Advertisement

ಪ್ರತಿ ಗ್ರಾಮಕ್ಕೆ ಗ್ರಾಮ ಸೇವಕರ ನೇಮಿಸುವಂತೆ ಗ್ರಾಮಸ್ಥರ ಆಗ್ರಹ

03:10 AM Aug 02, 2017 | Karthik A |

ರಾಮಕುಂಜ ಗ್ರಾಮಸಭೆ

Advertisement

ಕಡಬ: ಪ್ರತೀ ಗ್ರಾಮಗಳಿಗೆ ಗ್ರಾಮಸೇವಕರನ್ನು ನೇಮಕಗೊಳಿಸುವಂತೆ ರಾಮಕುಂಜ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಆಗ್ರಹಿಸಿದ ಹಿನ್ನೆಲೆಯಲ್ಲಿ ಸಂಬಂಧಿಸಿದ ಇಲಾಖೆಗೆ ಪತ್ರ ಬರೆಯಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಗ್ರಾ.ಪಂ. ಅಧ್ಯಕ್ಷ ಪ್ರಶಾಂತ್‌ ಆರ್‌.ಕೆ. ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಭವನದಲ್ಲಿ ಸಭೆ ನಡೆಯಿತು.

ತಾ.ಪಂ.ಯೋಜನಾಧಿಕಾರಿ ಗಣಪತಿ ಭಟ್‌ ಅವರು ಮಾರ್ಗದರ್ಶಿ ಅಧಿಕಾರಿಯಾಗಿದ್ದರು. ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಗ್ರಾಮಸ್ಥ ತೇಜಕುಮಾರ್‌ ರೈ, ಹಿಂದೆ ಪ್ರತೀ ಗ್ರಾಮಗಳಲ್ಲಿ ಗ್ರಾಮಸೇವಕರು ಕಾರ್ಯನಿರ್ವಹಿಸುತ್ತಿದ್ದರು. ಅವರಿಂದ ಜನರಿಗೆ ಕೃಷಿ ಹಾಗೂ ಕಂದಾಯ ಇಲಾಖೆಗೆ ಸಂಬಂಧಿಸಿದ ಮಾರ್ಗದರ್ಶನ ಸಿಗುತ್ತಿತ್ತು. ಆದರೆ ಈಗ ಯಾವ ಗ್ರಾಮಗಳಲ್ಲೂ  ಗ್ರಾಮ ಸೇವಕರಿಲ್ಲ. ಆದ್ದರಿಂದ ಪ್ರತೀ ಗ್ರಾಮಗಳಿಗೂ ಗ್ರಾಮಸೇವಕರ ನೇಮಕ ಆಗಬೇಕೆಂದು ಒತ್ತಾಯಿಸಿದರು. ಇದಕ್ಕೆ  ಪ್ರತಿಕ್ರಿಯಿಸಿದ ಜಿ.ಪಂ. ಸದಸ್ಯ ಸರ್ವೋತ್ತಮ ಗೌಡ, ಕೃಷಿಗೆ ಸಂಬಂಧಿಸಿದ ಮಾಹಿತಿ ಒದಗಿಸಲು ಈಗ ಕೃಷಿ ಸಹಾಯಕರಿದ್ದಾರೆ. ಕೃಷಿ ಸಹಾಯಕರನ್ನು ವಾರದಲ್ಲಿ ಒಂದು ದಿನ ಗ್ರಾ.ಪಂ.ಗೆ ಭೇಟಿ ನೀಡಲು ಕ್ರಮ ಕೈಗೊಳ್ಳುವುದು ಒಳ್ಳೆಯದು ಎಂದರು. ಈ ವೇಳೆ ಮಾತನಾಡಿದ ಪಿಡಿಒ ರವಿಚಂದ್ರ ಅವರು, ವಾರದಲ್ಲಿ 1 ದಿನ ಗ್ರಾ.ಪಂ. ಕಚೇರಿಗೆ  ಭೇಟಿ ನೀಡುವಂತೆ ಕೃಷಿ ಸಹಾಯಕರಿಗೆ ಮನವಿ ಮಾಡುವುದಾಗಿ ಹೇಳಿದರು.

