್ವಿಟ್‌ ಇಂಡಿಯಾ ಚಳುವಳಿ ಹತ್ತಿಕ್ಕಬೇಕು ಎಂದು ಬ್ರಿಟೀಷರಿಗೆ ಪತ್ರ ಬರೆದಿದ್ದರು. ಆರ್‌ ಎಸ್‌ ಎಸ್‌, ಸಂಘ ಪರಿವಾರ, ಬಿಜೆಪಿಯವರು ದೇಶಭಕ್ತಿ ಬಗ್ಗೆ ನಮಗೆ ಕೊಡುವ ಸರ್ಟಿಫಿಕೇಟ್‌ ಬೇಕಾಗಿಲ್ಲ. ಬ್ರಿಟೀಷರ ಏಜೆಂಟ್‌, ಗೂಢಚಾರಿಯಾಗಿದ್ದವರಿಂದ ನಾವು ದೇಶಭಕ್ತಿ ಪಾಠ ಕಲಿಯಬೇಕಾದ ಅಗತ್ಯವಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಸಂಘ ಪರಿವಾರದವರು ಭಾಗವಹಿಸಿದ್ದರೆ ಅವರ ಹೆಸರು ಹೇಳಲಿ ನಾವು ಸಾಯುವವರೆಗೂ ಅವರ ಗುಲಾಮರಾಗಿರುತ್ತೇವೆ ಎಂದು ಸವಾಲು ಹಾಕಿದರು.

Advertisement

ರಾಜೀವ್‌ ಗಾಂಧಿ ಅವರೂ ಕೂಡ ಪ್ರಧಾನಿಯಾಗಿದ್ದವರು. ಅವರೂ ಕೂಡ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಅವರ ಹೆಸರು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ನೀಡುವ ಖೇಲ್‌ ರತ್ನ ಪ್ರಶಸ್ತಿಗೆ ಇಟ್ಟಿದ್ದರು. ಧ್ಯಾನ್‌ ಚಂದ್‌ ಅವರು ವಿಶ್ವ ಕಂಡ ಶ್ರೇಷ್ಠ ಹಾಕಿ ಆಟಗಾರ. ಇದೇ ಕಾರಣಕ್ಕೆ ರಾಜೀವ್‌ಗಾಂಧಿಯವರು ಅವರ ಹೆಸರಿನಲ್ಲಿ ಶ್ರೇಷ್ಠ ಆಟಗಾರನಿಗೆ 5 ಲಕ್ಷ ರೂ. ಪ್ರಶಸ್ತಿ ಸ್ಥಾಪಿಸಿದ್ದರು ಎಂದು ಹೇಳಿದರು.

ಇದನ್ನೂ ಓದಿ :ಬಿಜೆಪಿಗೆ 3,623 ಕೋಟಿ ರೂ. ಆದಾಯ! ಚುನಾವಣಾ ಬಾಂಡ್‌ ಮೂಲಕವೇ 2,555 ಕೋಟಿ ರೂ. ಗಳಿಕೆ

ಕ್ರೀಡಾ ಪ್ರಶಸ್ತಿಗೆ ಕ್ರೀಡಾಪಟುವಿನ ಹೆಸರಿಡುವ ಉದ್ದೇಶ ನಿಜವೇ ಆಗಿದ್ದರೆ, ಗುಜರಾತಿನಲ್ಲಿ ಸರ್ದಾರ್‌ ವಲ್ಲಭಾಯ್‌ ಪಟೇಲ್‌ ಅವರ ಹೆಸರಿನ ಕ್ರಿಕೆಟ್‌ ಕ್ರೀಡಾಂಗಣಕ್ಕೆ ಈಗ ಮೋದಿ ಅವರ ಹೆಸರನ್ನೇ ಇಟ್ಟುಕೊಂಡಿದ್ದಾರೆ. ಹಾಗಾದರೆ ಮೋದಿ ಅವರು ಕ್ರೀಡಾಪಟುವೇ? ಕ್ರಿಕೆಟ್‌ ಆಟಗಾರನಾ? ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಅವರ ಸರ್ಕಾರ ಇದ್ದಾಗ ಇಂದಿರಾ ಕ್ಯಾಂಟೀನ್‌ ನಲ್ಲಿ ಉತ್ತಮ ಗುಣಮಟ್ಟದ ಆಹಾರ ನೀಡಲಾಗುತ್ತಿತ್ತು. ಅದನ್ನು ಉಳಿಸಿಕೊಂಡು ಹೋಗುವುದು ಸರ್ಕಾರದ ಜವಾಬ್ದಾರಿ ಎಂದು ಹೇಳಿದರು.

ನಮ್ಮ ನಾಯಕರು ಸತ್ತ ಮೇಲೆ ನಾವು ಕಾರ್ಯಕ್ರಮಗಳಿಗೆ ಅವರ ಹೆಸರಿಡುತ್ತೇವೆ. ಆದರೆ ಮೋದಿ ಅವರು ಬದುಕಿರುವಾಗಲೇ ಸರ್ದಾರ್‌ ಪಟೇಲ್‌ ಅವರ ಹೆಸರು ತೆಗೆದು ತಮ್ಮ ಹೆಸರನ್ನು ಕ್ರಿಕೆಟ್‌ ಕ್ರೀಡಾಂಗಣಕ್ಕೆ ಇಟ್ಟುಕೊಂಡಿದ್ದಾರೆ. ಇದಕ್ಕೆ ನಮ್ಮ ಅಭ್ಯಂತರವಿಲ್ಲ. ಪಟೇಲ್‌ ಅವರು ಉಕ್ಕಿನ ಮನುಷ್ಯ. ನೀವು ಬೇಕಾದರೆ ಗೋಲ್ಡನ್‌ ಪುರುಷ, ಡೈಮಂಡ್‌ ಪುರುಷ ಅಂತಲೇ ಕರೆಸಿಕೊಳ್ಳಿ. ಆದರೆ ಸರ್ದಾರ್‌ ಪಟೇಲರಂತೆ ನೀವು ಉಕ್ಕಿನ ಮನುಷ್ಯರಾಗಲು ಸಾಧ್ಯವಿಲ್ಲ. ಹೆಸರು ಬದಲಾವಣೆ ಮಾಡುವ ಮೂಲಕ ಬಿಜೆಪಿ ಹೀನ ಕುತಂತ್ರ ನಡೆಸುತ್ತಿದೆ ಎಂದು ದೂರಿದರು. ವಿಧಾನ ಪರಿಷತ್‌ನ ಮುಖ್ಯ ಸಚೇತಕ ನಾರಾಯಣಸ್ವಾಮಿ, ಮಾಜಿ ಮೇಯರ್‌ ರಾಮಚಂದ್ರಪ್ಪ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next