ಬೆಂಗಳೂರು: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿ ಆದಮೇಲೆ ಅಪರಾಧಗಳು ಹೆಚ್ಚಾಗಿದೆ. ವಿಶೇಷವಾಗಿ ದುರ್ಬಲ ವರ್ಗದವರ ಮೇಲೆ ದಾಳಿ ನಡೆಯುತ್ತಿದೆ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಪ್ರದೇಶದಲ್ಲಿ ಮನಿಷಾ ವಾಲ್ಮೀಕಿ ಮೇಲೆ ಅತ್ಯಾಚಾರ ನಡೆದಿದೆ, ಆದರೆ ಅದನ್ನು ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ. ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಸಮಾಧಾನ ಮಾಡಲು ಹೋಗಿದ್ದಾರೆ. ಆದರೆ ಅವರ ಹಲ್ಲೆ ಪ್ರಯತ್ನ ನಡೆದಿದೆ ಎಂದು ಆರೋಪಿಸಿದ್ದಾರೆ.
ಉತ್ತರ ಪ್ರದೇಶ ಸರ್ಕಾರ ರಾಕ್ಷಸಿ ಸರ್ಕಾರವಾಗಿದೆ. ಹಿಟ್ಲರ್ ಪ್ರವೃತ್ತಿ ಆಡಳಿತ ಮತ್ತೆ ಬರುತ್ತಿದೆ. ನಮಗೆ ಸಿಕ್ಕಿರುವ ಸ್ವಾತಂತ್ರ್ಯವೇ ಹೋಗುತ್ತಿರುವ ಭಾವನೆಯಾಗುತ್ತಿದೆ. ಚುನಾವಣಾ ಆಯೋಗ, ಐಟಿ, ಇಡಿ, ಸಿಬಿಐ ಎಲ್ಲವೂ ದುರುಪಯೋಗವಾಗುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ ಎಂದರು.
ಇದನ್ನೂ ಓದಿ:ಆರ್.ಆರ್.ನಗರ ಮಿನಿಫೈಟ್: ಕಾಂಗ್ರೆಸ್ ನಿಂದ ಕುಸುಮಾ ರವಿ ಸೇರಿ ಮೂವರ ಹೆಸರು ಅಂತಿಮ!
ಆರ್.ಆರ್.ನಗರ ಕ್ಷೇತ್ರ ಉಪ ಚುನಾವಣೆ ವಿಚಾರದ ಬಗ್ಗೆ ಮಾತನಾಡಿದ ಅವರು, ನನ್ನ ನೇತೃತ್ವದಲ್ಲೇ ಒಂದು ಸಮಿತಿ ಮಾಡಿದ್ದರು. ಚರ್ಚಿಸಿ ಅಭ್ಯರ್ಥಿ ಆಯ್ಕೆ ಮಾಡುತ್ತೇವೆ. ಮೂರ್ನಾಲ್ಕು ಹೆಸರುಗಳು ಚರ್ಚೆಯಲ್ಲಿವೆ. ಅಧ್ಯಕ್ಷರು ಬಂದ ಮೇಲೆ ನಿರ್ಧಾರ ಮಾಡ್ತೇವೆ ಎಂದರು.