ಮೆಸ್ಕಾಂ ಉಪವಿಭಾಗ ಆಗಲಿ
ಮೆಸ್ಕಾಂಗೆ ಸಂಬಂಧಿಸಿದ ಬಿಲ್‌ನ ಸಮಸ್ಯೆ ಸೇರಿದಂತೆ ಇತರೇ ಸಮಸ್ಯೆಗಳ ಬಗ್ಗೆ ವಿಚಾರಿಸಲು ಪುತ್ತೂರಿಗೆ ಹೋಗಬೇಕಾಗಿದೆ. ಇದರ ಬದಲು ಉಪ್ಪಿನಂಗಡಿಯಲ್ಲಿ ಮೆಸ್ಕಾಂ ಉಪವಿಭಾಗ ಆರಂಭಿಸಲು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥ ಯೋಗೀಶ್‌ ಕುಮಾರ್‌ ಒತ್ತಾಯಿಸಿದರು. ಈ ಬಗ್ಗೆ ಸಂಬಂಧಿಸಿದ ಇಲಾಖೆಗೆ ಮನವಿ ಮಾಡಲು ಸಭೆಯಲ್ಲಿ  ನಿರ್ಣಯಿಸಲಾಯಿತು.

ಅಂಗನವಾಡಿ ಕೇಂದ್ರ ಆರಂಭಿಸಿ
ನೀರಾಜೆಯಲ್ಲಿ ಅಂಗನವಾಡಿ ಕೇಂದ್ರ ತೆರೆಯುವಂತೆ ಕಳೆದ ಮೂರು ಗ್ರಾಮಸಭೆಗಳಲ್ಲಿ ಪ್ರಸ್ತಾವಿಸುತ್ತಿದ್ದೇನೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರೋರ್ವರು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಂಗನವಾಡಿ ವಲಯ ಮೇಲ್ವಿಚಾರಕಿ ಸುಜಾತಾ, ಈ ಬಗ್ಗೆ  ಸರ್ವೆ ಮಾಡಿ ಕಳಿಸಿದ್ದೇವೆ. ಜನಸಂಖ್ಯೆ ಇಲ್ಲದೇ ಇರುವುದರಿಂದ ಮಂಜೂರು ಆಗಿಲ್ಲ. ಕೊಯಿಲದಲ್ಲಿ ಅಂಗನವಾಡಿ ಕೇಂದ್ರವಿದ್ದು ಅಲ್ಲಿಗೆ ಮಕ್ಕಳನ್ನು ಕಳುಹಿಸಲು ಹೆತ್ತವರು ಕ್ರಮ ಕೈಗೊಳ್ಳಬೇಕೆಂದು ಹೇಳಿದರು.

Advertisement

ಹಂದಿಗಳ ನಿಗೂಢ ಸಾವಿನ ವರದಿ ಬಂದಿಲ್ಲ
ಕೊಯಿಲ ಪಶುಸಂಗೋಪನಾ ಇಲಾಖೆ ವ್ಯಾಪ್ತಿಯಲ್ಲಿ ನಿಗೂಢವಾಗಿ ಸಾವನ್ನಪ್ಪಿರುವ ಹಂದಿಗಳ ದೇಹದ ಮಾಂಸ ಹಾಗೂ ಇತರೇ ಭಾಗಗಳನ್ನು ಬೆಂಗಳೂರಿನ ಹೆಬ್ಟಾಳದಲ್ಲಿರುವ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ಇಲ್ಲಿಂದ ವರದಿ ಬಂದ ಬಳಿಕವಷ್ಟೇ ಹಂದಿಗಳ ನಿಗೂಢ ಸಾವಿಗೆ ಸ್ಪಷ್ಟನೆ ಸಿಗಲಿದೆ ಎಂದು ಪಶುವೈದ್ಯಾಧಿಕಾರಿ ಅಶೋಕ್‌ ಕೊಯಿಲ ಹೇಳಿದರು. ಪಶುಸಂಗೋಪನಾ ಇಲಾಖೆಯಲ್ಲಿ ಸಾಕಾಣಿಕೆ ಮಾಡುತ್ತಿದ್ದ ಹಂದಿಗಳೂ ಸಾವಿಗೀಡಾಗಿರುವುದರಿಂದ ವಿಷ ಸೇವನೆಯಿಂದ ಆಗಿರುವ ಸಾವು ಇದಲ್ಲ. ಯಾವುದೋ ಖಾಯಿಲೆಯಿಂದಲೇ ಈ ಸಾವು ಆಗಿರಬಹುದೆಂದು ಅವರು ಹೇಳಿದರು.

ಬಸ್‌ ಆರಂಭಗೊಳ್ಳಲಿ
ಶಾಂತಿಮೊಗರಿನಲ್ಲಿ ಕುಮಾರಧಾರ ನದಿಗೆ ಸೇತುವೆ ನಿರ್ಮಾಣಗೊಂಡಿರುವುದರಿಂದ ಹಳೆನೇರೆಂಕಿಯಿಂದ ಆಲಂಕಾರು, ಶಾಂತಿಮೊಗರು ಮೂಲಕ ಸವಣೂರಿಗೆ ಸರಕಾರಿ ಬಸ್‌ ಆರಂಭಗೊಳ್ಳಲಿ ಎಂದು ಗ್ರಾಮಸ್ಥ  ಜನಾರ್ದನ ಗೌಡ ಬಾಂತೊಟ್ಟು  ಆಗ್ರಹಿಸಿದರು. ಈ ಬಗ್ಗೆ ಇಲಾಖೆಗೆ ಪತ್ರ ಬರೆಯಲು ಸಭೆಯಲ್ಲಿ ನಿರ್ಣಯಿಸಲಾಯಿತು. ಕಬ್ಬಿಣದ ವಿದ್ಯುತ್‌ ಕಂಬಗಳ ಬದಲಾವಣೆ, ನೀರಾಜೆಯಲ್ಲಿ ಅಪಾಯಕಾರಿ ವಿದ್ಯುತ್‌ ತಂತಿಗಳ ಬದಲಾವಣೆ, ಕುಂಡಾಜೆ ಟಿಸಿ ಪಕ್ಕದಲ್ಲಿರುವ ಅಪಾಯಕಾರಿ ಮರಗಳ ತೆರವು ಸೇರಿದಂತೆ ವಿವಿಧ ಬೇಡಿಕೆಗಳನ್ನು ಗ್ರಾಮಸ್ಥರು ಸಲ್ಲಿಸಿದರು.

ಮೆಸ್ಕಾಂ ಜೆಇ ಸುಂದರ್‌, ರೇಷ್ಮೆ ಪ್ರವರ್ತಕ ಆರ್‌.ಎಸ್‌.ನಾಯ್ಕ, ಗ್ರಾಮಕರಣಿಕರಾದ ದೇವಕಿ, ತೋಟಗಾರಿಕೆ ಸಹಾಯಕ ಶ್ರೀಧರ್‌, ಕಿರಿಯ ಇಂಜಿನಿಯರ್‌ ಸಂದೀಪ್‌ ಅವರು ಇಲಾಖಾವಾರು ಮಾಹಿತಿ ನೀಡಿದರು. ಜಿಲ್ಲಾ ಪಂಚಾಯತ್‌ ಸದಸ್ಯ ಸರ್ವೋತ್ತಮ ಗೌಡ, ತಾಲೂಕು ಪಂಚಾಯತ್‌ ಸದಸ್ಯೆಜಯಂತಿ ಆರ್‌. ಗೌಡ, ತೇಜಸ್ವಿನಿ ಶೇಖರ ಗೌಡ, ಗ್ರಾಮ ಪಂಚಾಯತ್‌ ಉಪಾಧ್ಯಕ್ಷೆ ಜಯಂತಿ ನಾಯ್ಕ, ಅಧ್ಯಕ್ಷ  ಪ್ರಶಾಂತ್‌ ಆರ್‌.ಕೆ. ಮಾತನಾಡಿದರು. ಎಪಿಎಂಸಿ ಸದಸ್ಯ ಕೊರಗಪ್ಪ, ಗ್ರಾ.ಪಂ.ಸದಸ್ಯ ಕೇಶವ ಗಾಂಧಿಪೇಟೆ, ಸುಶೀಲಾ ವಿ.ಟಿ., ಪ್ರೇಮಲತಾ, ಜೋಹರಾ ನಝೀರ್‌, ಅಬ್ದುಲ್‌ ರಹಿಮಾನ್‌, ರವಿ ಕೆದಿಲಾಯ, ಯತೀಶ್‌ ಕುಮಾರ್‌, ಜಯಶರೀ ಇರ್ಕಿ, ವಾರಿಜಾ, ಶೀಲಾವತಿ, ಹೊನ್ನಪ್ಪ ಪೂಜಾರಿ, ಅವಿನಾಶ್‌, ಲೀಲಾವತಿ ಪಿ.ಟಿ., ಸದಾನಂದ  ಉಪಸ್ಥಿತರಿದ್ದರು. ಪಿ.ಡಿ.ಒ. ರವಿಚಂದ್ರ ಸ್ವಾಗತಿಸಿ, ಯೋಜನೆಗಳ ಕುರಿತು ಮಾಹಿತಿ ನೀಡಿದರು. ಕಾರ್ಯದರ್ಶಿ ಮರಿಯಮ್ಮ ವಿ.ಎಂ. ವರದಿ ವಾಚಿಸಿದರು.

ರಸ್ತೆ ದುರಸ್ತಿಗೆ ಆಗ್ರಹ
ಕಾಜರೊಕ್ಕುನಿಂದ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿನ ಡಾಮರು ಎದ್ದುಹೋಗಿದ್ದು  ಅಲ್ಲಲ್ಲಿ ಹೊಂಡ ನಿರ್ಮಾಣಗೊಂಡಿದೆ. ಈ ರಸ್ತೆ ಡಾಮರು ಕಾಮಗಾರಿಗೆ ಕ್ರಮ ಕೈಗೊಳ್ಳುವಂತೆ ಮೋನಪ್ಪ ಕುಲಾಲ್‌ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಪ್ರಶಾಂತ್‌ ಆರ್‌.ಕೆ. ಸದ್ರಿ ರಸ್ತೆ ಡಾಮರೀಕರಣಕ್ಕೆ ಅಂದಾಜು ಪಟ್ಟಿ ಮಾಡಿ ಕಳಿಸಿದ್ದೇವೆ ಎಂದರು. ಗ್ರಾ.ಪಂ.ನಿಂದ 5 ಸಾವಿರ ರೂ. ಗಿಂತ ಹೆಚ್ಚು ಅನುದಾನದಲ್ಲಿ ದುರಸ್ತಿಗೆ ಅವಕಾಶವಿಲ್ಲ. ಶ್ರಮದಾನದ ಮೂಲಕ ರಸ್ತೆ ದುರಸ್ತಿಗೊಳಿಸಿದ್ದೇವೆ ಎಂದರು. ಈ ರಸ್ತೆಯಲ್ಲಿ ಕೆಲವೆಡೆ ಚರಂಡಿ ಮುಚ್ಚಲಾಗಿದೆ. ಇದರಿಂದಾಗಿ ನೀರು ರಸ್ತೆಯಲ್ಲಿಯೇ ಹರಿದುಹೋಗಿ ಸಮಸ್ಯೆಯಾಗಿದೆ. ಈ ಬಗ್ಗೆ  ಸಂಬಂಧಪಟ್ಟವರ ಗಮನಕ್ಕೂ ತರಲಾಗಿದೆ ಎಂದು ಸದಸ್ಯ ರವಿಕೆದಿಲಾಯ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next